ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ವರಿಷ್ಠ ವ್ರತ

Last Updated 22 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

‘ಸಂಕ್ರಾಂತಿ ಮುಗಿದು ಶಿವರಾತ್ರಿ ಬರುತ್ತಿದ್ದರೂ ಸಚಿವ ಸಂಪುಟ ಪುನರ್‌ರಚನೆಯಾಗಲಿಲ್ಲ, ನಾನು ಮಂತ್ರಿಯಾಗಲಿಲ್ಲ...’ ಶಾಸಕರು ಮಮ್ಮಲ ಮರುಗಿದರು.

‘ಸಮಾಧಾನ ಮಾಡ್ಕೊಳ್ಳಿ, ಸಂಕ್ರಾಂತಿಯ ಎಳ್ಳು ಬೆಲ್ಲ ಮಿಸ್ಸಾದ್ರೂ ಯುಗಾದಿಯ ಬೇವು ಬೆಲ್ಲ ಸಿಗುತ್ತೆ ಅಂತ ಫ್ಯಾಮಿಲಿ ಜ್ಯೋತಿಷಿ ಹೇಳಿದ್ದಾರೆ’ ಶಾಸಕರಿಗೆ ಪತ್ನಿ ಸಾಂತ್ವನ ಹೇಳಿದರು.

‘ಪೂಜೆ-ಪುನಸ್ಕಾರ ಮಾಡಬೇಕಂತಾ?’

‘ಹೌದು, ವರಿಷ್ಠ ವ್ರತ ಆಚರಿಸಿದರೆ ನಿಮಗಿರುವ ಶತ್ರು ಕಾಟ, ಪೈಪೋಟಿ ಪೀಡೆ, ಕುರ್ಚಿಭಂಗ ದೋಷಗಳು ಪರಿಹಾರವಾಗಿ, ಯುಗಾದಿ ವೇಳೆಗೆ ನೀವು ಮಂತ್ರಿಯಾಗಿ ಮನೆ ಮುಂದೆ ಗೂಟದ ಕಾರು ನಿಂತಿರುತ್ತದೆ. ನಾವು ಆನಂದವಾಗಿ ಯುಗಾದಿ ಆಚರಿಸಬಹುದು ಎಂದು ಜ್ಯೋತಿಷಿ ಹೇಳಿದ್ದಾರೆ. ನಾನು ನೇಮ, ನಿಷ್ಠೆಯಿಂದ ವರಿಷ್ಠ ವ್ರತ ಮಾಡುತ್ತಿದ್ದೇನೆ...’

‘ಮಾಡು, ನಾನೂ ನಿತ್ಯ ವರಿಷ್ಠರ ಸ್ಮರಣೆ, ಭಜನೆ ಮಾಡ್ತೀನಿ’ ಶಾಸಕರು ಖುಷಿಯಾದರು.

‘ತಪ್ಪದೇ ಮಾಡಿ, ಹಾಗೇ ದೆಹಲಿಗೆ ಹೋಗಿ ವರಿಷ್ಠರ ದರ್ಶನ ಮಾಡಿ, ಅಡ್ಡಬಿದ್ದು ಬೇಡಿಕೊಂಡರೆ ಶೀಘ್ರ ಕಾರ್ಯಸಿದ್ಧಿಯಾಗುವುದಂತೆ. ದರ್ಶನ ದೊರೆಯದಿದ್ದರೆ ಅವರ ಮನೆ ಬಾಗಿಲಿಗೆ ಕೈ ಮುಗಿದು, ಕಾಯಿ ಒಡೆದು ಬಂದರೂ ಪುಣ್ಯ ಲಭಿಸುವುದಂತೆ. ವಿರೋಧಿಗಳ ಚಾಡಿ ಮಾತನ್ನು ಕಿವಿ ತುಂಬಿಕೊಂಡು ವರಿಷ್ಠರು ಕೋಪಗೊಂಡಿದ್ದಾರಂತೆ. ನೀವು ಪಕ್ಷನಿಷ್ಠೆ, ಅಭಿವೃದ್ಧಿ ಮಂತ್ರ ಜಪಿಸಿದರೆ ಅವರು ಶಾಂತರಾಗಿ ವರ ನೀಡುತ್ತಾರೆ ಎಂದು ಜ್ಯೋತಿಷಿ ಹೇಳಿದ್ದಾರೆ’.

‘ವ್ರತ, ಜಪ ಮಾಡಿಯೂ ವರಿಷ್ಠರು ಮಂತ್ರಿ ಕುರ್ಚಿಯ ಕೃಪೆ ಮಾಡದಿದ್ದರೆ ಏನು ಮಾಡೋದು?’ ಶಾಸಕರಿಗೆ ಆತಂಕ.

‘ಇಷ್ಟೆಲ್ಲ ಮಾಡಿಯೂ ವರಿಷ್ಠರು ಒಲಿಯದಿದ್ದರೆ ಬೇರೆ ದಾರಿ ನೋಡಿಕೊಳ್ಳಬೇಕಷ್ಟೇ...’

‘ಬೇರೆ ದಾರಿ ಯಾವುದಿದೆ?’

‘ಇದೆ... ನೀವು ಪಕ್ಷ ಚೇಂಜ್ ಮಾಡಿ, ನಾನು ನಮ್ಮ ಫ್ಯಾಮಿಲಿ ಜ್ಯೋತಿಷಿಯನ್ನು ಚೇಂಜ್ ಮಾಡ್ತೀನಿ...’ ಶಾಸಕರ ಪತ್ನಿ ಸಿಟ್ಟಿನಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT