ಗುರುವಾರ , ಡಿಸೆಂಬರ್ 12, 2019
17 °C
ರಾಜಕೀಯ ಪ್ರಹಸನ

ದೇವರೂ ‘ಕೈ’ ಕೊಡುವುದೇ?

Published:
Updated:
Prajavani

ಬೆಕ್ಕಣ್ಣ ಬಲು ಖುಷಿಯಲ್ಲಿತ್ತು.

‘ಅಂತೂ ಕರ್ನಾಟಕದಾಗೂ ರಾಮರಾಜ್ಯ ಬಂತಲ್ಲವ್ವ. ಮೋದಿಮಾಮ ರೈತರಿಗೆ ಆರು ಸಾವಿರ ರೂಪಾಯಿ ಕೊಡೂದ್ರ ಜೊತಿಗಿ ಎಡ್ಯೂರಜ್ಜ ನಾಕು ಸಾವಿರ ಕೊಡ್ತಾನಂತ. ಹೀಂಗ ಮ್ಯಾಗೆ, ಕೆಳಗೆ ಒಂದೇ ಪಕ್ಷ ಇದ್ರೆ ಎಷ್ಟು ಅಭಿವೃದ್ಧಿ ಆಕೈತಿ ಹೌದಿಲ್ಲೋ’ ದೊಡ್ಡ ರಾಜಕೀಯ ಪಂಡಿತನಂತೆ ನುಡಿಯಿತು.

‘ನಿಮ್ಮ ಎಡ್ಯೂರಜ್ಜ ಅಲ್ಲೇ ರೆಸಾರ್ಟಿನಾಗೆ ಪ್ರಮಾಣವಚನ ತಗಂತಾರೆ ಅಂದ್ಕಂಡಿದ್ದೆ ನಾ’.

‘ಹಂಗೇ ಮಾಡಿದ್ರ ಛಲೋ ಇತ್ತು. ಕಪ್ಪೆ ಹಿಡದು ಬುಟ್ಟಿಗೆ ತುಂಬಿದಂತೆ ಈ ಎಮ್ಮೆಲ್ಲೆ ಹಿಂಡು ಹೊಡಕಂಡು ರೆಸಾರ್ಟಿಗೆ ಹೋಗೂದು, ಮತ್ತ ಕರ್ಕಂಡು ಬರೂದು... ಈ ರಗಳೆ ಬದ್ಲಿಗೆ ರೆಸಾರ್ಟಿನಾಗೇ ಅಧಿವೇಶನ ಕರದು, ಅಲ್ಲೇ ವಿಶ್ವಾಸಮತ ನಿರ್ಣಯ ಮಂಡನೆ ಮಾಡಿದ್ರ ಮಾತೇ ಮುಗಿತಿಲ್ಲೋ. ಆಯಾ ಪಕ್ಷಗಳಿಗೆ ಹೆಂಗೂ ಅವ್ರವ್ರ ರೆಸಾರ್ಟುಗಳು ಅದಾವು, ಇನ್ಮೇಲೆ ಅವನ್ನೇ ಮಿನಿ ವಿಧಾನಸೌಧ ಅಂತ ಕರೆದ್ರಾತು...’ ಬೆಕ್ಕಣ್ಣ ರಾಗವಾಗಿ ಹೇಳಿತು.

‘ವಿಧಾನಸೌಧ ಏನ್ ಪ್ರವಾಸೀಬಂಗಲೆ ಮಾಡೂದೇನು ಮತ್ತ. ಅದ್ಸರಿ... ಎಡ್ಯೂರಜ್ಜ ಈ ಸಲ ಏನರ ಎಡವಟ್ಟು ಮಾಡಿದ್ರ ಅಂತ ‘ಶಾ’ಣ್ಯಾ ಮಸ್ತ್ ಕಣ್ಗಾವಲು ಹಾಕ್ತಾನಂತ. ಒಂದ್ ಕಡ್ಡಿ ಅತ್ತಿಂದಿತ್ತ ಮಾಡಾಕೂನು ‘ಶಾ’ಣ್ಯಾನ ಆಣತಿ ಬೇಕಂತ’ ನಾನು ಚುಚ್ಚಿದೆ.

‘ಬರೋಬ್ಬರಿ ಅದ. ಅತೃಪ್ತರನ್ನು ಅನರ್ಹರು ಅಂತ ಸ್ಪೀಕರಣ್ಣ ಹೇಳಿ ‘ಶಾ’ಣ್ಯಾನ ಕೆಲಸ ಹಗುರ ಮಾಡಿದ ನೋಡು. ಇಲ್ಲಕ್ಕಂದ್ರ ರೆಸಾರ್ಟಿನಾಗಿದ್ದವರಲ್ಲಿ ಯಾರಿಗಿ ಕುರ್ಚಿ ಕೊಡೂದು, ಯಾರಿಗಿಲ್ಲ ಅಂತ ಬಲು ಚಿಂತೆಯಾಗ್ತಿತ್ತು. ಪಾಪ... ಕುಮಾರಣ್ಣ, ಲಿಂಬೆಯಣ್ಣ ಎಷ್ಟ್ ದೇವಸ್ಥಾನ ಸುತ್ತಿದ್ರು, ಎಷ್ಟ್ ಹರಕೆ ಹೊತ್ರು... ಎಲ್ಲ ದೇವರೂ ಹೀಂಗ ‘ಕೈ’ ಕೊಡೂದ. ಶಾಸಕರಂಗೆ ದೇವರುಗಳೂ ಪಕ್ಷಾಂತರ ಮಾಡಿದಂಗೆ ಆತಿಲ್ಲೋ... ಅದೆಷ್ಟೋ ಕೋಟಿ ರೊಕ್ಕದಾಗ ಕುಕ್ಕೆ ಸುಬ್ರಹ್ಮಣ್ಯಂಗೆ ಚಿನ್ನದ ರಥ ಮಾಡಿಸಕ್ಕೆ ಕುಮಾರಣ್ಣ ಕಟ್ಟಪ್ಪಣೆ ಮಾಡಿದ್ದರಲ್ಲ. ಆ ಸುಬ್ರಹ್ಮಣ್ಯ ಅತ್ತಾಗಿ ನಿಖಿಲನನ್ನೂ ಗೆಲ್ಲಿಸಲಿಲ್ಲ, ಇತ್ತಾಗಿ ಸಿಎಂ ಕುರ್ಚಿನೂ ಉಳಿಸಲಿಲ್ಲ’ ಬೆಕ್ಕಣ್ಣ ಲೊಚಗುಟ್ಟಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು