ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಮಂತ್ರಿಗಿರಿ ಮಂತ್ರ

Last Updated 15 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಬೆಕ್ಕಣ್ಣ ಬೆಳಗ್ಗೆ ಬೆಳಗ್ಗೆ ಲೊಚ್‌ಗುಡುತ್ತ ಕೂತಿತ್ತು. ‘ಅದೇನ್ ವಳ್ಳೆ ಹಲ್ಲಿ ಹಂಗೆ ಲೊಚ್‌ಗುಡಾಕೆ ಹತ್ತಿ... ಈಗೇನಾತಲೇ ಅಂಥಾದು...’ ಎಂದು ರೇಗಿದೆ.

‘ಪಾಪ, ನಮ್ಮ ಸುರೇಶಮಾಮಾ ಎಲ್ಲ ಹುಡುಗ್ರಿನ್ನ ಹೈಸ್ಕೂಲು, ಪಿಯು ಪಾಸು ಮಾಡಿ ಪುಣ್ಯಕಟಗೊಂಡ, ಆದ್ರ ಅವನೇ ಹೈಕಮಾಂಡ್ ಪರೀಕ್ಷೆದಾಗ ಹಿಂಗ ಫೇಲ್ ಆಗೂದಾ...’ ಎನ್ನುತ್ತ ಮತ್ತೆ ಲೊಚ್‌ಗುಟ್ಟಿತು.

‘ಅವರೊಬ್ಬರೇ ಅಲ್ಲೇಳು. ಅತ್ತಾಗೆ ರಾಮದಾಸರೂ ಹೇಳ್ಯಾರಲ್ಲ... ಎಲ್ಲ ಛಲೋನೆ ಬರ್ದಿದ್ದೆ, ಆದರೂ ಇಂಟರ್ನಲ್ ಮಾರ್ಕ್ಸ್ ಕಮ್ಮಿ ಆಗ್ಯಾವು ಅಂತ. ಎಲ್ಲಾರೂ ಎಲ್ಲಾ ಸಲನೂ ಪಾಸ್ ಆಗಾಬೇಕು ಅಂತೇನಿಲ್ಲೇಳು’ ನಾನು ವೇದಾಂತ ಕುಟ್ಟಿದೆ.

‘ಅತ್ತಾಗೆ ನಮ್ಮ ಆನಂದಮಾಮಾನೂ ನನಗ ಪ್ರವಾಸ ಮಾಡೂದು ಆಗಿಬರಂಗಿಲ್ಲ, ದೊಡ್ಡ ಕುಳ ಅದೀನಿ, ದೊಡ್ಡ ಖಾತೆ ಕೊಡ್ರಿ ಅಂತ ಕೇಳ್ಯಾನ, ಅಗದಿ ಖರೇನ ಅದ ಮತ್ತ’ ಎಂದು ಮುಸಿಮುಸಿ ನಕ್ಕಿತು.

‘ಹ್ಞೂಂ ಮತ್ತ... ನಿಮ್ಮ ಆನಂದಮಾಮಾ ದೊಡ್ಡ ಖಾತೆ ನಿಭಾಯಿಸೂದ್ರಾಗ ಪಿಎಚ್‌ಡಿ ಮಾಡ್ಯಾರ ನೋಡು. ಎಲ್ಲಾರಿಗೂ ಹಾಲು ಕೊಡೋ ಎಮ್ಮಿನೇ ಬೇಕು... ಬರಡು ಎಮ್ಮಿ ಯಾರಿಗೆ ಬೇಕು’.

‘ನಾ ಅದಕ್ಕನ ಒಂದು ಉಪಾಯ ಸಲಹೆ ಮಾಡೀ, ಹೈಕಮಾಂಡಿಗೆ ಮುಚ್ಚಿದ ಲಕೋಟೆ ಕೊಟ್ಟು ಬಂದೀನಿ. ಏನಪಾ ಅಂದರ... ಒಂದೊಂದು ಇಲಾಖೆಗೂ ಮಂತ್ರಿ, ಉಪಮಂತ್ರಿ, ಉಪೋಪಮಂತ್ರಿ, ಕಿರುಮಂತ್ರಿ ಅಂತ ನಾಕೈದು ಕುರ್ಚಿ ಹಾಕಿ, ಸೀನಿಯಾರಿಟಿ ಮೇಲೆ ಕುಂಡ್ರಿಸಬೇಕು. ಯಾವ್ಯಾವ ಫೈಲಿಗೆ ಯಾರು ಸಹಿ ಹಾಕಬಕು ಅಂತ ಮಾರ್ಕ್ ಮಾಡಿ, ನಿಮ್ಮ ನಿಮ್ಮ ಎಮ್ಮಿ ಹಾಲು ನೀವೇ ಹಿಂಡುಕೋರಿ ಅಂತ ಬಿಡಬೇಕು. ಒಬ್ಬರು ಇನ್ನೊಬ್ಬರ ಎಮ್ಮಿ ಹಾಲು ಹಿಂಡೂ ಹಂಗಿಲ್ಲ. ಎಲ್ಲಾ ಶಾಸಕರಿಗೂ ಒಂದಲ್ಲ ಒಂದು ಮಂತ್ರಿಕುರ್ಚಿ, ಹಾಲುಹಿಂಡೂ ಎಮ್ಮಿ, ಗೂಟದ ಕಾರು ಸಿಗತಾವು. ಭಿನ್ನಾಭಿಪ್ರಾಯನೇ ಇರಂಗಿಲ್ಲ... ಎಲ್ಲಾರೂ ಅಗದಿ ಭಯಂಕರವಾಗಿ ಜನತಾ ಜನಾರ್ದನ ಸೇವಾ ಮಾಡತಾರ... ಹೌದಿಲ್ಲೋ’.

ಮಾರ್ಜಾಲೋಪಾಯ ಹೇಳುತ್ತಲೇ ಖೊಳ್ಳನೆ ನಕ್ಕಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT