ಸೋಮವಾರ, ಫೆಬ್ರವರಿ 17, 2020
15 °C

ಕತ್ತಿ, ಗುರಾಣಿ ಗುರ್ ಗುರ್

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

ಕೌಟುಂಬಿಕ ಕಲಹದಿಂದ ಕಮಲಪತಿ ಕಂಗೆಟ್ಟಿದ್ದರು. ಮಲಗಿದರೆ ನಿದ್ರೆ ಇಲ್ಲ, ಎದ್ದಾಗ ಎಚ್ಚರವಿಲ್ಲ ಎನ್ನುವಂತಾಗಿತ್ತು. ಕುಟುಂಬದ ಕತ್ತಿ, ಗುರಾಣಿ, ಈಟಿ, ಭರ್ಜಿ, ಬಿಲ್ಲು ಬಾಣಗಳು ಮೇಲೆರಗಿ ಶಾಂತಿಭಂಗ ಉಂಟುಮಾಡಿದ್ದವು.

ತಾಳಲಾರದ ಕಮಲಪತಿ, ಕುಲಗುರುವಿಗೆ ಮೊರೆ ಹೋದರು. ‘ಗುರುವರ್ಯ, ನನ್ನ ಲೋಪ, ಪಾಪಗಳನ್ನು ಮನ್ನಿಸಿ, ಶಾಂತಿ, ನೆಮ್ಮದಿ ಕರುಣಿಸಿ’ ಎಂದು ಅಡ್ಡಬಿದ್ದರು.

‘ಭಕ್ತ, ಮನೆತನದ ಹಿರಿಯರನ್ನು ಕಡೆಗಣಿಸಿರುವೆ. ಕತ್ತಿ, ಗುರಾಣಿಯಂತಹವರಿಗೆ ಸೂಕ್ತ ಸ್ಥಾನಮಾನ ನೀಡದೆ ಅಪಮಾನ ಮಾಡಿರುವೆ. ನಿನ್ನೆ ಮೊನ್ನೆ ಬಂದವರಿಗೆ ಮಣೆ ಹಾಕಿರುವೆ’ ಗುರುಗಳು ಗುರ್ ಎಂದರು.

‘ಮಣೆ ಹಾಕದಿದ್ದರೆ ನನ್ನ ಮಾನ ಹೋಗುತ್ತಿತ್ತು ಗುರುಗಳೇ...’

‘ಹೊರಗಿನವರಿಗೆ ಮಣೆ ಹಾಕಿದ ನೀನು, ಮನೆಯವರಿಗೆ ಚಾಪೆಯನ್ನೂ ಹಾಕಬೇಕಾಗಿತ್ತು. ಅವರ ಆಸೆಯನ್ನು ಮಣ್ಣುಪಾಲು ಮಾಡಬಾರದಾಗಿತ್ತು. ಕತ್ತಿ, ಗುರಾಣಿಗೆ ಸ್ಥಾನ-ಮಾನ ನೀಡಬೇಕು ಎಂದು ಸಾರ್ವಜನಿಕ ಸಭೆಯಲ್ಲಿ ಸ್ವಾಮೀಜಿಗಳು ನೀಡಿದ ಆದೇಶವನ್ನು ನಿರ್ಲಕ್ಷಿಸಿ ಮಹಾಪರಾಧ ಮಾಡಿರುವೆ, ಅದರ ಫಲ ಇದು’ ಎಂದರು ಗುರುಗಳು.

‘ಸಂಸಾರದ ಮಾನ ಕಾಪಾಡಿದ ಅತಿಥಿಗಳಿಗೆ ಕುರ್ಚಿ ಹಾಕಿ ಸತ್ಕರಿಸುವುದು ತಪ್ಪೇ?’

‘ಅತಿಥಿಸತ್ಕಾರ ಒಳ್ಳೆ ಸಂಸ್ಕಾರ ಸರಿ. ಆದರೆ, ಮನೆ ಕಟ್ಟಿದವರನ್ನು ಕಡೆಗಣಿಸಿ, ಇತ್ತೀಚೆಗೆ ಬಂದು ಪೇಂಟ್ ಬಳಿದವರಿಗೆ ಕುರ್ಚಿ ಕೊಟ್ಟಿದ್ದು ಸರಿಯಲ್ಲ’.

‘ಮನೆ ಮಂದಿಗೆಲ್ಲಾ ಕುರ್ಚಿ ಕೊಡಬೇಕೆಂದರೆ ಹೇಗೆ ಗುರುಗಳೆ? ನಾನೇನು ಫರ್ನಿಚರ್ ಅಂಗಡಿ ಇಟ್ಟಿದ್ದೀನಾ?’

‘ಹೀಗೆ ನೆಗ್ಲೆಕ್ಟ್ ಮಾಡಿದ್ದರ ಫಲ, ಮನೆಮಂದಿಯೆಲ್ಲಾ ಶತ್ರುಗಳಾಗಿದ್ದಾರೆ’.

‘ಹೌದು ಗುರುಗಳೆ... ಶತ್ರುಹರಣಕ್ಕೆ ಪರಿಹಾರ ಸೂಚಿಸಿ’.

‘ಶತ್ರುಹರಣ ಅಪಾಯಕಾರಿ, ಸದ್ಯದ ಪರಿಸ್ಥಿತಿಯಲ್ಲಿ ಕಾಲಹರಣವೇ ಉಪಾಯಕಾರಿ. ಹಾಗಂತ ಶತ್ರುವಿಗೆ ಶರಣಾಗುವುದು ಬೇಡ, ಮೌನಕ್ಕೆ ಶರಣಾಗುವುದು ಲೇಸು. ಮೌನವಾಗಿದ್ದು
ಕೊಂಡು ಯುಗಾದಿಗೆ ರುಚಿಕರ ಒಬ್ಬಟ್ಟು, ಹಿತಕರ ಬಜೆಟ್ಟು ಸಿದ್ಧಪಡಿಸು. ನಂಬಿದ ದೇವರು ನೆಮ್ಮದಿ ಕೊಡುತ್ತಾನೆ’ ಎಂದು ಗುರುಗಳು ಆಶೀರ್ವಾದ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)