ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಂಸ ಉತ್ಸವದಲ್ಲಿ ನಾನೇಕೆ ಪಾಲ್ಗೊಳ್ಳುವೆ?

Last Updated 6 ಡಿಸೆಂಬರ್ 2015, 19:56 IST
ಅಕ್ಷರ ಗಾತ್ರ

ಉಸ್ಮಾನಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಈ ತಿಂಗಳ 10ರಂದು ಆಚರಿಸಲಿರುವ ‘ಗೋಮಾಂಸ ಉತ್ಸವ’ದಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ. ಆದರೆ, ವಿಶ್ವವಿದ್ಯಾಲಯದ ಮುಖ್ಯಸ್ಥರು ಈ ಉತ್ಸವಕ್ಕೆ ಅನುಮತಿ ನಿರಾಕರಿಸಿರುವ ಕಾರಣ, ವಿದ್ಯಾರ್ಥಿಗಳು ಅದನ್ನು ಎಲ್ಲೇ ಆಚರಿಸಿದರೂ, ಯಾವಾಗ ಆಚರಿಸಿದರೂ ನಾನು ಹೋಗುತ್ತೇನೆ.

ಈ ಸ್ವತಂತ್ರ ದೇಶದ ಸ್ವತಂತ್ರ ಪ್ರಜೆ ನಾನಾಗಿರುವ ಕಾರಣ ಅಂಥ ಉತ್ಸವಗಳಲ್ಲಿ ಪಾಲ್ಗೊಳ್ಳುವ ಎಲ್ಲ ಹಕ್ಕು ನನಗಿದೆ. ನಾನು ಈ ದೇಶದ ಪ್ರಜೆಯಾಗಿರುವ ಕಾರಣ ಆ ಹಕ್ಕನ್ನು ನನಗೆ ಸಂವಿಧಾನವೇ ನೀಡಿದೆ. ನಾನು ಹೀಗೆ ಮಾಡುವುದರಿಂದ ಕೆಲವು ವ್ಯಕ್ತಿಗಳ ಕೆಲವು ಭಾವನೆಗಳಿಗೆ ಧಕ್ಕೆ ಆಗಬಹುದು. ಆದರೆ, ಆಹಾರದಂತಹ ಪಕ್ಕಾ ಖಾಸಗಿ ವಿಚಾರದಲ್ಲಿ ಈ ಪ್ರಜಾಪ್ರಭುತ್ವ ನನ್ನ ಮೇಲೆ ಯಾವುದೇ ನಿರ್ಬಂಧ ಹೇರಿಲ್ಲ.

‘ನಮ್ಮ’ ಮತ್ತು ‘ಅವರ’ ನಡುವೆ ಬಿರುಕು ಮೂಡಿಸುವ ಏಕೈಕ ಉದ್ದೇಶದಿಂದ, ಆಹಾರವನ್ನು ನಮ್ಮ ಅಡುಗೆ ಮನೆಯ ಖಾಸಗಿ ಜಗತ್ತಿನಿಂದ ಒತ್ತಾಯಪೂರ್ವಕವಾಗಿ ಸಾರ್ವಜನಿಕ ಬದುಕಿನ ಕೇಂದ್ರ ಭಾಗಕ್ಕೆ ತಂದಾಗ, ನಮ್ಮ ಭಾವನೆಗಳಿಗೂ ಧಕ್ಕೆ ಆಗುತ್ತದೆ. ಅಲ್ಲದೆ, ನಮ್ಮ ವಿವೇಕಯುತ ಮನಸ್ಸು ಕೂಡ ಆಕ್ರೋಶಗೊಳ್ಳುತ್ತದೆ. ಆಗ ನಾವು ನಿರ್ದಿಷ್ಟ ಆಹಾರ ಬೇಕು ಅಥವಾ ಬೇಡ ಎನ್ನುವ ಹಕ್ಕನ್ನು ಪ್ರತಿಪಾದಿಸಬೇಕಾಗುತ್ತದೆ.

ನಾನು ಈ ಸ್ವತಂತ್ರ ದೇಶದ ವ್ಯಕ್ತಿ. ಇಲ್ಲಿ ಏನನ್ನು ತಿನ್ನಬೇಕು ಎಂಬ ಕಾನೂನುಬದ್ಧ ಹಕ್ಕಿನ ವಿಚಾರದಲ್ಲಿ, ನಂಬಿಕೆಗಳ ವಿಚಾರದಲ್ಲಿ, ಸರಿ–ತಪ್ಪುಗಳನ್ನು ನಿರ್ಧರಿಸುವ ನನ್ನ ಮೌಲ್ಯಗಳ ವಿಚಾರದಲ್ಲಿ, ನನಗೆ ಯಾವ ಆಹಾರ ಬೇಕು ಎಂಬುದನ್ನು ತೀರ್ಮಾನಿಸುವ ವಿಚಾರದಲ್ಲಿ ಬೇರೆಯವರಿಗೆ ಇರುವಷ್ಟೇ ಅಧಿಕಾರ ನನಗೂ ಇದೆ.

ನನ್ನ ಹಿನ್ನೆಲೆ ಏನು ಎಂಬುದನ್ನು ಇಲ್ಲೇ ಸ್ಪಷ್ಟಪಡಿಸುತ್ತೇನೆ. ನನ್ನ ತಂದೆ ಹುಟ್ಟಿನಿಂದ ಮಾಂಸಾಹಾರಿ. ಆದರೆ ಯೌವನದ ದಿನಗಳಲ್ಲಿ ಅವರು ಮಾಂಸ ಮತ್ತು ಮೊಟ್ಟೆಯಂಥ ಪ್ರಾಣಿಜನ್ಯ ಆಹಾರ ಸೇವನೆ ಬಿಟ್ಟುಬಿಟ್ಟರು. ನಂತರ ಅವರು ಜೀವನಪರ್ಯಂತ ಶಾಕಾಹಾರಿಯಾಗೇ ಇದ್ದರು. ಇದರ ಪರಿಣಾಮವಾಗಿ ನಮ್ಮ ಮನೆಯಲ್ಲಿ ಮಾಂಸ ನಿಷಿದ್ಧವಾಗಿತ್ತು. ಮಾಂಸಾಹಾರ ಬೇಕು ಎಂದಾದರೆ ನಮ್ಮ ವಿಶಾಲವಾದ ಮನೆಯಲ್ಲಿ ಅದನ್ನು ಕದ್ದುಮುಚ್ಚಿ ಸಿದ್ಧಪಡಿಸಿ, ಕದ್ದುಮುಚ್ಚಿ ತಿನ್ನಬೇಕಿತ್ತು. ನಂತರ, ನಾವು ದೊಡ್ಡವರಾದಂತೆ, ನಮ್ಮ ಅಪ್ಪ ನಿಲುವು ಸಡಿಲಿಸಿದರು. ಬೆಳೆಯುವ ಮಕ್ಕಳಿಗೆ ಮಾಂಸದ ಆಹಾರ ಸೇವಿಸಲು ಅವಕಾಶ ನೀಡಿದರು.

ಆದರೆ, ಮಾಂಸದ ಆಹಾರ ಸೇವಿಸುವುದು ಲಾಡು ಅಥವಾ ಶ್ರೀಖಂಡ (ಮೊಸರಿನಿಂದ ಸಿದ್ಧಪಡಿಸುವ ಸಿಹಿ ತಿನಿಸು) ತಿನ್ನುವಷ್ಟು ಸಂಭ್ರಮದ ಸಂಗತಿ ಆಗಿರಲಿಲ್ಲ. ಏಕೆಂದರೆ, ನಮ್ಮ ಪ್ರದೇಶದಲ್ಲಿ ನಮ್ಮದು ಶ್ರೀಮಂತ ಕುಟುಂಬವಾಗಿದ್ದ ಕಾರಣ ನಮ್ಮ ಮನೆ ಮತ್ತು ಅಂದಾಜು ಒಂದು ಡಜನ್‌ ಕುಟುಂಬಗಳನ್ನು ಒಳಗೊಂಡ ನಮ್ಮ ವಿಸ್ತೃತ ಕುಟುಂಬದಲ್ಲಿ ಬ್ರಾಹ್ಮಣ್ಯದ ಸಂಸ್ಕೃತಿ ಇತ್ತು. ನಮ್ಮದು ಹಿಂದುಳಿದ ವರ್ಗಕ್ಕೆ ಸೇರಿದ ಜಾತಿಯಾಗಿದ್ದರೂ ಮನೆಯ ವಾತಾವರಣ ಹಾಗಿತ್ತು.

ನಮ್ಮ ಜೀವನಶೈಲಿ, ಆಡುವ ಭಾಷೆ, ನಮ್ಮ ಆಹಾರ ಪದ್ಧತಿ, ಧಾರ್ಮಿಕ ಆಚರಣೆಗಳು ಅಥವಾ ಅಂತ್ಯಕ್ರಿಯೆ ವಿಧಿಗಳಲ್ಲಿ ‘ಹಿಂದುಳಿದ ವರ್ಗ’ವನ್ನು ಪ್ರತಿಬಿಂಬಿಸುವ ಯಾವ ಅಂಶವೂ ಇರಲಿಲ್ಲ. ಹಲವು ಅಣ್ಣಂದಿರು ಮತ್ತು ಅವರ ಕುಟುಂಬವನ್ನು ಒಳಗೊಂಡ ನಮ್ಮ ವಿಸ್ತೃತ ಕುಟುಂಬವು ಬ್ರಾಹ್ಮಣ ಪಂಡಿತರನ್ನು ಸಲಹುತ್ತಿತ್ತು, ಮನೆಯಲ್ಲಿ ಪೂಜೆಗಳನ್ನು ಆಯೋಜಿಸಲಾಗುತ್ತಿತ್ತು, ಹಬ್ಬದ ಅಡುಗೆಗೆ ಬ್ರಾಹ್ಮಣರನ್ನು ಕರೆಸಲಾಗುತ್ತಿತ್ತು.

ನನ್ನ ಊರಿನ ಕೊಡುಗೈ ದಾನಿಯಾದ ನನ್ನ ಅಜ್ಜ ತಮ್ಮಲ್ಲಿಗೆ ಬರುತ್ತಿದ್ದ ಬ್ರಾಹ್ಮಣ ಅರ್ಚಕರು ಮತ್ತು ಅವರ ಕುಟುಂಬಕ್ಕೆ ತಂಗಲು ಒಂದು ಅತಿಥಿ ಗೃಹವನ್ನೇ ನಿರ್ಮಿಸಿದ್ದರು.

ಬಹುಶಃ, ‘ಸಂಸ್ಕೃತೀಕರಣ’ದ ಕಾರಣದಿಂದ ನನ್ನ ತಂದೆ ತಮ್ಮ ಎಲ್ಲ ಮಕ್ಕಳು– ಗಂಡು ಮತ್ತು ಹೆಣ್ಣು ಮಕ್ಕಳು ಸೇರಿದಂತೆ– ಹೈದರಾಬಾದ್, ಪುಣೆ, ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವಂತೆ ಮಾಡಿದರು. ಇದರ ಪರಿಣಾಮವಾಗಿ ನಮ್ಮ ಇಡೀ ಪ್ರದೇಶದಲ್ಲಿ, ನಮ್ಮ ಸಮುದಾಯದಲ್ಲಿ ಶಿಕ್ಷಣ ಪಡೆದ, ವೃತ್ತಿಯಲ್ಲಿ ನೆಲೆನಿಂತ ಮೊದಲ ತಲೆಮಾರಿನ ಹೆಣ್ಣುಮಕ್ಕಳು ನಾವಾದೆವು. ಇವೆಲ್ಲ ಕಾರಣಗಳಿಂದ, ಪ್ರಾಣಿಗಳನ್ನು ಕೊಂದು ಅವುಗಳ ಮಾಂಸ ಸೇವಿಸುವುದು ನಮ್ಮ ಮನೆಯಲ್ಲಿ ನಿಷಿದ್ಧವಾಗಿದ್ದರೂ, ಬಿರಿಯಾನಿ, ಖೀಮಾ–ಖಿಚಡಿ, ಮಟನ್ ಫ್ರೈ ಅಥವಾ ಕಬಾಬ್‌ ಅನ್ನು ಖುಷಿಯಿಂದ ತಿನ್ನುವವರನ್ನು ಗೌರವಿಸುವುದನ್ನು ನಾವು ಕಲಿತೆವು. ಈ ಎರಡೂ ವಿಚಾರಗಳನ್ನು ನಾವು ಪ್ರತ್ಯೇಕವಾಗಿಯೇ ಕಂಡೆವು. ಚುಟುಕಾಗಿ ಹೇಳಬೇಕೆಂದರೆ – ನಾವು ಬದುಕಿದೆವು, ಬೇರೆಯವರಿಗೂ ಬದುಕಲು ಅವಕಾಶ ನೀಡಿದೆವು. ಮಾಂಸಾಹಾರ ಸೇವಿಸುವ ‘ಅವರು’ ತಮಗೆ ಇಷ್ಟವಾಗಿದ್ದನ್ನು ತಿನ್ನಬಹುದಿತ್ತು. ಹಾಗೇ ನಾವು ನಮಗೆ ಇಷ್ಟವಾಗಿದ್ದನ್ನು ತಿನ್ನುತ್ತಿದ್ದೆವು.

ಆಹಾರದ ಹಕ್ಕಿನ ಪ್ರತಿಪಾದನೆ: ಗೋಮಾಂಸ ಉತ್ಸವ ಆಯೋಜಿಸುವುದು ಅಥವಾ ಅದರಲ್ಲಿ ಪಾಲ್ಗೊಳ್ಳುವುದು ‘ಪೊಳ್ಳು ಜಾತ್ಯತೀತವಾದಿ’ಗಳ ‘ಜಾತ್ಯತೀತತೆ’ಗೆ ಸಂಬಂಧಿಸಿದ ವಿಚಾರ ಅಲ್ಲ. ಅಥವಾ, ಹಿಂದುತ್ವದ ಮಾತಿನಲ್ಲಿ ಹೇಳಬೇಕೆಂದರೆ ಇದು ‘ಸಿಕ್ಯುಲರ್’ (ರೋಗಗ್ರಸ್ತ  ಸೆಕ್ಯುಲರಿಸಂ ಎಂಬ ಅರ್ಥದಲ್ಲಿ ಈ ಪದ ಬಳಸಲಾಗುತ್ತಿದೆ) ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರವೂ ಅಲ್ಲ. ಇದು ಜಾತ್ಯತೀತ ನಿಲುವಿನ ಪ್ರದರ್ಶನವೇ ಅಲ್ಲ. ಹಂದಿ ಮಾಂಸ, ಗೋಮಾಂಸ ಸೇರಿದಂತೆ ಜನರು ತಮಗೆ ಏನು ಬೇಕೋ ಅದನ್ನು ತಿನ್ನುವ ಹಕ್ಕಿನ ಗಟ್ಟಿ ಪ್ರತಿಪಾದನೆ ಇದು. ಆಹಾರವನ್ನು ಕೋಮುವಾದಕ್ಕೆ ಬಳಸಿಕೊಳ್ಳುವುದರ ವಿರುದ್ಧ ಜನರ ಪ್ರತಿಭಟನೆ ಇದು. ನಮಗೆ ಬೇಕಿರುವುದನ್ನು ಮನೆಗಳಲ್ಲಿ ಖಾಸಗಿಯಾಗಿ ಸೇವಿಸಿದರೂ ನಮ್ಮನ್ನು ಸುಮ್ಮನೆ ಬಿಡುತ್ತಿಲ್ಲವಾದ ಕಾರಣ ನಾವು ಬೀದಿಗೆ ಇಳಿಯಲೇ ಬೇಕಾಗಿದೆ. ಎಲ್ಲ ಸ್ವರೂಪದ ದಬ್ಬಾಳಿಕೆಗಳನ್ನು ಎದುರಿಸಿ ನಿಲ್ಲಬೇಕಾಗಿದೆ.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಶಕ್ತಿ ಹೆಚ್ಚಿಸಿಕೊಂಡಿರುವ ಅಲ್ಪಸಂಖ್ಯಾತ ಹಿಂದೂ ಮೂಲಭೂತವಾದಿಗಳ ದಬ್ಬಾಳಿಕೆಗೆ ಮಣಿಯಲು ನಮ್ಮಿಂದಾಗದು.

ಗೋಮಾಂಸ ಮುಸ್ಲಿಮರ ಆಹಾರ ಮಾತ್ರವಲ್ಲ, ಅದು ಮುಸ್ಲಿಮೇತರರ ಆಹಾರವೂ ಹೌದು. ಕ್ರೈಸ್ತರಲ್ಲಿ ಬಹುಪಾಲು ಜನ, ದಲಿತರು, ಲಂಬಾಡ ಸಮುದಾಯ, ಆದಿವಾಸಿಗಳು ಗೋಮಾಂಸ ಸೇವಿಸುತ್ತಾರೆ. ಸಾಮಾನ್ಯವಾಗಿ ಇತರರ ಗಮನಕ್ಕೆ ಬಾರದ, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳಿಗೆ ಗೋಮಾಂಸ ಮಾತ್ರವಲ್ಲ ಕಾಗೆ, ಅಳಿಲು ಕೂಡ ಆಹಾರ. ಇದನ್ನು ಆ ಸಮುದಾಯಗಳ ನಾಯಕರೇ ಹೇಳಿದ್ದಾರೆ.

ತನಗೆ ಬೇಕಿರುವ ಆಹಾರವನ್ನು ಹೊಲಗಳಲ್ಲಿ ತಾನೇ ಬೆಳೆದುಕೊಳ್ಳುವ, ಮಾಂಸ ಮತ್ತು ಹಾಲಿಗೆ ಪ್ರಾಣಿಗಳನ್ನು ಸಾಕಿಕೊಳ್ಳುವ ಇತರ ಸಮುದಾಯಗಳಿಗೆ ಇರುವ ಸವಲತ್ತುಗಳು ಅಲೆಮಾರಿ ಸಮುದಾಯಗಳಿಗೆ ಇಲ್ಲ. ಹಾಗಾಗಿ ತಮ್ಮಿಂದ ಹಿಡಿಯಲು ಸಾಧ್ಯವಾಗಿದ್ದೆಲ್ಲವನ್ನೂ ಅವರು ಆಹಾರದ ರೂಪದಲ್ಲಿ ಸೇವಿಸುತ್ತಾರೆ.

ಇತರೆ ಹಿಂದುಳಿದ ವರ್ಗಗಳಲ್ಲಿ ಕೆಲವು ಸಮುದಾಯಗಳವರು ಗೋಮಾಂಸ ತಿನ್ನುತ್ತಾರೆ. ಆದರೆ ಗೋಮಾಂಸವನ್ನು ‘ದಲಿತರ ಆಹಾರ’ ಎಂದು ಹಲವರು ಪರಿಗಣಿಸಿರುವ ಕಾರಣ, ಅದರ ಸೇವನೆಯಿಂದ ದೂರವಿರುತ್ತಾರೆ. ಸಮಾಜವು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಬ್ರಾಹ್ಮಣೀಕರಣ ಆಗುತ್ತಿರುವ ಕಾರಣ ಗೋವು ‘ಪವಿತ್ರ’ ಎಂದು ಕಂಡು, ಎಲ್ಲ ಜಾತಿಗಳ ಜನರೂ ಗೋಮಾಂಸ ಸೇವನೆಯಿಂದ ದೂರ ಉಳಿಯುತ್ತಿದ್ದಾರೆ.

400 ವರ್ಷಗಳ ಇಸ್ಲಾಮಿಕ್‌ ಆಡಳಿತವನ್ನು ಕಂಡ ಹಿಂದಿನ ಹೈದರಾಬಾದ್ ರಾಜ್ಯವು ‘ಗಂಗಾ– ಯಮುನಾ ಸಂಸ್ಕೃತಿ’ಗೆ ಅಂದರೆ ಬಹುತ್ವ ಸಂಸ್ಕೃತಿಗೆ ಹೆಸರುವಾಸಿ. ಆಳುವ ವರ್ಗ ಆಗಿದ್ದ ಮುಸ್ಲಿಂ ಮೇಲ್ವರ್ಗಗಳು ಹಿಂದೂ ಮೇಲ್ಜಾತಿಗಳಿಗೆ ಗೌರವ ನೀಡುವ ಉದ್ದೇಶದಿಂದ ಗೋಮಾಂಸ ಸೇವಿಸುತ್ತಿರಲಿಲ್ಲ.

ಹಂದಿ ಮಾಂಸ ಸೇವಿಸುತ್ತಿದ್ದ ಇತರೆ ಹಿಂದುಳಿದ ವರ್ಗಗಳ ಜನ ಸೇರಿದಂತೆ ಎಲ್ಲರೂ ಹಂದಿ ಮಾಂಸ ಸೇವನೆಯಿಂದ ದೂರ ಉಳಿದಿದ್ದರು. ಆದರೆ, ಆಂಧ್ರದ ಕರಾವಳಿ ಭಾಗದ ಇತರೆ ಹಿಂದುಳಿದ ವರ್ಗಗಳ ಜನರಲ್ಲಿ ಹಂದಿ ಮಾಂಸ ಸೇವನೆಯನ್ನು ಈಗಲೂ ಕಾಣಬಹುದು. ಹಂದಿ ಸಾಕಣೆಯಲ್ಲಿ ತೊಡಗಿದ್ದ ಸಮುದಾಯಗಳು ಮಾತ್ರ ಇದಕ್ಕೆ ಹೊರತಾಗಿದ್ದವು.

ಪ್ರದೇಶದ ಜನರ ಆಹಾರ ಪದ್ಧತಿಯನ್ನು ಗೌರವಿಸುವ ಉದ್ದೇಶದಿಂದ 400 ವರ್ಷಗಳ ಮುಸ್ಲಿಂ ಆಡಳಿತವು ಹಂದಿ ಮಾಂಸ ಸೇವನೆಯನ್ನು ನಿಷೇಧಿಸಿರಲಿಲ್ಲ ಎಂಬುದು ಗಮನಾರ್ಹ ಅಂಶ. ಅಂದಿನ ಆಡಳಿತಗಾರರಿಗೆ ಅಂಕುಶ ಇಲ್ಲವಾಗಿತ್ತು. ಹೀಗಿದ್ದೂ ಅವರು ತಮ್ಮ ಪ್ರಜೆಗಳ ಆಹಾರದ ಹಕ್ಕನ್ನು ಕಬಳಿಸಲು ಮುಂದಾಗಲಿಲ್ಲ.

400 ವರ್ಷಗಳ ಕುತುಬ್‌ ಶಾಹಿ ಮತ್ತು ಅಸಾಫ್‌ ಜಾಹಿ ಆಡಳಿತ ಅವಧಿಯಲ್ಲಿ ಬಡ ಮುಸ್ಲಿಮರು ಮಾತ್ರ ಗೋಮಾಂಸ ಸೇವಿಸುತ್ತಿದ್ದರು. ಹಿಂದೆ ಹೈದರಾಬಾದ್ ರಾಜ್ಯ ಎನಿಸಿಕೊಂಡಿದ್ದ ಪ್ರದೇಶದ ಮೇಲ್ವರ್ಗದ ಜನರಲ್ಲಿ ಇದನ್ನು ಈಗಲೂ ಕಾಣಬಹುದು. ಅಂದಿನ ಆಡಳಿತಗಾರರ ಮತ್ತು ಜನರ ಸಂವೇದನಾಶೀಲತೆ ಹಾಗಿತ್ತು.

ಬಹುಸಂಖ್ಯಾತವಾದದ ದಬ್ಬಾಳಿಕೆ: ನಾನು ವೈಯಕ್ತಿಕವಾಗಿ ಅನುಭವಿಸಿದ ಬಹುಸಂಖ್ಯಾತವಾದದ ದಬ್ಬಾಳಿಕೆಯ ಎರಡು ಉದಾಹರಣೆಗಳನ್ನು ನೀಡುತ್ತೇನೆ. 2012ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಗೋಮಾಂಸ ಉತ್ಸವ ನಡೆದ ನಂತರ (ಆ ಉತ್ಸವದಲ್ಲಿ ನಾನು ಪಾಲ್ಗೊಂಡಿದ್ದೆ, ಗೋಮಾಂಸದ ಬಿರಿಯಾನಿ ಸೇವಿಸಿದ್ದೆ) ಜನರ ಆಹಾರ ಸಂಸ್ಕೃತಿಯ ಬಗ್ಗೆ ಬರೆಯಬೇಕು ಎಂದು ನನಗೆ ಅನಿಸಿತು. ನಾನು ಲಂಬಾಡ ಸಮುದಾಯದ ಇಬ್ಬರು ಮುಖಂಡರನ್ನು ಭೇಟಿಯಾದೆ. ನನ್ನ ವರದಿಗೆ ಸಂದರ್ಶನ ನೀಡಲು ಅಥವಾ ಗೋಮಾಂಸ ಸೇವಿಸುತ್ತೇವೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಒಬ್ಬರಾದ ನಂತರ ಇನ್ನೊಬ್ಬರಂತೆ ಹೇಳಿಬಿಟ್ಟರು. ‘ಮುಖ್ಯವಾಹಿನಿ’ಯ ವಿರುದ್ಧವಾಗಿ ನಡೆದರೆ ತಮ್ಮ ನಾಯಕತ್ವದ ಬೆಲೆ ಕಡಿಮೆಯಾಗುತ್ತದೆ, ಸಮುದಾಯ ತಮ್ಮನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಹೆದರಿಕೆ ಅವರಲ್ಲಿದ್ದಂತಿತ್ತು.

ತಾನು ಸಸ್ಯಾಹಾರಿ, ಶಿವಭಕ್ತ ಎಂದು ಅಲೆಮಾರಿ ಸಮುದಾಯವೊಂದರ ನಾಯಕ ಹೇಳಿಕೊಂಡ. ಗೋಮಾಂಸ ಸೇವಿಸುವುದನ್ನು ಒಪ್ಪಿಕೊಂಡರೆ ‘ಮುಖ್ಯವಾಹಿನಿ’ಯು ತನ್ನನ್ನು ‘ಅನರ್ಹ’ಗೊಳಿಸಬಹುದು, ತಾನು ಬಹಿಷ್ಕೃತ ಆಗಬಹುದು ಎಂಬ ಭೀತಿ ಅವರಲ್ಲಿ ಇದ್ದಂತೆ ಕಂಡಿತು. ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಾಧನೆಗೈಯುವ ಕನಸು ಸಾಕಾರವಾಗದೆ ಇರಬಹುದು ಎಂದು ಅವರು ಅಂದುಕೊಂಡಿದ್ದಿರಬಹುದು.

ಕೇಂದ್ರದಲ್ಲಿ ಬಿಜೆಪಿ ಆಳ್ವಿಕೆಯ ಕಳೆದ 18 ತಿಂಗಳುಗಳಲ್ಲಿ ಈ ದೌರ್ಜನ್ಯ ಹಲವು ಪಟ್ಟು ಹೆಚ್ಚಾಗಿದೆ. ಲೋಕಸಭೆಯಲ್ಲಿ ಬಹುಮತ ಪಡೆದು ಬಿಜೆಪಿ ಮತ್ತು ಮೋದಿ ಅಧಿಕಾರಕ್ಕೆ ಬಂದಿರುವುದರಿಂದ ಹಿಂದುತ್ವ ಗುಂಪುಗಳು ತಮ್ಮ ಅಸ್ತಿತ್ವವನ್ನು ಹಿಂಸಾತ್ಮಕ ಮಾರ್ಗ ಬಳಸಿ ವ್ಯಕ್ತಪಡಿಸುತ್ತಿವೆ.

ಬಹುಸಂಖ್ಯಾತವಾದದ ಈ ಮುನ್ನಡೆಯನ್ನು ತಡೆಯಬೇಕು. ಇದು ಸಾಧ್ಯವಾಗುವುದು ಜನರ ಪ್ರತಿರೋಧದಿಂದ ಮಾತ್ರ. ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತವಾದಕ್ಕೆ ಜಾಗವಿಲ್ಲ. ಬಹುಸಂಖ್ಯಾತವಾದವನ್ನು ಅನಿಯಂತ್ರಿತವಾಗಿ ಬೆಳೆಯಲು ಬಿಟ್ಟರೆ, ವಿಭಿನ್ನ ಮತ್ತು ವಿರುದ್ಧ ನೆಲೆಯ ಅಭಿಪ್ರಾಯಕ್ಕೆ ಅವಕಾಶ ನೀಡುವ ಪ್ರಜಾಪ್ರಭುತ್ವವೇ ಅಪಾಯಕ್ಕೆ ಸಿಲುಕುತ್ತದೆ. ಪ್ರಜಾಪ್ರಭುತ್ವದ ಜಾಗದಲ್ಲಿ ಸರ್ವಾಧಿಕಾರ ನೆಲೆಯೂರುತ್ತದೆ.

ನಾನು ಗೋಮಾಂಸ ಉತ್ಸವದಲ್ಲಿ ಪಾಲ್ಗೊಳ್ಳುತ್ತೇನೆ. ಹಂದಿ ಮಾಂಸವನ್ನು ಪ್ರಭುತ್ವ ನಿಷೇಧಿಸಿದರೆ, ಹಂದಿ ಮಾಂಸದ ಉತ್ಸವದಲ್ಲೂ ನಾನು ಪಾಲ್ಗೊಳ್ಳುತ್ತೇನೆ. ನನ್ನ ಆತಂಕಗಳನ್ನು ಮತ್ತು ನೋವನ್ನು ಹಂಚಿಕೊಳ್ಳುವ ಬಹುಸಂಖ್ಯಾತ ಹಿಂದೂಗಳ, ನನ್ನ ಕುಟುಂಬದ ಅಥವಾ
ಲಕ್ಷಾಂತರ ಹಿಂದೂಗಳ ಹೆಸರಿನಲ್ಲಿ ತಮ್ಮ ಅಸಹಿಷ್ಣುತೆಯನ್ನು ಪ್ರದರ್ಶಿಸಲು ನಾನು ಅಲ್ಪಸಂಖ್ಯಾತ ಹಿಂದುತ್ವ ಮೂಲಭೂತವಾದಿಗಳಿಗೆ ಅವಕಾಶ ಕೊಡಲಾರೆ.

ಲೇಖಕಿ ಹಿರಿಯ ಪತ್ರಕರ್ತೆ, ಅಧ್ಯಾಪಕಿ, ಸಂಶೋಧಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT