ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಯಥಾ ತವ, ತಥಾ ಕಕವ!

ಚುರುಮುರಿ
Published : 22 ಸೆಪ್ಟೆಂಬರ್ 2023, 21:33 IST
Last Updated : 22 ಸೆಪ್ಟೆಂಬರ್ 2023, 21:33 IST
ಫಾಲೋ ಮಾಡಿ
Comments

‘ಇನ್ನೇನಮ್ಮ, ನಿಮಗೂ 33 ಪರ್ಸೆಂಟ್ ಮೀಸಲಾತಿ ಬಂದೋಯ್ತು’ ಎಂದ ಪೇಪರ್ ನೋಡ್ತಾ ಪರ್ಮೇಶಿ.

‘ನಿಮಗೇನ್ ಹೊಟ್ಟೇಲಿ ಮೆಣಸಿನಕಾಯಿ ಕಿವುಚಿದಂಗೆ ಆಗ್ತಿದ್ಯಾ? ಈಗೇನು 33 ಪರ್ಸೆಂಟ್ ಭಿಕ್ಷೆ ನೀವು ಹಾಕೋದು, ನಾವು ತಗೊಳೋದು... ನಮಗೆ ಬರೋಬ್ಬರಿ 50 ಪರ್ಸೆಂಟ್ ಸೀಟ್‍ಗಳನ್ನ ಬಿಟ್‌ಕೊಡ್ಬೇಕು’ ಎಂದರು ಪದ್ದಮ್ಮ ಖಡಕ್ಕಾಗಿ!

‘ಅದೂ ಆಗುತ್ತೆ, ಈಗ ಹತ್ರಹತ್ರ ಪಾಸಿಂಗ್ ಮಾರ್ಕ್‍ಗೆ ಬಂದಿದೀರಿ. ಸ್ವಲ್ಪ ಸಮಾಧಾನ ಮಾಡ್ಕೊಳ್ಳಿ’.

‘ಹೇಗ್ ಸಮಾಧಾನ ಮಾಡ್ಕೊಳ್ಳೋದು? ನೀವು ಇಡೀ ದೇಶನ, ಪ್ರಜಾಪ್ರಭುತ್ವನ, ಚುನಾವಣೆ ವ್ಯವಸ್ಥೆನ ಕುಲಗೆಡಿಸಿ ಮೇಲ್ ಓರಿಯೆಂಟೆಡ್ ಮಾಡಿ ಕೂರ್ಸಿದೀರಿ. ಈಗ ನಮಗೆ ಮೀಸಲು ಕೊಟ್‌ಬಿಟ್ರೆ ನಾವು ಎಲೆಕ್ಷನ್ ಗೆದ್‌ಬಿಡಕ್ಕಾಗುತ್ತೇನ್ರೀ?’

‘ಅಲ್ಲ, ಕೆಲವರು ಮುಂದಿನ ವರ್ಷನೇ ಮೀಸಲಾತಿ ಜಾರಿಗೆ ಬರ್ಬೇಕು ಅಂತಿದಾರೆ. ಅಂಥಾದ್ರಲ್ಲಿ ನೀನು ಎಲೆಕ್ಷನ್‌ಗೆ ಕಂಟೆಸ್ಟ್ ಮಾಡೋದೇ ಕಷ್ಟ ಅಂತಿದೀಯಲ್ಲ’.

‘ನೋಡ್ರಿ, ನನ್ ಪ್ರಕಾರ 2029ಕ್ಕೇ ಮೀಸಲಾತಿ ಜಾರಿಗೆ ಬರ್ಬೇಕು. ಅಷ್ಟರೊಳಗೆ ಇಡೀ ಚುನಾವಣೆ ವ್ಯವಸ್ಥೆ ವಿಮೆನ್ ಓರಿಯಂಟೆಡ್ ಆಗದಿದ್ರೂ ನಿಮ್ ಕಪಿಮುಷ್ಟಿಯಿಂದ ಈಚೆ ಬರ್ಬೇಕು’.

‘ಈ ವಿಮೆನ್ ಓರಿಯಂಟೆಡ್ ಆಗೋದು ಅಂದ್ರೇನು?’

‘ಈಗ ನೋಡಿ, ನೀವು ಗಂಡಸರು ಎಲೆಕ್ಷನ್ ಅಂದ್ರೆ ಎಣ್ಣೆ ಕುಡ್ಸೋದು, ನೋಟು ಹಂಚೋದು, ಕುಕ್ಕರು, ಮಿಕ್ಸಿ, ತವಾ ಕೊಡೋದು, ಜನಗಳನ್ನ ಕಕವಾ ಮಾಡೋದು ಇದನ್ನೇ ಕಸುಬು ಮಾಡ್ಕೊಂಡಿದೀರಿ. ನಾವು ಹಾಗ್ ಮಾಡಕ್ಕಾಗುತ್ತೇನ್ರೀ? ಹಾಗ್ ಮಾಡಲಿಲ್ಲ ಅಂದ್ರೆ ಈ ಆಮಿಷಕ್ಕೆ ಅಡಿಕ್ಟ್ ಆಗಿರೋ ಜನ, ಪಾಂಪ್ಲೆಟ್ ಕೈಗಿಟ್ಟು ಕೈ ಮುಗಿದುಬಿಟ್ರೆ ವೋಟ್ ಹಾಕ್ಬಿಡ್ತಾರಾ? ನಾವೂ ನಿಮ್ ಸಮಕ್ಕೆ ದುಡ್ಡು ಬಿಚ್ಬೇಕು ತಾನೆ? ಎಲ್ಲಿದೆ ನಮ್ಮ ಹತ್ರ ದುಡ್ಡು?’

‘ಹೌದಲ್ವಾ? ಕರಡು ತಯಾರು ಮಾಡಿದೋರೂ ಈ ವಿಷಯದಲ್ಲೇ ಕರುಡಾಗಿಬಿಟ್ಟಿದಾರಲ್ಲ. ಇದಕ್ಕೆ ಏನ್ ಮಾಡ್ಬೇಕು ಅಂತೀಯ?’

‘ಸ್ತ್ರೀ ಸಬಲೀಕರಣ ಆಗ್ಬೇಕು. ಸ್ಟೇಟ್ ಕೊಟ್ಟಿರೋ ಹಾಗೇ ಸೆಂಟ್ರಲ್ಲೂ ಮಹಿಳೆಯರಿಗೆ ಗ್ಯಾರಂಟಿ ಮೇಲೆ ಗ್ಯಾರಂಟಿ ಕೊಡ್ಬೇಕು. ಗಂಡಸರ ಹೆಸರಲ್ಲಿರೋ ಅರ್ಧ ಆಸ್ತಿ ನಮ್ ಹೆಸರಿಗೆ ಬರ್ಬೇಕು. ಇಷ್ಟು ವರ್ಷ ನಮಗೆ ಅವಕಾಶ ಕೊಡ್ದೇ ಇದ್ದದ್ದಕ್ಕೆ ಇದೇ ಶಿಕ್ಷೆ’ ವರ್ಡಿಕ್ಟ್ ಕೊಟ್ಟರು ಪದ್ದಮ್ಮ. ಪರ್ಮೇಶಿ ತಲೆ ಚಚ್ಚಿಕೊಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT