ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಯೋಗಿ ಮತ್ತು ಹಳ್ಳಿಯ ಕರ್ಮಯೋಗಿ

ರೈತನೊಬ್ಬನ ಬಳಿ ಹೋಗಿ ಯೋಗ ಮಾಡು ಎಂದು ಹೇಳುವ ಸಂದರ್ಭವನ್ನು ನೀವು ಊಹಿಸಿಕೊಳ್ಳಬಲ್ಲಿರಾ?
Last Updated 9 ಜುಲೈ 2018, 19:54 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಕಳೆದ ವರ್ಷ ಕೂಡ ಈ ವರ್ಷ ನಡೆದಂತಹ ಕಾರ್ಯಕ್ರಮಗಳು ನಡೆದಿದ್ದವು. ಕರ್ನಾಟಕದ ಗ್ರಾಮೀಣ ಪ್ರದೇಶಕ್ಕೆ ಸೇರಿದ ಸಚಿವರೊಬ್ಬರು (ಈಗ ಮಾಜಿ) ಭಿನ್ನ ಅನಿಸಿಕೆಯೊಂದನ್ನು ವ್ಯಕ್ತಪಡಿಸಿದರು. ಅವರ ಹೇಳಿಕೆಎಲ್ಲರಲ್ಲೂ ಆಶ್ಚರ್ಯ ಮೂಡಿಸಿತು. ‘ಯೋಗವೆಂಬುದು ಆಲಸಿಗಳಿಗೆ, ಶ್ರೀಮಂತರಿಗೆ ಮತ್ತು ಬೊಜ್ಜು ತುಂಬಿಕೊಂಡವರಿಗೆ ಒಳ್ಳೆಯದು. ಬಡವರಿಗೆ ಯೋಗದ ಅಗತ್ಯ ಇಲ್ಲ. ಬಡವರಿಗೆ ಮಾಡಲು ಸಾಕಷ್ಟು ಕೆಲಸ ಇದೆ’ ಎಂದು ಅವರು ಹೇಳಿದ್ದರು. ಹಲವರು ಈ ಸಚಿವರ ಹೇಳಿಕೆ ಬಗ್ಗೆ ಹಾಸ್ಯ ಮಾಡಿದರು. ಸೆಲೆಬ್ರಿಟಿ ಯೋಗ ಗುರುಗಳು ಸಂಯಮ ಕಳೆದುಕೊಂಡು, ಈ ಸಚಿವರ ಮೇಲೆ ಹರಿಹಾಯ್ದರು.

ಗಂಭೀರವಾಗಿ ಆಲೋಚಿಸಿದರೆ, ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಂಡರೆ ನೀವು ಸಚಿವರು ಹೇಳಿದ್ದನ್ನು ಒಪ್ಪಿಕೊಳ್ಳಬಹುದು. ನಮ್ಮಲ್ಲಿ ಹಲವರು ಅತಿಯಾಗಿ ತಿನ್ನುತ್ತೇವೆ, ಹೊತ್ತಲ್ಲದ ಹೊತ್ತಿನಲ್ಲಿ ತಿನ್ನುತ್ತೇವೆ. ದಿನದ ಬಹುಪಾಲು ಸಮಯವನ್ನು ನಾವು ಕಾರಿನ ಸೀಟಿನಲ್ಲಿ ಕುಳಿತು, ಕಚೇರಿಯ ಕುರ್ಚಿಯಲ್ಲಿ ಕುಳಿತು ಅಥವಾ ಮನೆಯ ಟಿ.ವಿ. ಎದುರು ಕುಳಿತು ಕಳೆಯುತ್ತೇವೆ. ನಾವು ಕುಡಿತ ಕಲಿತಿದ್ದೇವೆ, ಜಂಕ್‌ ಫುಡ್‌ ಸೇವಿಸುತ್ತೇವೆ, ಧೂಮಪಾನ ಮಾಡುತ್ತೇವೆ... ನಮ್ಮ ದೇಹಕ್ಕೆ ಹಿಂಸೆ ಕೊಟ್ಟುಕೊಳ್ಳುತ್ತೇವೆ. ನಾನೊಬ್ಬ ವೈದ್ಯ ಎಂದಾದರೆ, ಕ್ಲಿನಿಕ್‌ನಲ್ಲಿ ಇಡೀ ದಿನ ಒಂದು ಕುರ್ಚಿಯ ಮೇಲೆ ಕುಳಿತುಕೊಂಡಿರಬೇಕಾಗುತ್ತದೆ. ಸರ್ಜನ್‌ ಅಥವಾ ವಕೀಲ ಆಗಿದ್ದರೆ, ಇಡೀ ದಿನ ನಿಂತುಕೊಂಡು ಇರಬೇಕಾಗುತ್ತದೆ. ನಾನು ವ್ಯಾಪಾರಿ ಎಂದಾದರೆ, ಇಡೀ ದಿನ ದುಡ್ಡಿನ ಪೆಟಾರಿ ಮುಂದೆ ಕುಳಿತಿರಬೇಕಾಗುತ್ತದೆ. ನಾನು ಐ.ಟಿ. ತಂತ್ರಜ್ಞ ಆಗಿದ್ದರೆ ಬೇರೆ ಯಾವುದೋ ಗ್ರಹದ ಜೀವಿಯಂತೆ ತಡರಾತ್ರಿಯವರೆಗೂ ಲ್ಯಾಪ್‌ಟಾಪ್‌ ಮುಂದೆ ಕೂತಿದ್ದು, ಮಧ್ಯರಾತ್ರಿಯ ನಂತರ ಪಬ್ಬು–ಬಾರುಗಳಿಗೆ ನುಗ್ಗಿ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಿರುತ್ತೇನೆ. ಅಂದರೆ, ನಾವು ಎಲ್ಲವನ್ನೂ ಅತಿಯಾಗಿ ಮಾಡುತ್ತಿರುತ್ತೇವೆ. ನಮ್ಮೆಲ್ಲ ಆಸೆಗಳನ್ನೂ ಪೂರೈಸುತ್ತಿರುತ್ತೇವೆ. ನಂತರ, ನಮ್ಮಲ್ಲಿ ಪಾಪಪ್ರಜ್ಞೆ ಮೂಡಿ, ದೇಹದಲ್ಲಿನ ವಿಷ ಹೊರಹಾಕಲು ಯೋಗದ ಮೊರೆ ಹೋಗುತ್ತೇವೆ.

ಎಲ್ಲ ರೀತಿಯ ತಪ್ಪುಗಳನ್ನೂ ಮಾಡಿದ ನಂತರ, ಆಧುನಿಕ ಮನುಷ್ಯನ ರೋಗಗಳನ್ನು ಅಂಟಿಸಿಕೊಂಡ ನಂತರ ನಾನು ಕೂಡ ಯೋಗ ಮತ್ತು ಮುಂಜಾನೆಯ ವಾಕಿಂಗ್‌ ಮೊರೆ ಹೋದೆ. ಇದು ಆಗಿದ್ದು ಹದಿನೈದು ವರ್ಷಗಳ ಹಿಂದೆ. ನಾನು ಕೆಲವು ಬದಲಾವಣೆಗಳ ಜೊತೆ ನನ್ನ ಜೀವನಶೈಲಿಯಲ್ಲಿ ಸುಧಾರಣೆ ತಂದುಕೊಂಡೆ. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿವಾರಿಸಿಕೊಂಡೆ. ಆದರೆ ನನಗೆ ಇಂದಿಗೂ ಇತರ ಕೆಲವು ಆರೋಗ್ಯ ಸಮಸ್ಯೆಗಳಿಗೆ ಔಷಧ ತೆಗೆದುಕೊಳ್ಳದೆ ಇರುವುದು ಸಾಧ್ಯವಾಗಿಲ್ಲ. ಇಂದಿಗೂ ನಾನು ತುಸು ಮಟ್ಟಿಗೆ ಅಶಿಸ್ತಿನ ಮನುಷ್ಯ. ‘ಕಟ್ಟುನಿಟ್ಟಿನ ಜೀವನ ಶೈಲಿ’ಯ ಬದಲು ‘ಒಳ್ಳೆಯ ಜೀವನ ಶೈಲಿ’ಯನ್ನು ಪಾಲಿಸಲು ಇಷ್ಟಪಡುವೆ.

ನಮ್ಮಲ್ಲಿ ಬಹುಪಾಲು ಜನ ಈಗ ನಗರ ಜೀವನ ಶೈಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಸಣ್ಣ ನಗರಗಳಲ್ಲಿಯೂ, ಮಹಾನಗರಗಳಲ್ಲಿಯೂ ಜನ ಪ್ರಕೃತಿಯಿಂದ ದೂರವಾಗಿ ಜನರಿಂದ ಗಿಜಿಗುಡುತ್ತಿರುವ ಪ್ರದೇಶಗಳಲ್ಲಿ ಅವಿತು ಕೂರುತ್ತಿದ್ದೇವೆ. ಇಂತಹ ಜನ ಆಧುನಿಕ ಗ್ಯಾಜೆಟ್‌ಗಳ ಜಾಲದಲ್ಲಿ ಬಂದಿಯಾಗುತ್ತಿರುವುದು ಹೆಚ್ಚುತ್ತಿದೆ. ಫ್ರೆಂಚ್ ಲೇಖಕ ಆಲ್ಬರ್ಟ್‌ ಕಮು ಹೇಳಿದಂತೆ, ‘ಆಧುನಿಕ ಮನುಷ್ಯನ ಬಗ್ಗೆ ಒಂದು ವಾಕ್ಯದಲ್ಲಿ ಹೇಳಿಬಿಡಬಹುದು– ಆತ ವ್ಯಭಿಚಾರ ಮಾಡಿದ, ದಿನಪತ್ರಿಕೆ ಓದಿದ’. ಇದನ್ನು ವಿಸ್ತರಿಸಿ ಇಂದಿನ ಕಾಲಕ್ಕೆ, ‘ಆಧುನಿಕ ಮನುಷ್ಯ ವ್ಯಭಿಚಾರ ಮಾಡಿದ, ಟಿ.ವಿ. ನೋಡಿದ ಅಥವಾ ಸೆಲ್‌ಫೋನ್‌ಗೆ ಅಂಟಿಕೊಂಡಿದ್ದ’ ಎಂದು ಹೇಳಿಬಿಡಬಹುದು. ಕಾಂಕ್ರೀಟ್‌ ಕಾಡುಗಳಲ್ಲಿ ಸಿಲುಕಿರುವ ನಮ್ಮ ಬಹುತೇಕ ಆರೋಗ್ಯ ತೊಂದರೆಗಳಿಗೆ ಯೋಗ ಎನ್ನುವುದು ಅತ್ಯುತ್ತಮ ಔಷಧ.

ಆದರೆ, ‘ಹೊಲದಲ್ಲಿ ಉಳುಮೆ ಮಾಡುವ ರೈತನ ದೈಹಿಕ ಶ್ರಮಕ್ಕೆ ಹೋಲಿಸಿದರೆ ನನ್ನ ಕಸರತ್ತುಗಳು ಎಷ್ಟು ನಿರರ್ಥಕ’ ಎಂಬ ಆಲೋಚನೆಯಿಂದ ತಪ್ಪಿಸಿಕೊಳ್ಳಲು ನನ್ನಿಂದ ಆಗುವುದಿಲ್ಲ. ನಾನು ನನ್ನ ಹಳ್ಳಿಗೆ ಹಾಗೂ ತೋಟಕ್ಕೆ ಹೋದ ಸಮಯದಲ್ಲಿ ಬೆಳಿಗ್ಗೆ ಯೋಗಾಭ್ಯಾಸ ಮಾಡುವಾಗ ಈ ಆಲೋಚನೆ ನನ್ನಲ್ಲಿ ಬರುತ್ತದೆ. ಜೀವನಕ್ಕಾಗಿ ರೈತ ಪಡುವ ದೈಹಿಕ ಶ್ರಮವು ಮೌಲ್ಯಯುತವಾದುದ್ದನ್ನು, ಬಳಕೆಗೆ ಬರುವಂಥದ್ದನ್ನು ಉತ್ಪಾದಿಸುತ್ತದೆ. ಆ ಶ್ರಮದ ಹಿಂದೆ ಪಾವಿತ್ರ್ಯ ಇದೆ. ಆ ಒಂದು ಸುಂದರ ಪ್ರಯತ್ನದ ಮೂಲಕ ರೈತನ ದೇಹ, ಮನಸ್ಸು ಮತ್ತು ಆತ್ಮಕ್ಕೆ ಪ್ರಯೋಜನ ಆಗುತ್ತದೆ. ಆ ಯತ್ನದ ಮೂಲಕ ರೈತ ತನಗರಿಯದೆಯೇ ‘ಆತ್ಯಂತಿಕ’ದ ಜೊತೆ ಒಂದಾಗುತ್ತಾನೆ. ಬಡಗಿ, ಲೋಹದ ಕೆಲಸ ಮಾಡುವ ವ್ಯಕ್ತಿ ಅಥವಾ ಕಲ್ಲು ಒಡೆಯುವ ಕೆಲಸದಲ್ಲಿ ತೊಡಗಿಕೊಂಡಿರುವ ವ್ಯಕ್ತಿ ತನ್ನ ಕೈ–ತೋಳುಗಳನ್ನು ಬಳಸಿ ಒಂದಲ್ಲ ಒಂದು ವಸ್ತು ಉತ್ಪಾದಿಸುತ್ತಾನೆ. ಇದನ್ನು ಸುಮ್ಮನೆ ಕುಳಿತಿರುವ ಶ್ರೀಮಂತರು ಹಾಗೂ ಬುದ್ಧಿಜೀವಿಗಳು ಬಳಸುತ್ತಾರೆ. ರೈತನೊಬ್ಬನ ಬಳಿ ಹೋಗಿ ಯೋಗ ಮಾಡು ಎಂದೋ, ಧ್ಯಾನ ಮಾಡು ಎಂದೋ ಹೇಳುವ ಸಂದರ್ಭವನ್ನು ನೀವು ಆಲೋಚಿಸಿಕೊಳ್ಳಬಲ್ಲಿರಾ? ಅಥವಾ ಜಿಮ್‌ಗೆ ಹೋಗಿ ಒಂದಿಷ್ಟು ಕಸರತ್ತು ಮಾಡು ಎಂದು ಹೇಳಬಹುದಾ? ರೈತನ ಪಾಲಿಗೆ ಇಂಥದ್ದೊಂದು ಸಲಹೆಗಿಂತ ಹೆಚ್ಚಿನ ಮೂರ್ಖತನ ಇನ್ನೇನಾದರೂ ಕಾಣಿಸುವ ಸಾಧ್ಯತೆ ಇದೆಯಾ? ಫಲ ಕೊಡದ ನಿರರ್ಥಕ ಕೆಲಸಗಳ ಮೂಲಕ, ಸಾರ್ವಜನಿಕ ಒಳಿತಿನ ಉದ್ದೇಶ ಇಲ್ಲದ ಕೆಲಸಗಳ ಮೂಲಕ ‘ಅರ್ಥ’ವನ್ನು ಹುಡುಕುತ್ತಿರುವ ಮರುಳರು ಎಂದು ರೈತ ನಮ್ಮ ಬಗ್ಗೆ ಅಂದುಕೊಳ್ಳದೆ ಇರುತ್ತಾನೆಯೇ?

ನಾನು ಮಾಡುವ ಯೋಗಾಸನ, ನನ್ನ ದೇಹದಲ್ಲಿ ಶೇಖರವಾಗಿರುವ ಕೊಬ್ಬಿನ ಅಂಶವನ್ನು ಮಾತ್ರ ಕರಗಿಸಬಲ್ಲದು. ಇದರಿಂದ ಇನ್ನೊಬ್ಬ ಮನುಷ್ಯನಿಗೆ ಅಗತ್ಯವಿರುವ ಏನನ್ನೂ ಉತ್ಪಾದಿಸಲು ಆಗದು. ಆದರೆ, ರೈತನ ದೈಹಿಕ ಶ್ರಮವು ‘ಶ್ರಮ’ ಎಂಬ ಪದದ ವಿಸ್ತೃತ ಅರ್ಥದಲ್ಲಿ ನೋಡುವುದಾದರೆ, ಬಹಳ ಪವಿತ್ರವಾದುದು. ಆತ ಮಾಡುವ ಕೆಲಸಗಳಿಂದಾಗಿಯೇ ಆಹಾರ, ಬಟ್ಟೆ ಹಾಗೂ ಸೂರು ಸಿಗುತ್ತದೆ. ‘ನಿಸರ್ಗ’ದ ಜೊತೆ ಒಂದಾಗಬೇಕು ಎಂದಾದರೆ ನಾನು ಒಂದಿಷ್ಟು ಯೋಗಾಸನ, ಅದು–ಇದು ಅಂತ ಹೆಣಗಬೇಕು. ಆದರೆ, ನಿಸರ್ಗದ ಜೊತೆ ಒಂದಾಗಲು ರೈತ ಹೆಣಗಬೇಕಿಲ್ಲ. ಏಕೆಂದರೆ, ಆತ ‘ನಿಸರ್ಗ’ದ ಜೊತೆ ಒಂದಾಗಿಯೇ ಇದ್ದಾನೆ, ಅದರಿಂದ ಆತ ಬೇರೆ ಅಲ್ಲ.

ಟಾಲ್‌ಸ್ಟಾಯ್‌ ಮತ್ತು ರಸ್ಕಿನ್‌ ಅವರಿಂದ ಪ್ರಭಾವಿತರಾಗಿ ಗಾಂಧೀಜಿ ದೈಹಿಕ ಶ್ರಮದ ಮಹತ್ವವನ್ನು ಮುಕ್ತವಾಗಿ ಪ್ರಶಂಸಿಸಿದರು. ‘ತ್ಯಾಗವಿಲ್ಲದೆ ಉಣ್ಣುವುದು ಕದ್ದ ಅನ್ನ ಉಣ್ಣುವುದಕ್ಕೆ ಸಮ’ ಎಂದು ಗೀತೆಯ ಮೂರನೆಯ ಅಧ್ಯಾಯದಲ್ಲಿ ಹೇಳಲಾಗಿದೆ. ಇದನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ ಗಾಂಧೀಜಿ, ‘ಇಲ್ಲಿ ತ್ಯಾಗ ಅಂದರೆ ದೈಹಿಕ ಶ್ರಮ ಎಂದು ಅರ್ಥ’ ಎಂದರು. ವೇದ ಕಾಲದಿಂದಲೂ ಬ್ರಾಹ್ಮಣ ಪೂಜಾರಿಗಳು ಇದನ್ನು ಒಂದು ಧಾರ್ಮಿಕ ಆಚರಣೆಯ ರೀತಿ ಮಾಡಿಕೊಂಡಿದ್ದರೂ, ಅವರು ಊಟ ಆರಂಭಿಸುವ ಮೊದಲು ಅನ್ನದ ಕೆಲವು ಅಗುಳನ್ನು ಪಕ್ಷಿಗಳಿಗಾಗಿ, ಮತ್ತು ಪ್ರಾಣಿಗಳಿಗಾಗಿ ನಾಲ್ಕೂ ದಿಕ್ಕುಗಳಲ್ಲಿ ಚೆಲ್ಲುವುದನ್ನು ಕಾಣಬಹುದು. ದೈಹಿಕ ಶ್ರಮದ ಮೂಲಕ ಲಭಿಸುವ ಅನ್ನದ ಪರವಾಗಿ ಮಾತನಾಡಿದ ಗಾಂಧೀಜಿ, ಬೈಬಲ್‌ ಗ್ರಂಥವನ್ನು ಉಲ್ಲೇಖಿಸಿ, ‘ಹಣೆಯ ಮೇಲಿನ ಬೆವರಿನ ಹನಿಗಳಿಂದಾಗಿಯೇ ನೀನು ನಿನ್ನ ಅನ್ನ ಉಣ್ಣುವೆ’ ಎಂದು ಹೇಳುತ್ತಾರೆ. ಗಾಂಧೀಜಿ ಅವರು ಯೋಗವನ್ನು ವೈಭವೀಕರಿಸಲಿಲ್ಲ.

ಶ್ರೀಮಂತರು, ಮೈಯಲ್ಲಿ ಕೊಬ್ಬಿನ ಅಂಶ ತುಂಬಿಸಿಕೊಂಡವರು, ಒಂದೇ ಕಡೆ ಕುಳಿತು ಕೆಲಸ ಮಾಡುವವರು, ರಾಜಕಾರಣಿಗಳು, ಅಧಿಕಾರಿಗಳು, ವಣಿಕರು, ಕಚೇರಿಗಳಲ್ಲಿ ಕೆಲಸ ಮಾಡುವವರು, ಬರೆಯುವವರು, ಮಿಂಚುವವರು... ಇವರೆಲ್ಲ ದೈಹಿಕ ಶ್ರಮವಿಲ್ಲದ ತಮ್ಮ ಜೀವನ ಶೈಲಿಗೆ ಇರುವ ಔಷಧಿ ಯೋಗ ಎಂಬುದನ್ನು ಒಪ್ಪಿಕೊಳ್ಳಬೇಕು. ಯೋಗವನ್ನು ಆಚರಿಸುತ್ತ, ಅದಕ್ಕೆ ಬದ್ಧತೆ ತೋರಿಸುವ ಸಂದರ್ಭದಲ್ಲಿಯೇ ನಾವು ಈಗಾಗಲೇ ಕರ್ಮ ಯೋಗಿಗಳಾಗಿರುವ ಇನ್ನುಳಿದ ಶೇಕಡ 75ರಷ್ಟು ಜನರ ಬಗ್ಗೆಯೂ ಗೌರವ ಭಾವ ತಾಳೋಣ. ಅಲ್ಲದೆ, ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡು, ಸಣ್ಣ ನಗರ ಹಾಗೂ ಮಹಾನಗರಗಳಲ್ಲಿ ತಮ್ಮ ದೇಹ ಮತ್ತು ಆತ್ಮವನ್ನು ಒಟ್ಟಾಗಿ ಇಟ್ಟುಕೊಳ್ಳಲು ಉತ್ಪಾದಕ ಕೆಲಸ ಮಾಡುತ್ತಿರುವವರಿಗೆ ಯೋಗದ ಅಗತ್ಯ ಇಲ್ಲ. ನಮಗೆ ಜೀವನದಲ್ಲಿ ನೆಮ್ಮದಿ ಸಿಗುವುದು ಆ ವ್ಯಕ್ತಿಗಳು ಮಾಡುವ ಕೆಲಸಗಳ ಕಾರಣದಿಂದಾಗಿ.

ಯೋಗದ ಪರ ಸೃಷ್ಟಿಯಾಗಿರುವ ಪ್ರವಾಹದಲ್ಲಿ ಮುಳುಗಿಹೋಗುವ ಮುನ್ನ, ಯೋಗ ಎಂಬುದು ನಗರಗಳಲ್ಲಿ ಇರುವವರಿಗೆ ಮೋಕ್ಷದ ಮಾರ್ಗದಂತೆ ಕಂಡರೂ, ಅದು ಬಿಸಿಲಿನಲ್ಲಿ ಹಾಗೂ ಮಳೆಯಲ್ಲಿ ಶ್ರಮಪಡುವವರಿಗೆ ಏನೂ ಅಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳೋಣ. ಟ್ಯಾಗೋರ್‌ ಅವರು ಹೇಳಿರುವ ಮಾತೊಂದನ್ನು ಮರೆಯಲು ಸಾಧ್ಯವಿಲ್ಲ: ‘ಬಾಗಿಲುಗಳೆಲ್ಲ ಮುಚ್ಚಿರುವಾಗ ಈ ಕತ್ತಲಿನಲ್ಲಿ ದೇವಸ್ಥಾನದಮೂಲೆಯಲ್ಲಿ ಯಾರನ್ನು ಪೂಜಿಸುತ್ತೀಯೆ? ಕಣ್ಣುಗಳನ್ನು ತೆರೆದು ನೋಡು, ನಿನ್ನ ದೇವರು ನಿನ್ನೆದುರು ಇಲ್ಲ. ಗಟ್ಟಿ ನೆಲವನ್ನು ಉಳುವವನ ಎದುರು ಆತ ಇದ್ದಾನೆ, ಕಲ್ಲುಗಳನ್ನು ಒಡೆಯುತ್ತಿರುವವನ ಎದುರು ಅವ ಇದ್ದಾನೆ, ಸೂರ್ಯನ ಅಡಿ ಹಾಗೂ ನೀರಿನ ಧಾರೆಯ ಅಡಿ ನಿಂತವರ ಎದುರು ಅವನು ಇದ್ದಾನೆ, ದೂಳಿನಿಂದ ಮುಚ್ಚಿಕೊಂಡಿರುವ ಬಟ್ಟೆ ತೊಟ್ಟವನ ಎದುರು ಇದ್ದಾನೆ. ನಿನ್ನ ಪವಿತ್ರವಾದವಸ್ತ್ರವನ್ನು ತೆಗೆದಿಡು. ಅವನ ರೀತಿ ನೀನೂ ದೂಳಿನಿಂದ ಕೂಡಿದ ನೆಲದ ಮೇಲೆ ಬಾ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT