ಭಾನುವಾರ, ಮಾರ್ಚ್ 29, 2020
19 °C

ಹಾಂಟಾ-ಹೊಂಟಾ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ನಿಷೇಧದ ನಡುವೆಯೂ ಹರಟೆಕಟ್ಟೆ ಸೇರಿತ್ತು. ‘ಏನ್ರಲೆ, ಎಲ್ರೂ ಹೆಂಗದೀರಿ? ಮನೇಲಿ ದಿನ ಹೆಂಗ್ ಕಳೀತಿದೀರಿ?’ ಪರ್ಮೇಶಿ ವಿಚಾರಿಸಿದ.

‘ನಂಗಂತೂ ತೆಲಿ ಕೆಟ್ಟೋಗೇತಲೆ, ಎಷ್ಟೂಂತ ಮನೇಲಿರೋದು? ಟಿ.ವಿ, ಮೊಬೈಲು, ಪೇಪರು, ಪುಸ್ತಕ ಎಲ್ಲ ಸಾಕಾತು. ಏನ್ ಮುಟ್ಟಿದ್ರೂ ಮೊದ್ಲು ಕೈ ತೊಳ್ಕಳಿ ಅಂತಾಳೆ ನನ್ ಹೆಂಡ್ತಿ. ತಿಂದಿದ್ದು ಚೀನಾದೋರು, ಕೈ ತೊಳ್ಕೋತಿರೋದು ನಾವು. ಇದ್ಯಾವ ಕರ್ಮ?’ ತೆಪರೇಸಿ ಬೇಸರ ವ್ಯಕ್ತ
ಪಡಿಸಿದ.

‘ಮಜ ಏನ್ ಗೊತ್ತಾ? ಕೊರೊನಾ ಬಂದು ದೇಶಾನೇ ಬಂದ್ ಆಗೇತಿ. ನಿನ್ನೆ ಟಿ.ವೀಲಿ ಯುಗಾದಿ ಫಲಾಫಲ ಹೇಳ್ತಿದ್ರು. ದೂರ ಪ್ರಯಾಣ ಸಾಧ್ಯತೆ, ವ್ಯಾಪಾರದಲ್ಲಿ ಧನಲಾಭ, ವಿವಾಹ ಯೋಗ, ಅತಿಥಿಗಳ ಅನಿರೀಕ್ಷಿತ ಆಗಮನ... ಮಣ್ಣು ಮಸಿ ಅಂತ. ಇವರ ಮುಂಡಾಮೋಚ್ತು. ಮನಿಯಿಂದ ಹೊರಕ್ಕೆ ಬಂದ್ರೇನೇ ಪೊಲೀಸ್ರು ಲಾಠಿ ಬೀಸ್ತಾರೆ. ಅಂತದ್ರಲ್ಲಿ ದೂರ ಪ್ರಯಾಣ ಅಂತೆ, ವ್ಯಾಪಾರ ಅಂತೆ...’ ಗುಡ್ಡೆ ನಕ್ಕ.

‘ಅವರದು ಬಿಡ್ರಲೆ, ನಮ್ದು ಹೆಂಗೆ ಹೇಳ್ರಿ. ಮನೇಲಿ ಟೈಂ ಕಳೆಯೋದೆಂಗೆ? ರಾತ್ರಿ ನಿದ್ದಿ ಬರ್ತಿಲ್ಲ, ಎಣ್ಣಿ ಅಂಗಡಿ ಬೇರೆ ಕದ ಹಾಕಿದಾವೆ’ ದುಬ್ಬೀರನಿಗೆ ಸಿಟ್ಟು.

‘ಟೈಂಪಾಸ್ ಅಂದ್ರೆ ಒಂದ್ ಕೆಲ್ಸ ಮಾಡು... ಮನಿ ಪಾತ್ರೆ ತೊಳಿ, ಬಟ್ಟೆ ಒಗಿ, ನಿನ್ ಹೆಂಡ್ತಿಗೂ ಸ್ವಲ್ಪ ರೆಸ್ಟ್ ಸಿಗ್ತತಿ...’

ಪರ್ಮೇಶಿ ಸಲಹೆಗೆ ತೆಪರೇಸಿಗೆ ನಗು ಬಂತು. ‘ಲೇಯ್, ಅದನ್ನ ಅವನು ಮೊದ್ಲಿಂದಾನೂ ಮಾಡ್ತದಾನೆ ಕಣಲೆ, ಬೇರೆ ಏನರೆ ಇದ್ರೆ ಹೇಳು’ ಎಂದ.

‘ಅಲ್ಲೋ ಜುಜುಬಿ ಕೊರೊನಾಕ್ಕೇ ಮನೇಲಿ ಹೆಂಗಿರ‍್ಲಿ ಅಂತೀಯಲ್ಲ ಈಗ ಚೀನಾದಲ್ಲಿ ಇನ್ನೊಂದು ‘ಹಾಂಟಾ’ ಅಂತ ವೈರಸ್ ಪತ್ತೆ ಯಾಗೇತಂತೆ, ಅದು ಬಂದ್ರೆ ಏನ್ಮಾಡ್ತಿ?’ ಗುಡ್ಡೆ ಪ್ರಶ್ನಿಸಿದ.
ದುಬ್ಬೀರನಿಗೆ ಅರ್ಥವಾಗಲಿಲ್ಲ ‘ಏನು? ಹೊಂಟಾನಾ?’

‘ಹೌದು, ಹಾಂಟಾ ಬಂದ್ರೆ ಸೀದಾ ಮೇಲಕ್ಕೆ ಹೊಂಟಾ ಅಂತಾನೇ’ ಗುಡ್ಡೆ ಮಾತಿಗೆ ಎಲ್ಲರೂ ನಕ್ಕರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)