ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ– ತೊರೆಗತಿ

Last Updated 9 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

‘ಅಲ್ಲಾ ಕನ್ರೋ, ಮೋದಕ ವಸ್ತು ಪ್ರಕರಣಕ್ಕೆ ಸಂಬಂಧಪಟ್ಟಂಗೆ ಯಾರನ್ನೂ ಬುಡೀಕಿಲ್ಲಾ ಅಂತ ಗ್ರಹಸಚಿವ ಗುರುಗುಟ್ಟ್ಯದೆ!’ ಯಂಟಪ್ಪಣ್ಣನ ಮಾತು ಕೇಳಿ ನಮಗೆ ಗಾಬರಿಯಾಯ್ತು.

‘ಅಂದ್ರೆ ಗಣೇಶನ ಮುಂದೆ ಮೋದಕ ಮಡಗಂಗಿಲ್ಲ ಅಂದದಾ?’ ವಿಚಾರಿಸಿದೆ.

‘ಬಡ್ಡೆತ್ತುದೇ, ಯಂಟಪ್ಪಣ್ಣಗೆ ಕಣ್ಣು ಸರಿಯಾಗಿ ಕಾಣದೆ ಮಾದಕ ವಸ್ತು ಪ್ರಕರಣ ಅನ್ನದ್ನ ಮೋದಕ ವಸ್ತು ಅಂತ ಓದಿಕ್ಯಂಡದೆ ಕನೋ’ ಅಂತ ವಿವರಣೆ ಕೊಟ್ಟರು. ‘ಯಾಸೆಟ್ಗ ಬುಡಿ ಅತ್ತಗೆ. ಹಬ್ಬದ ಸೀಜನ್ನಗೆ 6ರಿಂದ 8ನೇ ಕ್ಲಾಸು ಮಕ್ಕಳಿಸ್ಕೂಲು ಸುರು ಮಾಡ್ಯದಲ್ಲಾ ನಾಗಣ್ಣ ಸರಿ ಅಂತೀರಾ?’ ಅಂದು ತುರೇಮಣೆಗೆ ಕೇಳಿದೆ.

‘ಅಲ್ಲಾ ಕಯ್ಯಾ, ಎರಡೊರ್ಸದಿಂದ ಇಸ್ಕೂಲು ದಾರಿಯೆ ಮರತುಕಂಡಿದ್ದ ಹೈಕ್ಳು ಈಗ್ಲೂ ಇಸ್ಕೋಲಿಗೆ ಹೋದ್ರೆ ಹೋಗಬೌದು ಇಲ್ಲದಿದ್ರೆ ಆನ್‍ಲೈನ್ ಕ್ಲಾಸಲ್ಲಿ ಮಕ್ಕಂಡು ನಿದ್ದೆ ಮಾಡಬೌದು ಅಂತ ಆಡ್ರು ಮಾಡ್ಯದಲ್ಲೋ ನಾಗಣ್ಣ!’ ಅಂದ್ರು.

‘ಓದಕ್ಕೆ ಕಳ್ಳಬಿದ್ದ ಹೈಕ್ಳು ಇನ್ನೊಂದೊರ್ಸ ಹಿಂಗೀಯೆ ಸ್ಕೂಲು ಮುಚ್ಚಿರಲಿ ಅಂದವಂತೆ. ಮಕ್ಕಳಿಸ್ಕೂಲು ಮನೇಲಲ್ವೆ ಅಂತ ಕೈಲಾಸಂ ಅಂದಿದ್ರಲ್ಲಾ ಅದುನ್ನೇ ಹೇಳ್ತಾವೆ. ಹಂಗೀಯೆ ರಾಜಕಾರಣಿಗಳಿಗೂ ಒಂದಾರು ತಿಂಗಳು ಸ್ಕೂಲಿಗೆ ಕಳಿಸಬೇಕು ಸಾ!’ ಅಂತಂದೆ.

‘ಹ್ಞೂಂ ಕಪ್ಪಾ, ಸ್ಕೂಲಿಗೆ ಬಂದ ಮಕ್ಕಳಿಗೆಲ್ಲಾ ಮೇಷ್ಟ್ರುಗಳು ಹೂವು ಎರಚಿ, ಕುಂಕುಮ ಇಟ್ಟು ಬರಮಾಡಿಕ್ಯಂಡವ್ರಂತೆ ಕನೋ. ಮನೇಲಿ ಅಪ್ಪ-ಅವ್ವನೂ ಇವುಗಳ ಕಾಟ ತಡಿನಾರ್ದೆ ರೋಸೋಗಿದ್ರಲ್ಲಾ ಈಗ ಕುಸಿಯಾಗಿರಬೇಕು’.

‘ನೋಡಿರ‍್ಲಾ ನಮ್ಮೂರು ಇಸ್ಕೂಲಲ್ಲಿ ಮಕ್ಳು ಬಂದೇಟ್ಗೆ ಮೇಷ್ಟ್ರು ‘ಸದ್ಯ ಬಂದಲ್ಲಾ ನನ್ನಪ್ಪ ಬಾ’ ಅಂತ ಸ್ವಾಗತ ಮಾಡಿ ಹೂವ ಮುಡಿಸ್ಯವ್ರಂತೆ ಕನೋ’ ಅಂತ ಯಂಟಪ್ಪಣ್ಣ ಬ್ರೇಕಿಂಗ್ ನ್ಯೂಸ್ ಹೇಳ್ತು. ‘ಅದ್ಯಾಕೆ ಹಂಗೆ ಮಾಡಿದ್ರಂತೆ?’ ಆಶ್ಚರ್ಯದಿಂದ ಕೇಳಿದೆ.

‘ಮಕ್ಳು ಬರದೇ ವೋದ್ರೆ ಇಸ್ಕೋಲು ಬಂದಾಯ್ತದೆ. ಮುಂದಕ್ಕೆ ಮನೇಗೋಗಿ ಕರಕಬರಬೇಕಾಯ್ತದೆ. ಮಕ್ಕಳೆಲ್ಲಾ ಸ್ಕೂಲು ತೊರೆದು ತೊರೆಗತಿಯಾದ್ರೆ ಕಷ್ಟ ಅಲ್ಲುವಲಾ ಜೀವನ’ ತುರೇಮಣೆ ಕೊರೊನಾ ವೈರಾಗ್ಯದ ಮಾತಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT