ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಗಟ್ಟಿಮೇಳ ಗಟ್ಟಿಮೇಳ!

Last Updated 10 ಜೂನ್ 2020, 20:32 IST
ಅಕ್ಷರ ಗಾತ್ರ

‘ಪ್ಲೀಸ್ ಯಜಮಾನ್ರೇ, ನಿಮ್ ಕಾಲಿಗೆ ಬಿದ್ದು ಕೇಳಿಕೊಳ್ತಿದೀನಿ, ಮದುವೆಗೆ ಒಪ್ಕೊಳ್ಳಿ...’ ಅಂಗಲಾಚಿದ‌ ವಿಜಿ.

ಆರಾಮ್ ಚೇರ್‌ನಲ್ಲಿ ಕುಳಿತಿದ್ದ ಯಜಮಾನ್ರು ಕೋಪದಲ್ಲಿ ವಿಜಿಯತ್ತ ನೋಡಿ, ಗೋಡೆ ಕಡೆ ಮುಖ ತಿರುಗಿಸಿದರು.

‘ದಮ್ಮಯ್ಯ ಅಂತೀನಿ ಯಜಮಾನ್ರೆ, ಮದುವೆ ಮಾಡ್ಕೊಳ್ಳಿ...’

ನಿಧಾನವಾಗಿ ಮೇಲೆದ್ದು, ಚೇರನ್ನು ಹಿಂದಕ್ಕೆ ಒದ್ದು ಗಟ್ಟಿ ಧ್ವನಿಯಲ್ಲಿ ಹೇಳಿದರು, ‘ಈ ವಯಸ್ಸಲ್ಲಿ ನಾನು ಮದುವೆಯಾದ್ರೆ ಜನ ಏನಂದಾರು ಅನ್ನೋ ಪರಿಜ್ಞಾನ ಇದೆಯೇ ನಿನಗೆ, ನಾನ್‌ಸೆನ್ಸ್...’

‘ಪಕ್ಕದೂರಿನಲ್ಲಿ ಹೆಚ್ಚು ಕಡಿಮೆ ನಿಮ್ಮ‌ ವಯಸ್ಸಿನವರೇ ಮದುವೆ ಆಗ್ತಿದಾರೆ ಯಜಮಾನ್ರೆ...’

ಧಣಿಗಳ ಕೋಪ ನೆತ್ತಿಗೇರಿತು. ‘ವರ್ಷದ ಹಿಂದೆ ಪಕ್ಕದೂರಿನ ಹೆಣ್ಣನ್ನು ಮದುವೆಯಾಗಲು ಹೋದಾಗ ಆಕೆಯ ಮನೆಯವರು ರಿಜೆಕ್ಟ್ ಮಾಡಿದ ನೋವು ನನ್ನ ಮನಸ್ಸಲ್ಲಿ ಇನ್ನೂ ಇದೆ’ ಎನ್ನುತ್ತಾ ಗದ್ಗದಿತರಾದರೂ ಹೊಸ ಅಂಗಿ, ರೇಷ್ಮೆ ಪಂಚೆ ಧರಿಸತೊಡಗಿದರು.

‘ನಮಗೆ ಮಾರ್ಗದರ್ಶನ ಮಾಡಲು ಮೊದಲು ನೀವು ಖುಷಿಯಾಗಿರಬೇಕು. ಖುಷಿಯಾಗಿರಬೇಕು ಅಂದ್ರೆ ಈ ಮದುವೇನ ನೀವು ಮಾಡಿಕೊಳ್ಳಲೇಬೇಕು’ ಪಟ್ಟು ಹಿಡಿದ ವಿಜಿ.

‘ಎಷ್ಟ್ ಹಿಂಸೆ ಮಾಡ್ತೀಯೋ ಈಡಿಯಟ್... ನಿನಗೆ ಗೈಡ್ ಮಾಡೋಕಂತಲೇ ಒಂದಿಷ್ಟು ಜನ ಇಲ್ವಾ ಊರಲ್ಲಿ...’ ವಟಗುಡುತ್ತಲೇ ದೇವರ ಕೋಣೆ ಎದುರು ನಿಂತು, ಕಳಸಕ್ಕೆ ಹಾಕಿದ್ದ ಅರಿಸಿನದ ಕೊಂಬನ್ನು ಕೈಯಲ್ಲಿ ಹಿಡಿದುಕೊಂಡು ವರಾಂಡಕ್ಕೆ ಬಂದರು ಯಜಮಾನ್ರು.

‘ಬುದ್ಧಿ, ಅವರು ಸರಿಯಾಗಿ ಗೈಡ್ ಮಾಡಿದ್ರೆ ನಾನ್ಯಾಕೆ ನಿಮ್ ಜೀವ ತಿಂತಿದ್ದೆ ಹೇಳಿ. ನಿಮ್ಮ ಮನಸ್ಸಿಗೆ ನನ್ನಿಂದ ಎಷ್ಟು ನೋವಾಗ್ತಿದೆ ಅಂತ ಗೊತ್ತು, ಪ್ಲೀಸ್ ಒಪ್ಕೊಳ್ಳಿ ಯಜಮಾನ್ರೇ...’

ಕಾಲಿಗೆ ಬೀಳಲು ಮುಂದಾದ ವಿಜಿ. ಅವನನ್ನು ದಬ್ಬಿ, ಕೈಯಲ್ಲಿ ಎರಡು ಹಾರಗಳನ್ನೂ ಹಿಡಿದುಕೊಂಡು ಕೋಪದಲ್ಲೇ ಹೊರಗೆ ಬಂದರು ಯಜಮಾನರು. ಪುರೋಹಿತರು ಕೂಗಿದರು, ‘ಗಟ್ಟಿಮೇಳ... ಗಟ್ಟಿಮೇಳ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT