ಸೋಮವಾರ, ಜನವರಿ 20, 2020
21 °C

ಎಲ್ಲವೂ ಮಿಸ್!

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಬೆಳ್‌ಬೆಳಿಗ್ಗೆ ಯಾರಿಗೆ ಫೋನ್ ಮಾಡ್ತಿದೀಯಾ ಮುದ್ದಣ್ಣ’ ಕೇಳ್ದ ವಿಜಿ‌.

‘ಫೋನ್ ಮಾಡ್ತಿಲ್ಲ ಸರ್, ಮಿಸ್ಡ್ ಕಾಲ್ ಕೊಡ್ತಿದೀನಿ. ಹೀಗ್ ಮಾಡಿದ್ರೆ ನಾವು ನಮ್ ನಾಯಕರಿಗೆ ಸಪೋರ್ಟ್ ಕೊಟ್ಟಂಗೆ ಆಗುತ್ತಂತೆ. ಅದಕ್ಕೇ ಕರೆ ಮಾಡಿ ದೇಶಾಭಿಮಾನ ತೋರಿಸ್ತಿದೀನಿ’ ಎನ್ನುತ್ತಿದ್ದಂತೆ ಅದೇ ನಂಬರ್‌ನಿಂದ ಮುದ್ದಣ್ಣನಿಗೆ ಕರೆ ಬಂತು, ‘ಮಿಸ್ಡ್ ಕಾಲ್ ಕೊಟ್ಟಿದ್ದಕ್ಕೆ ಧನ್ಯವಾದ. ಅಭಿಯಾನ ಯಶಸ್ವಿಯಾಗಲು, ನಾವು ಕೇಳಿದ್ದಕ್ಕೆ ಉತ್ತರಿಸಿ’ ಎಂದು ಉಲಿದ ಹೆಣ್ಣು ಧ್ವನಿ, ಮುಂದುವರಿದು ಹೇಳತೊಡಗಿತು, ‘ವಿಶ್ವವಿದ್ಯಾಲಯ ಪ್ರವೇಶಿಸಲು ಏನಿರಬೇಕು? ಆಪ್ಷನ್ ಎ- ತಲೆಯಲ್ಲಿ ಜ್ಞಾನ, ಬಿ- ಕೈಯಲ್ಲಿ ಪೆನ್, ಸಿ- ಮುಖದ ಮೇಲೆ ಮುಸುಕು, ಡಿ‌- ಕೈಯಲ್ಲಿ ದೊಣ್ಣೆ’.

‘ಎ ಮತ್ತು ಬಿ ಹೇಳು’ ಅವಸರಿಸಿದ ವಿಜಿ.

‘ಏಯ್, ಸುಮ್ನಿರ‍್ರೀ ಸರ್... ಮೇಡಂ, ಸರಿ ಉತ್ತರ ಸಿ ಮತ್ತು ಡಿ’ ಕಾನ್ಫಿಡೆಂಟ್ ಆಗಿ ಹೇಳ್ದ ಮುದ್ದಣ್ಣ.

‘ಗುಡ್, ದೇಶದಲ್ಲಿ ಈಗ ಅತಿ ಅಗತ್ಯವಾಗಿ ಆಗಬೇಕಾಗಿರೋದೇನು? ಎ- ಮಂದಿರ, ಬಿ- ಯೇಸು ಪ್ರತಿಮೆ, ಸಿ- ಮಸೀದಿ, ಡಿ- ಶಾಲೆ’.

‘ಡಿ ಮಾತ್ರ ತಪ್ಪು ಮೇಡಂ’.

‘ವೆರಿ ಗುಡ್, ಅಭಿಯಾನದಲ್ಲಿ ಪಾಲ್ಗೊಳ್ಳುವ ಸಕಲ ಅರ್ಹತೆಗಳೂ ನಿಮಗಿವೆ, ಧನ್ಯವಾದ’ ಕರೆ ಕಡಿತಗೊಂಡಿತು.

‘ಏನ್ ಬೇಕೋ ಅದು ಬಿಟ್ಟು, ಬೇಡವಾಗಿದ್ದನ್ನೆಲ್ಲ ಕೇಳ್ತಾರಲ್ಲ ಮುದ್ದಣ್ಣ, ಮತ್ತೊಮ್ಮೆ ಮಿಸ್ಡ್ ಕಾಲ್ ಕೊಡು, ಕೆಲಸ ಇಲ್ಲದೆ ಅಲೀತಿದಿಯಾ, ಅದನ್ನಾದರೂ ಕೇಳು’.

ಮಿಸ್ಡ್ ಕಾಲ್ ನಂತರ ಮತ್ತೆ ಕರೆ ಬಂತು. ‘ಯಾವ ಉದ್ಯೋಗ ಬೇಕು, ಅದಕ್ಕೇನು ಮಾಡಬೇಕು ಅನ್ನೋ ಪ್ರಶ್ನೆ ಕೇಳಲ್ವ ಮೇಡಂ’.

‘ನೋಡಿ, ಹೆಸರೇ ಸೂಚಿಸುವಂತೆ ಇದು ಮಿಸ್ಡ್ ಕಾಲ್ ಅಭಿಯಾನ. ಇಲ್ಲಿ ಎಲ್ಲವೂ ಮಿಸ್ ಆಗುತ್ತವೆಯೇ ವಿನಾ ಪ್ಲಸ್ ಆಗಲಾರವು. ಪ್ರತಿಕ್ರಿಯಿ ಸಬೇಕೇ ಹೊರತು ನಮ್ಮಿಂದ ಏನನ್ನೂ ನಿರೀಕ್ಷಿಸಬಾರದು’ ಮಧುರ ದನಿ ಬಿರುಸಾಗಿ ಹೇಳಿತು!

ಬೆಪ್ಪಾದ ಮುದ್ದಣ್ಣನನ್ನ ನೋಡಿ ನಗುತ್ತಾ ನಿಂತ ವಿಜಿಗೆ ಪತ್ನಿಯಿಂದ ಮಿಸ್ಡ್ ಕಾಲ್ ಬಂತು. ‘ನಾನು ಹೊರಡ್ತೀನಪ್ಪ, ಈ ಕಾಲ್ ಅಟೆಂಡ್ ಮಾಡದಿದ್ರೆ ನನ್ನ ಕೈ-ಕಾಲುಗಳೇ‌ ಮಿಸ್ ಆಗಿಬಿಡ್ತಾವೆ’ ಎಂದು ಸರಸರನೆ ಹೊರಟ ವಿಜಿ.

 

ಪ್ರತಿಕ್ರಿಯಿಸಿ (+)