ಬುಧವಾರ, ಜನವರಿ 22, 2020
16 °C

ಚಂಗಿಮಂಗಿ ಆಟ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

ಹಳ್ಳಿಕಟ್ಟೆ ಮೇಲೆ ನ್ಯೂಸ್‌ಪೇಪರ್ ಓದುತ್ತ ಕುಳಿತಿದ್ದ ತಿಮ್ಮಜ್ಜ, ತೆಪರೇಸಿಯನ್ನು ಕರೆದು ಕೇಳಿತು ‘ಲೇ ತೆಪರ, ಈ ಚಂಗಿಮಂಗಿ ಆಟ ಅಂದ್ರೆ ಏನದು?’

‘ಅದಾ? ಈ ರಾಜಕಾರಣಿಗಳು ಇಲ್ಲಿದ್ದೋರು ಅಲ್ಲಿಗೆ, ಅಲ್ಲಿದ್ದೋರು ಇಲ್ಲಿಗೆ ಚಂಗ್ ಅಂತ ನೆಗೆದು ಮಂಗನಾಟ ಆಡ್ತಾರಲ್ಲ, ಅದಕ್ಕೆ ಚಂಗಿಮಂಗಿ ಆಟ ಅಂತಾರೆ’ ತೆಪರೇಸಿ ಹೇಳಿದ.

‘ಓ ಹಂಗಾ? ಪೇಪರ್‍ನೋರು ಇಂಥದ್ದನ್ನೆಲ್ಲ
ಅರ್ಥ ಬಿಡಿಸಿ ಹಾಕ್ಬೇಕಪ್ಪ. ನಮಗೆ ಗೊತ್ತಾಗದೆಂಗೆ? ಅದೇ ತರ ಈ ‘ಹನಿಟಾಪು’ ಅಂತ ದಿನಾ ಹಾಕ್ತಾರೆ, ಏನು ಹಂಗಂದ್ರೆ?’

‘ಅದು ಟಾಪಲ್ಲ, ಟ್ರ್ಯಾಪು. ಅಂದ್ರೆ ಸಿಕ್ಕಾಕಿಸೋದು ಅಂತ. ನೀನು ಮದುವೆಗೆ ಮುಂಚೆ ಒಂದು ರಾತ್ರಿ ಯಾರದೋ ಮನಿಗೋ
ಗಿದ್ದಾಗ ಹೊರಗಿನಿಂದ ಚಿಲಕ ಹಾಕಿ ಸಿಕ್ಕಾಕಿ
ಸಿದ್ರಂತಲ್ಲ, ಹಂಗೆ. ಇದ್ರಲ್ಲಿ ಹುಡುಗೀರ‍್ನ ಕಳಿಸಿ ವಿಡಿಯೊ ಮಾಡಿ ಸಿಕ್ಕಾಕಿಸ್ತಾರೆ’.

‘ಲೇಯ್, ನಾನೇನೋ ಕೇಳಿದ್ರೆ ನೀನು ನನ್ ಬುಡಕ್ಕೇ ಬರ್ತೀಯ? ನಾವು ಜಾಸ್ತಿ ಓದಿಲ್ಲ, ಅದ್ಕೇ ಕೇಳ್ತೀವಪ. ಈ ಅಡ್ವಾನ್ಸ್ ಶಾಸಕರು ಅಂದ್ರೆ ಯಾರು? ಬಾಂಬೆಕಳ್ಳ- ಬಟ್ಟೆಕಳ್ಳ ಅನ್ನೋದು ಸಿನಿಮಾನ? ಲಾಟರಿ ಮುಖ್ಯಮಂತ್ರಿ ಅಂತಾನೂ ಇರ್ತಾರಾ? ಕಾಮಾಟಿಪುರ ಅನ್ನೋದು ಎಲ್ಲೈತೆ? ಪೊಲೀಸ್ ಬುದ್ದಿ ಅಂದ್ರೆ ಏನು? ಇವೆಲ್ಲನೂ ಬಿಡಿಸಿ ಹೇಳು. ಇಲ್ಲಾಂದ್ರೆ ಒದೆ ತಿಂತೀಯ...’

‘ನಿಂಗೆ ಮಾಡಾಕೆ ಕೆಲ್ಸ ಇಲ್ಲ ಅಂತ ಕಾಣುಸ್ತತಿ. ನಂಗೆ ಟೈಮಿಲ್ಲ, ಬರ್ತೀನಿ’.

‘ಹೋಗ್ಲಿ, ಈ ರಾಸುಲೀಲೆ ಅಂದ್ರೇನು? ಅದನ್ನಾರ ಹೇಳಿ ಹೋಗು’.

‘ಥು ನಿನ್ನ, ಅದು ರಾಸುಲೀಲೆ ಅಲ್ಲ, ರಾಸಲೀಲೆ ಅಂತ’.

‘ಎರಡು ಒಂದೇ ಕಣಲೆ, ನಂಗೊತ್ತಿಲ್ವ?’

‘ಎರಡೂ ಒಂದೇನಾ? ಅದೆಂಗೆ?’

‘ಈಗ ರಾಸು ಅಂದ್ರೇನು? ದನಕರ ಅಂತ. ರಾಸುಕ್ಕೂ ರಾಸಕ್ಕೂ ಏನು ವ್ಯತ್ಯಾಸ? ಒಂದು ಕೊಂಬು ಅಷ್ಟೆ. ಕೊಂಬು ಇರೋ ದನಕರದ್ದು ರಾಸುಲೀಲೆ, ಕೊಂಬಿಲ್ಲದ ಮನುಷ್ಯರದು ರಾಸಲೀಲೆ, ಸರಿನಾ?’

‘ಆಹಾ, ಭಲೇ ಮುದುಕ ನೀನು. ಎಲ್ಲ ಗೊತ್ತಿದ್ದೂ ನಾಟಕ ಮಾಡ್ತೀಯ?’ ತೆಪರೇಸಿ ನಕ್ಕ.

ಪ್ರತಿಕ್ರಿಯಿಸಿ (+)