ಭಾನುವಾರ, ಏಪ್ರಿಲ್ 18, 2021
31 °C

ಚುರುಮುರಿ: ಕಣ್ತಪ್ಪುಗಳ ಕಾಲವಿದು!

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ನಾಕು ದಿನದ ಹಿಂದೆ ಸುದ್ದಿಯೊಂದನ್ನು ಓದಿದ ಬೆಕ್ಕಣ್ಣನದು ಒಂದೇಸಮನೆ ವರಾತ... ‘ಅಕ್ಕಂಗೆ ಫೋನ್ ಹಚ್ಚಬೇಕು, ಮೊಬೈಲ್ ಕೊಡು’.

‘ಯಾರಲೇ ನಿನ್ನ ಈ ಹೊಸ ಅಕ್ಕ’ ನನಗೆ ಕುತೂಹಲ.

‘ಹೊಸ ಅಕ್ಕ ಅಲ್ಲೇಳು... ನಿರ್ಮಲಕ್ಕ’ ಎಂದಿದ್ದೇ ಇಂಟರ್ನೆಟ್ಟಿನಲ್ಲಿ ಜಾಲಾಡಿ, ಫೋನ್‌ ನಂಬರ್ ಹುಡುಕಿ ವಿಡಿಯೊ ಕಾಲ್ ಮಾಡಿಯೇ ಬಿಟ್ಟಿತು.

‘ಏನಕ್ಕೋ... ಬಡವ್ರ ಹೊಟ್ಟಿ ಮ್ಯಾಗೆ ಒಂದಾದ ಮ್ಯಾಗ್ ಒಂದ್ ಹೊಡೆದಿದ್ದು ಸಾಲದು ಅಂತ ಈಗ ಹಿಂಗ ಮಾಡೀಯೇನ್? ಸಣ್ಣ ಉಳಿತಾಯ ಅಂತ ಅಂಗೈಯಗಲ ತಣ್ಣೀರ್ ಪಟ್ಟಿ ಹೊಟ್ಟಿಮ್ಯಾಗ ಹಾಕ್ಕಂಡಿದ್ರು, ಅದ್ನೂ ಕಿತ್ತಕಂಡು ನಿನ್ನ್ ನೆತ್ತಿ ತಂಪಾಗ್ಲಿ ಅಂತ ತೆಲಿ ಮ್ಯಾಗೆ ಹಾಕ್ಕಂಡಿಯಲ್ಲ... ಯಾವ್ ದೇವ್ರು ಮೆಚ್ಚತಾನ ನಿಂಗೆ’ ಅಂತ ಸಮಾ ಬೈಯತೊಡಗಿತು.

‘ಈಗ ಹೆಂಗೆ ವಾಪಸು ತಗಳೂದಪ್ಪ’ ಅಂತ ಆಕಿ ಬೆವರು ವರೆಸಿಕೊಳ್ತ ಕೇಳಿದ್ಲು. ‘ಕನ್ನಡಕ ಹಾಕ್ಕಳದು ಮರೆತಿದ್ದೆ, ಕಣ್ತಪ್ಪಿನಿಂದ ಗೊತ್ತಾಗದೇ ರಾಂಗ್ ನೋಟಿಸ್ ಕಳಿಸಿಬಿಟ್ಟೆ ಅಂತ ವಂದ್ ಹೇಳಿಕೆ ಕೊಡು’ ಅಂತ ಬೆಕ್ಕಣ್ಣನೇ ಉಪಾಯ ಸೂಚಿಸಿತು. ‘ಆತೇಳು... ಹಂಗೇ ಮಾಡತೀನಿ’ ನಿರ್ಮಲಕ್ಕ ಫೋನಿಟ್ಟಳು.

ಮರುದಿನ ಬೆಳಗ್ಗೆ ಪೇಪರ್ ನೋಡಿದ್ದೇ ಬೆಕ್ಕಣ್ಣ, ‘ಏ ನೋಡಿಲ್ಲಿ, ನಿರ್ಮಲಕ್ಕ ನಾ ಹೇಳಿದಂಗೇ ಕಣ್ತಪ್ಪಿನಿಂದ ಆಗಿದ್ದದು ಅಂತ್ಹೇಳಿ ಬಡ್ಡಿದರ ಕಡಿತ ಹಿಂದ್ ತಗಂಡಾಳ’ ಎಂದು ಖುಷಿಯಿಂದ ಕುಣಿದಾಡಿತು.

‘ನೀ ಬೈದಿದ್ದಕ್ಕೆ ಅಲ್ಲಲೇ... ಎಷ್ಟಕೊಂದು ರಾಜ್ಯದಾಗೆ ಚುನಾವಣೆ ಕಾವು ಏರೈತಿ, ಈ ಬಡ್ಡಿದರ ಕಡಿತ ಉಲ್ಟಾ ತಮ್ಮನ್ನೇ ಸುಡತೈತಿ ಅಂತ್ಹೇಳಿ ವಾಪಸು ತಂಗಂಡಾರ. ಹಂಗಾರೆ ನಿಮ್ಮ ಈಶೂಮಾಮ ವಾಪಸು ಕಳಿಸಿದ ಫೈಲಿಗೆ ಯೆಡ್ಯೂರಜ್ಜಾರು ಸಹಿ ಹಾಕಿ, ಅರವತ್ತೈದು ಕೋಟಿ ರೂಪಾಯಿ ಕಾಮಗಾರಿ ತಮ್ಮ ಸಂಬಂಧಿಗೆ ಮಂಜೂರು ಮಾಡ್ಯಾರಂತಲ್ಲ, ಅದನ್ನೂ ಕಣ್ತಪ್ಪಿನಿಂದ ಅಂತ್ಹೇಳಿ ವಾಪಸು ತಗಳಕ್ಕೆ ಅಜ್ಜಾರಿಗೆ ಹೇಳಲೇ’ ಎಂದೆ.

‘ಹೇ... ಅದೆಲ್ಲ ವರಿಷ್ಠರಿಗೆ ಬಿಟ್ಟ ವಿಚಾರ’ ಎಂದು ಪೆಕರು ನಗೆ ನಕ್ಕಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.