ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ದೀಪಾವಳಿ ಧಮಾಕ

Last Updated 15 ನವೆಂಬರ್ 2020, 19:30 IST
ಅಕ್ಷರ ಗಾತ್ರ

‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಎಂದು ಹಾಡುತ್ತಾ ಬಂದ ಮಡದಿಯ ಕಾಲೆಳೆದೆ- ‘ಮೇಡಂಗೆ ರಾಜ್ಯೋತ್ಸವದ ಖುಷಿ ಹೆಚ್ಚಾಗಿರೋ ಹಾಗಿದೆ’.

‘ರಾಜ್ಯೋತ್ಸವವಷ್ಟೇ ಅಲ್ಲಾರಿ, ರಾಷ್ಟ್ರೋತ್ಸವ. ಹೆಣ್ಮಕ್ಳೇ ಸ್ಟ್ರಾಂಗು ಅಂತ ಮತ್ತೆ ಸಾಬೀತಾಯ್ತಲ್ಲ’ ಎಂದಳು.

‘ಜನನಿ, ತನುಜಾತೆ ಇಬ್ರೂ ಸ್ಟ್ರಾಂಗೇ. ಆದ್ರೆ ಈಚೆಗೆ ತಾಯಿ ಹೆಚ್ಚು ಸ್ಟ್ರಾಂಗ್ ಆಗ್ತಿದ್ದು ಮಗಳು ಸೊರಗಿದಾಳೆ’.

‘ಏನಿಲ್ಲ, ಜಗತ್ತಿನ ದೊಡ್ಡಣ್ಣನ ಚುನಾವಣೇಲಿ ಮಂಡ್ಯದ ಗಂಡು, ಡಾಕ್ಟರ್ ವಿವೇಕ್ ಮೂರ್ತಿ ಕನ್ನಡಮ್ಮನ ಕೀರ್ತಿಪತಾಕೆಯನ್ನು ಹಾರಿಸ್ಲಿಲ್ವೇ? ಅವರನ್ನ ಭಾವಿ ಅಧ್ಯಕ್ಷ ಬೈಡನ್ ಅವರು ಕೋವಿಡ್ ಕಾರ್ಯಪಡೆಯ ಅಧ್ಯಕ್ಷರನ್ನಾಗಿ ನೇಮಿಸಿದಾರೆ.ನಮ್ಮ ದೇಶದ ಮಹಿಳೆಯ ಮಗಳು ಕಮಲಾ ಹ್ಯಾರಿಸ್, ಅಮೆರಿಕದ ಪ್ರಥಮ ಮಹಿಳಾ ಉಪಾಧ್ಯಕ್ಷರಾಗಲಿದ್ದಾರೆ, ಅವರು ಮತ್ತು ಬೈಡನ್ ಜೋಡಿ ಆಯ್ಕೆಯಾಗಿರೋದ್ರಿಂದ ಭಾರತಕ್ಕೆ ಬಹಳ ಅನುಕೂಲ’.

‘ಹೇಗೆ ಹೇಳ್ತೀಯಾ?’

‘ಬೈಡನ್, ಅಮೆರಿಕದಲ್ಲಿ ದಾಖಲೆಗಳಿಲ್ಲದಿರೋ 5 ಲಕ್ಷ ಭಾರತೀಯರಿಗೆ ಪೌರತ್ವ ನೀಡಿ ಎಚ್ಒನ್ಎನ್ಒನ್ ವೀಸಾ ನೀತಿ ಸಡಿಲಿಸ್ತಾರಂತೆ’.

‘ಅಯ್ಯೋ... ಅದು ಎಚ್ಒನ್ಎನ್ಒನ್ ಅಲ್ಲ ಕಣೇ, ಎಚ್ಒನ್‌ಬಿ ವೀಸಾ... ಆದಾಯ ತರೋ ಕನ್ನಡಿಗ ಸಾಫ್ಟ್‌ವೇರಿಗರಿಗೆ ಸುಲಭವಾಯಿತು. ಈಗ ನಮ್ಮ ರಾಜಾಹುಲಿ ಫುಲ್ ಖುಷ್! ಕುರ್ಚಿ ಭದ್ರ ಮಾಡ್ಕೊಳ್ಳೋಕೆ ಅವ್ರಿಗೆ ದೀಪಾವಳಿ ಕೊಡುಗೆಗಳ ಡಬಲ್ ಧಮಾಕಾ!’

‘ಅದ್ಹೇಗ್ರೀ?’

‘ದೇಶದಾದ್ಯಂತ ಹಲವೆಡೆ ಮತ್ತು ಕರ್ನಾಟಕದ ಎರಡು ಕಡೆ ನಡೆದ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಅವರ ಪಕ್ಷ ಜಯಭೇರಿ ಹೊಡೆದಿದೆ ಮತ್ತು ಅವರಿಗಿಂತ ಹೆಚ್ಚು ವಯಸ್ಸಾಗಿರೋರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದ್ರಿಂದ ದಿಲ್ಲಿ ಕಮಲ ದಳಪತಿಗಳು, ಅವರಿಗೆ ವಯಸ್ಸಾಯ್ತು, ಕುರ್ಚಿ ಬಿಡಿ ಅನ್ನೋ ಹಾಗಿಲ್ಲ’.

‘ಓ ಹೌದಲ್ವೇ?’ ಎನ್ನುತ್ತಾ ಮಡದಿ ನಕ್ಕಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT