ಐಆರೆಸ್ ಟ್ರೈನಿಂಗ್

ಬುಧವಾರ, ಜೂಲೈ 17, 2019
27 °C

ಐಆರೆಸ್ ಟ್ರೈನಿಂಗ್

Published:
Updated:
Prajavani

‘ಅಲ್ಲಾ ಸಾರ್, ಸ್ವಾಮಿಗಳು ಹಿಂಗೆ ಬೈದರೆ ಹೆಂಗೆ?’ ಅಂದೆ. ತುರೇಮಣೆ ತಕ್ಷಣ ‘ಹ್ಞೂ ಕಣಪ್ಪಾ, ಈಗ ಸ್ವಾಮಿಗಳಿಗೂ ನೀತಿಸಂಹಿತೆ ಬೇಕಾಯ್ತದೆ. ಅದನ್ನ ಕಲಿಸಕ್ಕೆ ಪ್ರೊಫೆಶನಲ್ ಟ್ರೈನಿಂಗು, ಅದಕ್ಕೊಂದು ಸರ್ಟಿಫಿಕೇಶನ್ನು ಇರಬೇಕು!’ ಅಂದ್ರು. ‘ಅದೇನ್ಸಾರ್ ಅದು?’ ಅಂತ ಕ್ವಶ್ಚೆನ್ ಮಾಡಿದೆ.

‘ನೋಡ್ಲಾ ನಾನು ಒಂದು ಕಾಲೇಜು ಮಾಡತಾ ಇವ್ನಿ. ಅಡ್ಮಿಶನ್ನಿಗೆ ಎಂಟ್ರೆನ್ಸ್ ಎಗ್ಸಾಂ ಇರತದೆ. ಇಪ್ಪತ್ತೇ ಸೀಟು. ಎರಡೊರ್ಷದ ಕೋರ್ಸ್ ಆದಮೇಲೆ ಐಆರೆಸ್ ಸರ್ಟಿಫಿಕೇಟ್ ಕೊಡತೀವಿ’ ಅಂದ್ರು ತುರೇಮಣೆ. ನನಗೇನೂ ಅರ್ಥವಾಗಲಿಲ್ಲ. ನನ್ನ ಮೌನ ನೋಡಿ ಅವರೇ ಮುಂದುವರಿಸಿದರು. ‘ಐಆರೆಸ್ ಅಂದರೆ ಇಂಡಿಯನ್ ರಿಲಿಜಿಯಸ್ ಸರ್ವಿಸ್ ಅಂತ ಕಣೋ. ಇಲ್ಲಿ ಡಿಗ್ರಿ ತಗಂಡೋರಿಗೆ ಎಲ್ಲಾ ಮಠದಲ್ಲೂ ಪೋಸ್ಟಿಂಗ್ ಸಿಕ್ತದೆ’ ಅಂದ್ರು.

‘ಅಂದ್ರೆ ಸಾರ್ ಕಾಲೇಜಿನ ಸಿಲಬಸ್ಸು?’ ಅಂತ ಕೇಳಿದೆ.

‘ಆರಾರು ತಿಂಗಳು ನೀತಿ-ನೇಮ, ಮಾತು- ಕಥೆ ಕಲಿಸ್ತೀವಿ. ಆಮೇಲೆ ಆರು ತಿಂಗಳು ಗಾಳಿಗಂಟ್ಲು ಮಾಡಿಕಳದೇ ಇರದು ಹೆಂಗೆ ಅಂತಾ ಲ್ಯಾಬು! ಕೊನೇ ಆರು ತಿಂಗಳು ಹಿಮಾಲಯದೇಲಿ ಇಂಟರ್ನ್‌ಶಿಪ್ಪು. ಎರಡು ಜೊತೆ ಬಟ್ಟೆ, ಒಂದು ಚಾಪೆ, ನಾಲ್ಕು ಪಾತ್ರೆ ಅಷ್ಟೀಯೆ ಕೊಡದು. ಹೀಟ್ರು-ಕ್ವಾಟ್ರು ಬಳಸಂಗಿಲ್ಲ! ಗೆದ್ದು ಬಂದ್ರೆ ಡಿಗ್ರಿ. ಇಲ್ಲದಿದ್ರೆ ಗೆಟೌಟ್’ ಅಂದರು.

‘ನಿಮ್ಮ ವಿಚಾರ ಚನ್ನಾಗದೆ ಸಾರ್. ಹಂಗೀಯೆ ರಾಜಕೀಯದೋರಿಗೂ ಐಪಿಎಸ್ ಕಾಲೇಜು ಮಾಡಿ?’ ಅಂದೆ.

‘ಹ್ಞೂ ಕಣಲಾ ಉಂಡೂಹೋದ ಕೊಂಡೂ ಹೋದ ಅಂತ ಪಕ್ಷ ಮಾಡ್ತಿದೀವಿ. ನಮ್ಮ ಸ್ವಾಮಿಗಳನ್ನೇ ಎಲೆಕ್ಷನ್ನಿಗೆ ನಿಲ್ಲಿಸತೀವಿ. ಜನ ವೋಟು-ನೋಟು ಕೊಡತರೆ! ಗೆದ್ದ ಮೇಲೆ ಉಣ್ಣಕೆ ಕೊಟ್ಟೋರ ಕಡೆಗೆ ಸಾಮೂಹಿಕವಾಗಿ ಜೈ ಅಂತೀವಿ’ ಅಂದ್ರು ತುರೇಮಣೆ.

‘ಸರಿ ಸಾರ್ ಗೆದ್ದೋರು ಹೈಕಮಾಂಡ್ ಮಾತು ಕೇಳದಿದ್ದರೆ?’ ಅಂತ ಕೇಳಿದೆ.

‘ನೋಡ್ಲಾ ಎಲೆಕ್ಷನ್ನಿಗೆ ನಿಲ್ಲುವಾಗಲೇ ಅವರ ತಾವು ಮುಂಗಡವಾಗಿ ಕ್ಷಮಾಪಣಾ ಪತ್ರ, ರಾಜೀನಾಮೆ ಬರೆಸಿಕಂಡು ಇಟ್ಟಿರತೀವಿ’ ಅಂದ್ರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !