ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕ್ರಿಕೆಟ್– ಪ್ರೀತಿ– ಪಾಠ!

ಚುರುಮುರಿ
Published 20 ಅಕ್ಟೋಬರ್ 2023, 19:59 IST
Last Updated 20 ಅಕ್ಟೋಬರ್ 2023, 19:59 IST
ಅಕ್ಷರ ಗಾತ್ರ

‘ಕ್ರಿಕೆಟಲ್ಲಿ ಡಕ್ಔಟ್ ಆಗೋದು ಅಂದ್ರೆ ಏನ್ರೀ?’ ಶ್ರೀಮತಿಯ ಪ್ರಶ್ನೆ.

ಮನೆಯಲ್ಲಿ ಸಾಂಕ್ರಾಮಿಕವಾಗಿ ಹಬ್ಬುತ್ತಿದ್ದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಜ್ವರ ಆಕೆಗೂ ಅಂಟಿಕೊಳ್ಳುತ್ತಿದ್ದುದರ ಸ್ಪಷ್ಟ ಸೂಚನೆ!

ನಾನೆಂದೆ ‘ಅದನ್ನ ಶೂನ್ಯ ಸಂಪಾದನೆ, ಸೊನ್ನೆ ಸುತ್ತೋದು ಅಂತಾನೂ ಕರೀತಾರೆ. ಬ್ಯಾಟರ್  ಒಂದು ರನ್ನೂ ಗಳಿಸದೆ ಪೆವಿಲಿಯನ್ ಸೇರೋದು... ಆಸ್ಟ್ರೇಲಿಯಾ ವಿರುದ್ಧ ನಮ್ಮ ಆರಂಭಿಕ ಜೋಡಿಯೂ ಸೇರಿದಂತೆ ಮೂವರು ದೊಡ್ಡ ಆಟಗಾರರು ಮಾಡಿದರಲ್ಲಾ ಆ ಸಾಧನೆ’.

‘ಹಿಟ್ ವಿಕೆಟ್ ಅಂದ್ರೆ?’

‘ಇದೊಂದು ರೀತಿಯ ಆತ್ಮಹತ್ಯೆ. ಬ್ಯಾಟ್ಸ್‌ಮನ್ ತನ್ನ ವಿಕೆಟನ್ನು ತಾನೇ ಕೆಡವಿಕೊಳ್ಳೋದು... ಅತ್ತೆಯ ಮಗಳು ಚಂಡಿ ಅಂತ‌ ಗೊತ್ತಿದ್ದೂ ನಿನ್ನನ್ನ ಮದುವೆಯಾಗಿದೀನಲ್ಲಾ ನಾನು ಅದು!’

‘ನನ್ನನ್ನು ಹಂಗಿಸದಿದ್ರೆ ನಿಮ್ಗೆ ಉಂಡ ಅನ್ನ ಜೀರ್ಣವಾಗೋದಿಲ್ಲ ಅಲ್ವೇ? ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸೋದು ಅಂದ್ರೆ ಏನ್ರೀ?’

///‘ಬ್ಯಾಟರ್ ಕಾಲನ್ನು ವಿಕೆಟ್‌ಗೆ ಅಡ್ಡ ಇಡುವ ತಪ್ಪನ್ನು ಅವರಿಂದ ಮಾಡಿಸೋದು./// ಚೆನ್ನೈ ಪಂದ್ಯದಲ್ಲಿ ನಮ್ಮ ಕ್ಯಾಪ್ಟನ್ ರೋಹಿತ್ ಶರ್ಮಾರನ್ನು ಆಸ್ಟ್ರೇಲಿಯಾದ ಹ್ಯಾಜಲ್ ವುಡ್ ಔಟ್ ಮಾಡಿದ್ದು ಅದೇ ರೀತಿ. ಮದುವೆಗೆ ಮೊದಲು ನಿನ್ನ ಮೋಹಜಾಲದಲ್ಲಿ ನನ್ನನ್ನು ಬೀಳಿಸಿಕೊಂಡೆಯಲ್ಲಾ, ಅದೂ ಎಲ್‌ಬಿಡಬ್ಲ್ಯುನೇ- ಲವ್ ಬಿಫೋರ್ ವೆಡಿಂಗ್!’

‘ಈ ಲವ್, ಪ್ರೀತಿ ಬಗ್ಗೆ ಫಿನ್ಲೆಂಡ್ ಯೂನಿವರ್ಸಿಟಿ ಸಂಶೋಧನೆ ಮಾಡಿದೆಯಂತಲ್ರೀ!’

‘ಹೌದು, ಪ್ರೀತಿಯಲ್ಲಿ ಇಪ್ಪತ್ತೇಳು ವಿಧಗಳಿವೆಯಂತೆ!’

‘ಅಷ್ಟೊಂದು ಪ್ರೀತಿಗಳೇ?! ನಂಗೆ ‌ಗೊತ್ತಿರೋವು ಎರಡೇ- ಅಮ್ಮನ ಪ್ರೀತಿ ಮತ್ತು ಮಕ್ಕಳ ಪ್ರೀತಿ’.

‘ಗಂಡನ ಪ್ರೀತಿಯಂತೂ ನಾಪತ್ತೆ’.

‘ನಿಮ್ಗೆ ಹೆಂಡ್ತಿ ಪ್ರೀತಿ ಗೊತ್ತಿದ್ರೆ ತಾನೇ? ಮತ್ತೆ ಯಾವ ಪ್ರೀತಿಗಳಿವೆ?’

‘ದೈಹಿಕ ಮತ್ತು ಮಾನಸಿಕ. ಮೊದಲನೇದು ಎಲ್‌ಬಿಡಬ್ಲ್ಯು- ಆಕರ್ಷಕ. ಈಗಿನದು ಲವ್ ಆಫ್ಟರ್ ವೆಡಿಂಗ್- ನೀರಸ! ಎರಡೂ ನಮ್ಮ ಅನುಭವಗಳೇ ಅಲ್ವೆ?’

ಗರಂ ಆಗಿ, ಧೊಪ್ಪನೆ ‌ಹೆಜ್ಜೆ ಹಾಕುತ್ತಾ ಶ್ರೀಮತಿಯವರ ನಿರ್ಗಮನವಾಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT