ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರದರತ್ನ

Last Updated 21 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ಆವತ್ತು ನಡು ರಾತ್ರೀಲಿ ಪಕ್ಕದಲ್ಲಿ ಕೋಲಿಡಕಂಡು ಕೂತಿದ್ದ ಗಾಂಧೀಜಿ ‘ಲೇ ಶ್ರೀಸಾಮಾನ್ಯ ಎದ್ದೇಳಲಾ ಮಗ?’ ಅಂತ ಕೋಲಲ್ಲಿ ತಿವುದ್ರು. ‘ಬಾಪು ನೀವೇನಿಲ್ಲಿ?’ ಅಂತ ಆಶ್ಚರ್ಯದಲ್ಲಿ ಕೇಳಿದೆ. ‘ಈ ಸಾರಿ ಅಕ್ಟೋಬರಿಗೆ ಬಂದ್ನಲ್ಲೋ, ಒಂದೆರಡು ದಿನ ಹೆಚ್ಚಿಗೆ ಉಳಕಂಡೆ ಕನೋ ಏನೇನು ನಡೆಸಿದ್ದೀರಿ ನೋಡ್ಕಂಡೋಗನ ಅಂತ’ ಅಂದ್ರು ಗಾಂಧೀಜಿ. ‘ಆಯ್ತು ಬಾಪು ಏನೇನು ನೋಡಿದ್ರಿ? ಏನನ್ನಿಸಿತು?’ ಅಂತ ಕೇಳಿದೆ.

‘ಅಲ್ಲಾ ಕಲಾ, ನಾನು ಹೋದ ಸಾರಿ ಬಂದಾಗ ಬಾಪೂಜಿಗೆ ಭಾರತರತ್ನ ಕೊಡಿ ಅಂತ ಒಬ್ಬರು, ಇಲ್ಲ ಗೋಡ್ಸೆಗೆ ಕೊಡಿ ಅಂತ ಇನ್ನೊಬ್ಬರು ಬಡಕತಿದ್ರಲ್ಲಾ! ಇವನ್ಯಾರು ಗೊತ್ಲಾ ನಿನಗೆ?’ ಅಂದ್ರು ಬಾಪು ಪಕ್ಕದಲ್ಲಿದ್ದ ಒಬ್ಬಾತನನ್ನ ತೋರಿಸಿ. ಇಲ್ಲ ಅಂದೆ. ‘ಇವನೇ ಕಣೋ ಗೋಡ್ಸೆ, ನಮ್ಮ ಆಶ್ರಮದಲ್ಲೇ ಅವನೆ’ ಅಂದ್ರು. ನನ್ಗೆ ಮಾತೇ ಹೊರಡಲಿಲ್ಲ.
‘ಪಟೇಲರಿಗೆ, ಸಾವರ್ಕರ್‌ಗೆ ಭಾರತರತ್ನ ಕೊಡಿ, ಸ್ವಾಮಿಗಳಿಗೆ ಕೊಡಿ ಅಂತ ಹೊಯ್ಕತಿದೀರಲ್ಲ ಅವರಿಗೆಲ್ಲಾ ಇಲ್ಲಿ ಭಾರಿ ಮರ್ಯಾದೆ ಅದೆ. ಬ್ಯಾಡಿ ಕಣ್ರಪ್ಪಾ ನಮ್ಮನ್ನೆಲ್ಲಾ ಎರಡನೇ ಸಾರಿ ಕೊಲ್ಲಬ್ಯಾಡಿ!’ ಅನ್ನೋ ಮಾತಿಗೆ ನನ್ನತ್ರ ಉತ್ತರ ಇರಲಿಲ್ಲ.

‘ನೋಡ್ರಲಾ ವ್ಯವಸ್ಥೆಯು ಸತ್ಯ, ನ್ಯಾಯ, ಧರ್ಮವ ಮರೆತೋಗದೆ. ಪ್ರಶಸ್ತಿ ಕೊಡದಾದ್ರೆ ಭಾರತ ದೇಶಕ್ಕೆ ಹೊರೆಯಾಗಿರೋ ಜನದ್ರೋಹಿಗಳಿಗೆ, ನಿಯತ್ತು ಮಾರಿಕೊಂಡಿರೋ ಅಧಿಕಾರಿಗಳಿಗೆ, ಜನರ ದುಡ್ಡಿಗೆ ಬಾಯಾಕೋ ರಾಜಕಾರಣಿಗಳಿಗೆ, ಸ್ವಿಸ್ ಬ್ಯಾಂಕ್ ಕಳ್ಳರಿಗೆ, ದೇಶದ್ರೋಹಿಗಳಿಗೆ, ಕಮೀಶನ್ನಿಗೆ ಏನು ಬೇಕಾದ್ರೂ ಮಾರಿಕೊಳ್ಳೋ ದಲ್ಲಾಳಿಗಳಿಗೆ ಭಾರದರತ್ನ ಅಂತ ಪ್ರಶಸ್ತಿ ಕೊಡಬೇಕು! ಅದ ಬುಟ್ಟು ನಮ್ಮ ತತ್ವ ಕೊಂದಾಕಿ ನಿನ್ನ ಎದೆ ಮ್ಯಾಲೆ ಬೇಳೆ ಬೇಯಿಸಿಕತಾವರೆ ನೋಡ್ಲಾ! ರಾಮ-ಕೃಷ್ಣನಿಗೇ ಇರೋಕೆ ಜಾಗ ಸಿಕ್ತಿಲ್ಲ. ಇನ್ನಾದ್ರೂ ಒಳ್ಳೆ ಬುದ್ಧಿ ಬರಲಿ! ಹೇ ರಾಮ್!’ ಅಂದ ಗಾಂಧೀಜಿ ಥಟ್ಟಂತ ಮಾಯವಾದರು. ಎದ್ದು ಕಣ್ಣುಬುಟ್ಟು ನೋಡಿದರೆ ಭ್ರಷ್ಟಾಚಾರ ನನ್ನ ಕಾಲದಸಿ ಕೂತು ದುರುಗುಟ್ಟಿ ನೋಡ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT