ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಗೋ ಕೊರೊನಾ ಗೋ!

Published 25 ಡಿಸೆಂಬರ್ 2023, 19:53 IST
Last Updated 25 ಡಿಸೆಂಬರ್ 2023, 19:53 IST
ಅಕ್ಷರ ಗಾತ್ರ

‘ಏನು ಕೊರೊನಾ ಹೆಂಗಿದ್ದೀಯ? ಎರಡೊರ್ಸದ ಹಿಂದೆ ನೀನು ಬಂದುದ್ದೇ ನಮ್ಮನ್ನ ಓಕಳಿ ಇಟ್ಟಾಡಿಸಿ ಹೊಂಟೋದೆ! ನಿನ್ನ ಬಲಿ ಹಾಕೋಕೆ ‘ಏಷ್ಯಾದಲ್ಲೇ ದೊಡ್ಡ ಕೊರೊನಾ ಆಸ್ಪತ್ರೆ ಮಾಡ್ತೀವಿ’ ಅಂತ ಬೂಸಿ ಬುಟ್ಟು ಮಂಚ, ಹಾಸಿಗೆ ಮಾರಿ ಕಾಸು ಮಾಡಿಕ್ಯಂದು ದಿಮ್ಮಗಾದೋರು ಭಾಳ ಜನ’.

‘ನಾನೂ ನೋಡ್ತಾನೆ ಇವ್ನಿ ಕಯ್ಯಾ, ನಿನ್ನ ಸಂತಾನ ಓಮಿಕ್ರಾನ್ ಬಂದು ಹೋಯ್ತು. ಈಗ ಮೂರನೇ ತಲೆಮಾರು ಜೆಎನ್-ಒಂದು ಬಂದು ಅಮರಿಕ್ಯಂಡದೆ. ಸತ್ತೋರ್ನ ತಕ್ಕೋಗಿ ಕಸದಂಗೆ ಎಸೆದಿದ್ದು ನೆನೆಸಿಗ್ಯಂಡರೆ ಈಗಲೂ ಜೀವ ಜಲ್ ಅಂತದೆ. ರಾಜಕಾರಣಿಗಳು ಮಾತ್ರ ‘ಜನ ಏನೂ ದಿಗಿಲು ಬೀಳಬೇಕಿಲ್ಲ’ ಅಂತ ಮೂತಿ ಒರೆಸಿಗ್ಯತರೆ. ನೀನೆಂಗೂ ಅವುರ ಬಡ್ಡೆಗೆ ಹೋಗಕುಲ್ಲ ಅನ್ನೋ ಧೈರ್ಯ ಅವುರಿಗೆ!’

‘ನೀನು ಬರೀ ಜನರ ಆರೋಗ್ಯಕ್ಕೆ ಮಾತ್ರ ಅಮರಿಕ್ಯಂಡು ರೋಸ್ತೀಯ ಅಂದುಕಂಡಿದ್ದೋ ಕಪ್ಪಾ. ಇಲ್ಲ, ನೀನು ವ್ಯವಸ್ಥೆಯಲ್ಲೇ ಬೇರು ಬುಟ್ಟಿದೀಯ. ಕುಸ್ತಿ ಮಾಡೋರಿಗೆ ಚಿತ್ ಮಾಡಿ ಬುಟ್ಟಿದೀಯ, ಲೈಂಗಿಕ ದೌರ್ಜನ್ಯ ಮಾಡೋ ಅಪರಾಧಿಗಳ ಮನಸ್ಸಲ್ಲಿ ಕಾಲು ಇಳೆಬುಟ್ಕಂದು ಕುಂತಿರ್ತೀಯ, ರಾಜಕಾರಣಿಗಳಿಗೆ ಐನ್ ಟೈಮಲ್ಲಿ ತಲೆಕೆಡಿಸಿ ಬಯ್ಯೋತ್ಪಾದನೆ ಮಾಡ್ತೀಯ. ಸರ್ಕಾರಿ ಸ್ಕೂಲುಗಳ ಬಾಯಿಗೆ ಬೀಗ ಹಾಕಿದ್ದೀಯ, ಕೆಪಿಎಸ್‍ಸಿ ಲಿಸ್ಟಲ್ಲಿ, ಭ್ರಷ್ಟಾಚಾರಿ ಅಧಿಕಾರಿಗಳ ಪಟ್ಟೀಲಿ ನಿನ್ನ ಸಂತಾನದ ವೈರಸ್ ಆರ್ಭಟವೇ ಪವರ್‌ಫುಲ್ಲಾಗ್ಯದೆ. ಹಿಂಗೆ ತಡೆದು ತಡೆದು ನೀನು, ನಿನ್ನ ಸಂತಾನ ಬಂದು ನಮಗೆ ಅಮರಿಕ್ಯತಾ ಇದ್ರೆ ಈಟಂಬಲಿ ತಿನ್ನೋ ನಾವೆಂಗೆ ಬದುಕಾಟ ಮಾಡದು?’

‘ಬ್ಯಾಡ ಕಯ್ಯಾ ಕೊರೊನಾ, ನೀನು ಗಟ್ಟು ಕಾಯಿಲೆ ತಕ್ಕಂದು ಬಂದಿದಯ್ ಅಂತ ಅನ್ನ ತೆಗೆಸಿ ವೀಳ್ಯದೆಲೆ, ಉಪ್ಪು, ಮೆಣಸಿನಕಾಯಿ ನೀವಳಿಸಿ ಮೂರು ದಾರಿ ಸೇರೋ ಕಡೆ ಚೆಲ್ಲತೀವಿ ಕಪ್ಪ. ತನಿ ಎರೆದು ತಂಪು ಮಾಡಿ ದೇವರ ಕ್ವಾಪನೂ ಇಳಿಸ್ತೀವಿ. ಮುಂದ್ಕೆ ಹಿಂಗೆಲ್ಲಾ ಆಕ್ಸಲಾ ಮಾಡಬ್ಯಾಡ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT