ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಿದ ರಥ; ಕುಸಿದುಹೋದ ಸಾರಥಿ

ಒಗಟಿನಂತಿರುವ ಅಡ್ವಾಣಿ ಎಂಬ ‘ಲೋಹಪುರುಷ’ ಎಷ್ಟು ಮಂದಿಗೆ ಗೊತ್ತು?
Last Updated 27 ಮಾರ್ಚ್ 2019, 6:22 IST
ಅಕ್ಷರ ಗಾತ್ರ

‘ರಥಯಾತ್ರಿ’ ಎಂದೇ ಖ್ಯಾತರಾಗಿರುವ ಲಾಲ್ ಕೃಷ್ಣ ಅಡ್ವಾಣಿ ಅವರ ರಾಜಕೀಯ ಜೀವನರಥ ಗುರಿ ಮುಟ್ಟುವ ಮೊದಲೇ ಮುರಿದುಬಿದ್ದಿದೆ. ಐದು ವರ್ಷಗಳಿಂದ ಅದು ಕುಂಟುತ್ತಾ ಸಾಗಿತ್ತು. ಪ್ರೇಕ್ಷಕರಲ್ಲಿ ಅಡಿಗಡಿಗೆ ಕುತೂಹಲ ಕೆರಳಿಸಿ, ಕೊನೆಗೆ ಸಪ್ಪೆ ಕ್ಲೈಮ್ಯಾಕ್ಸ್ ಮೂಲಕ ಕೊನೆಗೊಂಡ ಚಲನಚಿತ್ರದಂತಾಗಿದೆ ಅಡ್ವಾಣಿ ಎಂಬ ದುರಂತನಾಯಕನ ರಾಜಕೀಯ ಬದುಕಿನ ಕತೆ.

ಅಟಲ್‌ ಬಿಹಾರಿ ವಾಜಪೇಯಿ ಎಲ್ಲರಿಗೂ ಗೊತ್ತಿದ್ದರು. ಆದರೆ, ಅಡ್ವಾಣಿ ಎಂಬ ‘ಲೋಹಪುರುಷ’ ಎಷ್ಟು ಮಂದಿಗೆ ಗೊತ್ತು? 986 ಪುಟಗಳ ಅವರ ಆತ್ಮಕಥನದ ಮೂಲೆ ಮೂಲೆ ತಡಕಾಡಿದರೂ ಅವರು ಯಾರು ಎನ್ನುವ ಉತ್ತರ ನಮಗೆ ಸಿಗುವುದಿಲ್ಲ. 70 ವರ್ಷಗಳಿಂದ ರಾಜಕೀಯದಲ್ಲಿರುವ ಅಡ್ವಾಣಿ ಸುಲಭದಲ್ಲಿ ಒಡೆಯಲಾಗದ ಒಗಟು.

ಬಿಜೆಪಿ ಇತಿಹಾಸದಲ್ಲಿ 1984ರಿಂದ 1991ರವರೆಗಿನ ಅವಧಿಗೆ ವಿಶೇಷ ಮಹತ್ವ ಇದೆ. ಆ ಅವಧಿಯಲ್ಲಿಯೇ ಬಿಜೆಪಿ ಸದಸ್ಯಬಲ ಎರಡರಿಂದ 120ಕ್ಕೇರಿದ್ದು. ಆ ಕಾಲದಲ್ಲಿ ಪಕ್ಷದ ಸಾರಥಿಯಾಗಿದ್ದ ಅಡ್ವಾಣಿ, ರಥಯಾತ್ರೆಯಲ್ಲಿ ಹೊರಟು ಬಿಸಿಲು, ಮಳೆ, ಗಾಳಿಯೆನ್ನದೆ ಊರೂರು ಅಲೆದಿದ್ದರು. ರಾಜಕೀಯದ ಅಂಚಿನಲ್ಲಿದ್ದ ಧರ್ಮವನ್ನು ಕೇಂದ್ರಕ್ಕೆ ಎಳೆದುತಂದು ಹಿಂದುತ್ವದ ಹುಚ್ಚೆಬ್ಬಿಸಿ ಧಾರ್ಮಿಕ ಉನ್ಮಾದವನ್ನು ಬಡಿದೆಬ್ಬಿಸಿದ್ದರು. ಅದರ ಫಲವೇ 120 ಸ್ಥಾನಗಳ ಇಳುವರಿ.

ಅಲ್ಲಿಂದ ಮುಂದುವರಿಸಿದ ರಥಯಾತ್ರೆ, ಬಾಬರಿ ಮಸೀದಿ ಧ್ವಂಸದಲ್ಲಿ ಕೊನೆಗೊಂಡಿತ್ತು. ದೇಶದ ಜನ ಆ ಘಟನೆಯ ಖಳನಾಯಕನೆಂದು ಅಡ್ವಾಣಿಯವರತ್ತ ಕಲ್ಲು ಬಿಸಾಡುತ್ತಿದ್ದಾಗ, ವಾಜಪೇಯಿಯವರು ‘ಅದು ನನ್ನ ಜೀವನದ ಅತ್ಯಂತ ದುಃಖಕರ ಘಟನೆ’ ಎಂದು ಕಣ್ಣೀರು ಹಾಕಿ ಬಿಜೆಪಿ ವಿರೋಧಿಗಳ ಅನುಕಂಪಕ್ಕೂ ಪಾತ್ರರಾಗಿದ್ದರು. 1996ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸದಸ್ಯಬಲ 161ಕ್ಕೆ ಏರಿದಾಗ ಪ್ರಧಾನಿಯಾಗಿ ಆನಂದಬಾಷ್ಪ ಸುರಿಸಿದ್ದು ಮಾತ್ರ ವಾಜಪೇಯಿ.

ಅಡ್ವಾಣಿ ನಾಯಕರಾಗಲು ವಂಶಪರಂಪರೆಯ ಬಳ್ಳಿ ಹಿಡಿದು ನೇತಾಡಿದವರಲ್ಲ, ಹಿರಿತನದ ಸಾಲು ಮುರಿದು ಮುನ್ನುಗ್ಗಿದವರಲ್ಲ. ಯಾವ ಪರಿವಾರಕ್ಕಾಗಿ ಲೋಕಾಪವಾದದ ಕಿರೀಟ ಹೊತ್ತುಕೊಂಡರೋ, ಮುಂದೊಂದು ದಿನ ಅದೇ ಪರಿವಾರದ ನಾಯಕ ಆರ್‌ಎಸ್ಎಸ್ ಸರಸಂಘಚಾಲಕ ಕೆ.ಎಸ್.ಸುದರ್ಶನ್ ಅವರು ವಾಜಪೇಯಿ ಮತ್ತು ಅಡ್ವಾಣಿಯವರು ನಿವೃತ್ತಿಯಾಗುವಂತೆ ಫರ್ಮಾನು ಹೊರಡಿಸಿದ್ದರು. 2007ರಲ್ಲಿ ಮುಂದಿನ ಪ್ರಧಾನಿ ಅಡ್ವಾಣಿ ಎಂಬ ಕೂಗೆದ್ದಾಗ, ವಾಜಪೇಯಿಯವರು ಮರಳಿ ಬರುತ್ತೇನೆ ಎನ್ನುವ ಸಂದೇಶದ ‘ಯಜ್ಞ ಮುಗಿದಿಲ್ಲ... ಆಹುತಿ ಬಾಕಿ ಇದೆ’ ಎಂಬ ಕವನ ಹೊಸೆದು ಅಡ್ಡಗಾಲು ಹಾಕಿದ್ದರು. ನಂತರ ಅಡ್ವಾಣಿ ಅವರು ಜಿನ್ನಾ ಬಗ್ಗೆ ನೀಡಿದ್ದ ಹೇಳಿಕೆಯನ್ನೇ ಅಪರಾಧ ಎಂದು ಪರಿಗಣಿಸಿ, ಅವರಿಂದ ಪಕ್ಷದ ಅಧ್ಯಕ್ಷ ಸ್ಥಾನವನ್ನೇ ಕಿತ್ತುಕೊಳ್ಳಲಾಯಿತು. ಕೊನೆಗೂ 2009ರ ಚುನಾವಣೆಯಲ್ಲಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿ ಮೆರೆದಾಡುತ್ತಿದ್ದಾಗಲೇ ಧುತ್ತನೆ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಹೆಸರನ್ನು ತೇಲಿಬಿಡಲಾಯಿತು.

ಮೋದಿಯವರು ಪ್ರಧಾನಿಯಾದ ಕೂಡಲೇ ಮಾಡಿದ ಮೊದಲ ಕೆಲಸ ಬಿಜೆಪಿಯನ್ನು ‘ಅಡ್ವಾಣಿಮುಕ್ತ’ ಮಾಡಲು ಕಾರ್ಯತಂತ್ರ ಹೆಣೆದದ್ದು. ಅವಕಾಶ ಸಿಕ್ಕಾಗೆಲ್ಲ ಸಾರ್ವಜನಿಕವಾಗಿ ಅವಮಾನಕಾರಿಯಾಗಿ ನಡೆಸಿಕೊಂಡಿದ್ದ ಮೋದಿಯವರು ಈಗ ಸೌಜನ್ಯಕ್ಕಾಗಿಯಾದರೂ ಸೂಚನೆಯನ್ನೇ ನೀಡದೆ, ಲೋಕಸಭಾ ಚುನಾವಣೆಯ ಟಿಕೆಟನ್ನೇ ನಿರಾಕರಿಸಿ ಬಲವಂತದ ರಾಜಕೀಯ ನಿವೃತ್ತಿಯನ್ನು ಅವರ ಮೇಲೆ ಹೇರಿದ್ದಾರೆ.

ಅಡ್ವಾಣಿ ತಮ್ಮ ರಾಮರಥಕ್ಕೆ ಸಾರಥಿಯಾಗಿ ಆರಿಸಿಕೊಂಡದ್ದು ಮೋದಿಯವರನ್ನು. ಗುಜರಾತ್ ನರಮೇಧದ ನಂತರ ಮೋದಿಯವರನ್ನು ಮನೆಗೆ ಕಳಿಸಲು ವಾಜಪೇಯಿ ಹೆಚ್ಚುಕಡಿಮೆ ನಿರ್ಧರಿಸಿಬಿಟ್ಟಿದ್ದರು. ಆಗ ಅವರನ್ನು ಉಳಿಸಿದ್ದು ಇದೇ ಅಡ್ವಾಣಿ. ಅಂತಹ ಹಿತಚಿಂತಕನನ್ನು ಮೋದಿ ಈ ಪರಿ ದ್ವೇಷಿಸಲು ಕಾರಣ ಏನು ಎನ್ನುವುದು ಮಾತ್ರ ನಿಗೂಢ, ಅಭೇದ್ಯವಲ್ಲ.

ಸ್ವಲ್ಪ ಹಿಂದಕ್ಕೆ ಹೋಗೋಣ. 2009ರ ಲೋಕಸಭಾ ಚುನಾವಣೆಯ ಸೋಲಿನ ನಂತರವೂ ಅಡ್ವಾಣಿಯವರು ನಿರಾಶರಾಗಿ ಮೂಲೆ ಸೇರಿರಲಿಲ್ಲ. 2014ರ ಲೋಕಸಭಾ ಚುನಾವಣೆಗೆ ತಾಲೀಮು ನಡೆಸುತ್ತಿದ್ದ ಅವರು, 2011ರ ಕೊನೆಭಾಗದಲ್ಲಿ ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ಘೋಷಿಸಿದ್ದರು. ಅದೇ ವೇಳೆ ಇನ್ನೊಂದೆಡೆ ಮೋದಿಯವರು ದೆಹಲಿ ಯಾತ್ರೆಗೆ ಸಜ್ಜಾಗುತ್ತಿದ್ದರು. ರಾಮರಥ ಹೊರಟಿದ್ದು ಗುಜರಾತ್‌ನಿಂದ, ಅದಕ್ಕೆ ಸಾರಥಿಯಾಗಿದ್ದವರು ಮೋದಿ. ಆದರೆ 2011ರ ರಥಯಾತ್ರೆ ಹೊರಟಿದ್ದು ಮಾತ್ರ ಬಿಹಾರದಿಂದ. ಅದಕ್ಕೆ ಚಾಲನೆ ನೀಡಿದ್ದು ಮೋದಿಯವರ ಕಟ್ಟಾ ವಿರೋಧಿಯಾಗಿದ್ದ ನಿತೀಶ್ ಕುಮಾರ್. ಇವು ಕೇವಲ ಕಾಕತಾಳೀಯ ಘಟನೆಗಳೆಂದು ತಳ್ಳಿಹಾಕಲಾಗದು.

