ಮಂಗಳವಾರ, ಮಾರ್ಚ್ 21, 2023
29 °C

ಚುರುಮುರಿ: ಸೌಧ ಶುದ್ಧಿ

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

‘ಭ್ರಷ್ಟಾಚಾರದಿಂದ ಅಪವಿತ್ರಗೊಂಡಿರುವ ವಿಧಾನಸೌಧವನ್ನು ಗಂಜಲದಿಂದ ಪವಿತ್ರಗೊಳಿಸಬಹುದಾ?’ ಸುಮಿ ಕೇಳಿದಳು.

‘ಗೊತ್ತಿಲ್ಲ, ಆದರೆ ಗಂಜಲ ಸಿಂಪಡಣೆ ಮಾಡಿದರೆ ವಿಧಾನಸೌಧದ ಜೇಡ, ಜಿರಲೆ, ಗೆದ್ದಲಂತೂ ನಾಶವಾಗಬಹುದು’ ಅಂದ ಶಂಕ್ರಿ.

‘ಅತಿಯಾದ ಭ್ರಷ್ಟಾಚಾರದಿಂದ ವಿಧಾನಸೌಧದ ಪಾವಿತ್ರ್ಯಕ್ಕೆ ಅಪಚಾರವಾಗಿದೆ ಅಂತ ಸೌಧ ಸಹವಾಸಿಗಳೇ ಆರೋಪಿಸಿದ್ದಾರೆ. ಗಂಜಲ, ಗಂಗಾಜಲದಿಂದ ಶುದ್ಧಿ ಮಾಡಬೇಕಂತೆ. ವಿಧಾನಸೌಧದ ಜೊತೆಗೆ ಅದರೊಳಗಿನವರೂ ಗಂಜಲ ಸ್ನಾನ ಮಾಡಿ ಶುದ್ಧರಾಗಬೇಕು ಅಲ್ವೇನ್ರೀ?’

‘ಹೌದು, ಜೊತೆಗೆ, ಕೊರೊನಾ ಕಾಲದಲ್ಲಿ ಕೈ ತೊಳೆಯಲು ಸ್ಯಾನಿಟೈಸರ್ ಬಳಸುವಂತೆ ಸರ್ಕಾರಿ ಕಚೇರಿ ಜನ ಗಂಜಲದಲ್ಲಿ ಕೈ ತೊಳೆದು ಶುದ್ಧಹಸ್ತರಾಗಿ ಕಚೇರಿ ಪ್ರವೇಶಿಸುವ ಪದ್ಧತಿಯನ್ನೂ ಜಾರಿ ಮಾಡಬೇಕು’.

‘ಮಾಡಬೇಕು, ಹೀಗೆ ಮಾಡಿದರೆ ಗಂಜಲಕ್ಕೆ ಬೇಡಿಕೆ ಬರುತ್ತದೆ. ಹಾಲಿನ ಡೇರಿಯಂತೆ ಗಂಜಲ ಡೇರಿಗಳೂ ಶುರುವಾಗುತ್ತವೆ. ಹೈನುಗಾರಿಕೆ ಜೊತೆಗೆ ಗಂಜಲಗಾರಿಕೆಯನ್ನೂ ಆರಂಭಿಸಿದರೆ ರೈತರ ಆದಾಯ ದ್ವಿಗುಣವಾಗುತ್ತದೆ. ವಿಧಾನಸೌಧ ಒಳಗೊಂಡಂತೆ ಸರ್ಕಾರಿ ಕಚೇರಿಗಳ ಶುದ್ಧೀಕರಣ ಮಾಡಲು ಸರ್ಕಾರ ಬಜೆಟ್‍ನಲ್ಲಿ ವಿಶೇಷ ಗಂಜಲ ಅನುದಾನ ಮೀಸಲಿಡಬೇಕು’.

‘ಭ್ರಷ್ಟಾಚಾರ ತಡೆಗೆ ಇಷ್ಟೆಲ್ಲಾ ವ್ಯವಸ್ಥೆ ಮಾಡಬೇಕಾ? ಭ್ರಷ್ಟರು, ಭ್ರಷ್ಟಾಚಾರ ಬೆಂಬಲಿಸುವವರನ್ನು ಮಟ್ಟ ಹಾಕಿದರೆ ಆಗೋದಿಲ್ವಾ?’

‘ಭ್ರಷ್ಟಾಚಾರ ತಡೆಯಬೇಕಾಗಿದ್ದ ಜನನಾಯಕರೇ ಭ್ರಷ್ಟಾಚಾರದಲ್ಲಿ ತೊಡಗುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ. ಎಲೆಕ್ಷನ್ ಸಮಯದಲ್ಲಿ ಮತದಾರರು ರಾಜಕಾರಣಿಗಳ ಭ್ರಷ್ಟಾಚಾರದ ಕಾಣಿಕೆ ಪಡೆಯುವುದು ಹೊಲವೇ ಬೇಲಿಗೆ ಬಲಿಯಾದಂತೆ...’ ಶಂಕ್ರಿ ಹೇಳಿದ.

‘ಮೆಲ್ಲಗೆ ಮಾತಾಡ್ರೀ...ನಮ್ಮ ಮನೆಯನ್ನೂ ಗಂಜಲದಿಂದ ಶುದ್ಧಿ ಮಾಡಬೇಕಾಗುತ್ತದೆ... ಎಲೆಕ್ಷನ್ ನಾಯಕರಿಂದ ನಾನೂ ಕುಕ್ಕರ್, ಸೀರೆ, ಬೆಳ್ಳಿ ಬಟ್ಟಲು ಈಸ್ಕೊಂಡಿದ್ದೀನಿ...’ ಸುಮಿ ಪಿಸುಗುಟ್ಟಿದಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.