ಆ ಮೂಲಕ ಭವಿಷ್ಯದ ರಾಜಕೀಯ ದಾಳಗಳ ಉರುಳಾಟದ ಸೂಚನೆಯನ್ನು ಅಡ್ವಾಣಿ ನೀಡಿದ್ದರೇ? ಈ ಕುತೂಹಲದ ಪ್ರಶ್ನೆ ಮೂಡಲು ಇನ್ನೂ ಕೆಲವು ಕಾರಣಗಳಿವೆ. ಆ ಕಾಲದಲ್ಲಿ ‘ಡೆಲ್ಲಿ 4’ ಎಂದೇ ಖ್ಯಾತರಾಗಿದ್ದ ವೆಂಕಯ್ಯ ನಾಯ್ಡು, ಅನಂತಕುಮಾರ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಎಂಬ ಅಡ್ವಾಣಿ ಶಿಷ್ಯರು ಗುರುಗಳ ಪಟ್ಟಾಭಿಷೇಕದ ಭೂಮಿಕೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಅಷ್ಟರಲ್ಲಿ ಜಿನ್ನಾ ವಿವಾದ ಎದ್ದಿತು. ನಂತರ ಅಡ್ವಾಣಿಯವರನ್ನು ವಾನಪ್ರಸ್ಥಾಶ್ರಮಕ್ಕೆ ಕಳಿಸಲೇಬೇಕೆಂದು ನಿರ್ಧರಿಸಿದ್ದ ನಾಗಪುರ ಹೈಕಮಾಂಡ್ ಎಚ್ಚೆತ್ತುಕೊಂಡಿತ್ತು. ಅಡ್ವಾಣಿಯವರ ರಥಯಾತ್ರೆ ಹೊರಡುವ ಅಚ್ಚರಿಯ ಬಂಡುಕೋರತನ ಅವರನ್ನು ಕೆರಳಿಸಿತ್ತು. ಇದೇ ಅವಕಾಶವನ್ನು ಬಳಸಿಕೊಂಡ ಮೋದಿಯವರ ತಲೆಯಲ್ಲಿ ದೆಹಲಿಗೆ ಹೋಗುವ ಕನಸು ಮತ್ತೆ ಚಿಗುರಿತ್ತು.

ಮೋದಿ ಯಾವುದನ್ನೂ ಸುಲಭದಲ್ಲಿ ಮರೆಯುವವರಲ್ಲ. ಅವರು ಪ್ರಧಾನಿಯಾದ ನಂತರ ಅಡ್ವಾಣಿಯವರನ್ನು ಮಾತ್ರ ಪಕ್ಕಕ್ಕೆ ಸರಿಸಲಿಲ್ಲ, ಅವರ ಶಿಷ್ಯ ಬಳಗದ ವೆಂಕಯ್ಯ ನಾಯ್ಡು ಅವರನ್ನು ಉಪರಾಷ್ಟ್ರಪತಿ ಮಾಡಿ ರಾಜಕೀಯ ಸನ್ಯಾಸ ಹೇರಿದರು. ಸುಷ್ಮಾ ಅವರದು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಹ ಸ್ಥಿತಿ. ಅನಂತಕುಮಾರ್ ಮೂರು ವರ್ಷ ಮೋದಿ ಮನೆ ಬಾಗಿಲು ಕಾದ ನಂತರ ಪ್ರವೇಶ ದೊರೆಯಿತಾದರೂ ಅವರು ಹೆಚ್ಚು ದಿನ ಬದುಕಲಿಲ್ಲ. ಅನಾರೋಗ್ಯದಿಂದಾಗಿ ಜೇಟ್ಲಿ ಸ್ವಯಂ ನಿವೃತ್ತಿ ಘೋಷಣೆ ಮಾಡುವ ಸ್ಥಿತಿಯಲ್ಲಿದ್ದಾರೆ. ಐ.ಟಿ. ಇಲಾಖೆ ವಶದಲ್ಲಿದ್ದ ಯಡಿಯೂರಪ್ಪ ಡೈರಿ ಈಗ ಲೀಕ್ ಆಗಿದೆ. ಅದರಲ್ಲಿ ಅಡ್ವಾಣಿ ಹೆಸರು ಮಾತ್ರವಲ್ಲ, ಇತ್ತೀಚೆಗೆ ಸಣ್ಣಗೆ ಸದ್ದು ಮಾಡುತ್ತಿರುವ ನಿತಿನ್ ಗಡ್ಕರಿ ಹೆಸರೂ ಸೇರಿದೆ. ಅಲ್ಲಿಗೆ ಮೋದಿ-ಶಾ ಹಾದಿ ಸದ್ಯಕ್ಕೆ ಸಿಗ್ನಲ್‌ಫ್ರೀ.

ಈಗ ಅಡ್ವಾಣಿ ಮುಂದಿರುವುದು ಎರಡೇ ಆಯ್ಕೆ. 1. ಹಿರಿಯ ನಾಗರಿಕನ ಕೋಟಾದಲ್ಲಿ ರಾಜ್ಯಸಭೆಯಲ್ಲೊಂದು ಸ್ಥಾನಕ್ಕೆ ಮೋದಿಯವರೆದುರು ಕೈಯೊಡ್ಡುವುದು. 2. ಸ್ವಯಂ ರಾಜಕೀಯ ನಿವೃತ್ತಿ ಘೋಷಿಸುವುದು. ಇಳಿವಯಸ್ಸಿನಲ್ಲಿ ಇಂತಹದ್ದೊಂದು ಹತಾಶೆಯ ಭಾರ ಹೊತ್ತು ಜೀವನ ಕಳೆಯುವುದು ಅತ್ಯಂತ ನೋವಿನ ಸಂಗತಿ. ಅವರ ಇಂದಿನ ಸ್ಥಿತಿ, ದೇಶವನ್ನು ಕೋಮವಾದದ ಅಗ್ನಿಕುಂಡಕ್ಕೆ ತಳ್ಳಿದ ಪಾಪಕ್ಕೆ ಪ್ರಕೃತಿ ನೀಡಿದ ನ್ಯಾಯದ ತೀರ್ಪು ಆಗಿರಬಹುದೇ? ಅವರ ಮೌನ, ಸ್ವಯಂ
ಪ್ರಾಯಶ್ಚಿತ್ತದ ಶಿಕ್ಷೆಯ ರೂಪವಾಗಿರಬಹುದೇ?

ಅಡ್ವಾಣಿಯವರ ರಾಜಕೀಯ ಒಲವು-ನಿಲುವುಗಳ ಬಗ್ಗೆ ಭಿನ್ನಾಭಿಪ್ರಾಯಗಳೇನೇ ಇರಲಿ, ಅವರು ಬಯಸಿದ ಬೆವರಿನ ಗಳಿಕೆ, ಮಾಡಿದ ಕೆಲಸಕ್ಕೆ ಕೂಲಿ ನ್ಯಾಯಬದ್ಧವಾಗಿ ಅವರಿಗೆ ಸಿಗಬೇಕಿತ್ತು. ಇಂತಹವರು ಒಂದಷ್ಟು ಕಾಲವಾದರೂ ದೇಶದ ಅತ್ಯುನ್ನತ ಹುದ್ದೆಯಲ್ಲಿ ಕೂರಬೇಕಿತ್ತೇನೋ? ಅವರು ಕೂತಿದ್ದರೆ ದೇಶ ಇಂದಿಗಿಂತ ಇನ್ನಷ್ಟು ಖಂಡಿತ ಕೆಟ್ಟು ಹೋಗುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT