ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಭವಿಷ್ಯವಾಣಿ!

Last Updated 28 ಜನವರಿ 2022, 19:31 IST
ಅಕ್ಷರ ಗಾತ್ರ

‘ಈ ಪಂಚರಾಜ್ಯಗಳ ಮಿನಿ ಮಹಾಚುನಾವಣೆಯಲ್ಲಿ ಬೀಳೋರ‍್ಯಾರು, ಏಳೋರ‍್ಯಾರಯ್ಯಾ?’, ಕನ್ನಡದ ಕೋಟ್ಯಧಿಪತಿ ಕ್ವಿಜ್ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಠೀವಿಯಲ್ಲಿ ಪ್ರಶ್ನೆ ಎಸೆದ ಗೆಳೆಯ.

‘ಭವಿಷ್ಯ ಹೇಳೋಕೆ ನಾನು ಬ್ರಹ್ಮಾಂಡ ಜ್ಯೋತಿಷಿಯೂ ಅಲ್ಲ, ನೋಸ್ಟರ್ ಡಾಮಸ್ಸೂ ಅಲ್ಲ. ಈಗಲೇ ಏನೂ ಹೇಳೋಕಾಗಲ್ಲ.
ಎಲ್ಲ ಪಕ್ಷಗಳೂ ಗದ್ದುಗೆ ಏರಲು ಮಾಡುತ್ತಿರುವ ಕಸರತ್ತು ಒಂದೇ ಎರಡೇ? ಮತದಾರರಿಗೆ ಎಂತೆಂಥಾ ಆಕರ್ಷಕ ಯೋಜನೆಗಳು,
ಉಚಿತ ಕೊಡುಗೆ ಆಶ್ವಾಸನೆಗಳ ಮಹಾಪೂರ. ಈ ಗ್ರ್ಯಾಂಡ್ ತಮಾಷಾದಿಂದ ನಮಗೆಲ್ಲಾ ಉಚಿತ ಮನರಂಜನೆ. ಕುದುರೆ ವ್ಯಾಪಾರದಲ್ಲಿ, ಬೇಲಿ ಹಾರೋದರಲ್ಲಿ ಗೋವಾದನಾಯಕರು ವಿಶ್ವದಾಖಲೆ ಮಾಡಿದಾರಂತೆ!’ ಎಂದೆ.

‘ಈ ಸಮರದಲ್ಲಿ ಅಣ್ತಮ್ಮ, ಮಾವ– ಸೊಸೆ ಜಿದ್ದಾಜಿದ್ದಿಗೆ ಬಿದ್ದಿದಾರೆ, ಸಿನಿಮಾ ತಾರೆಯರು, ಕ್ರೀಡಾಪಟುಗಳು, ಎಂಟಡಿ ಎತ್ತರದ ಲಂಬೂಜಿ ಕ್ಯಾನ್ವಾಸಿಗೆ ಇಳಿದಿದಾರೆ!’

‘ಮೈ ಲಡಕೀ ಹೂ, ಮೈ ಲಡ್ ಸಕ್ತೀ ಹೂ ಅಂತ ಪ್ರಿಯಾಂಕಾ ವಾದ್ರಾ ಸಮರ ಸಾರಿದಾರೆ!’

‘ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಬಂದಿದ್ದು ಕಾಕತಾಳೀಯ’.

‘ಮಹಿಳಾ ದಿನಾಚರಣೆ ಇರೋದು ಮಾರ್ಚ್‌ನಲ್ಲಿ ಅಲ್ವೇನಯ್ಯಾ?’

‘ಮಾರ್ಚ್ ಎಂಟರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಜನವರಿ 24ರಂದು ಹೆಣ್ಣು ಮಗುವಿನ ರಾಷ್ಟ್ರೀಯ ದಿನಾಚರಣೆ. ನಮ್ಮ ದೇಶಕ್ಕೆ ಇಂದಿರಾ ಗಾಂಧಿ ಭಾರತದ ಪ್ರಧಾನಿ ಆದ ಈ ದಿನವನ್ನು 2009ರಿಂದ ಆ ಹೆಸರಿನಲ್ಲಿ ಆಚರಿಸಲಾಗುತ್ತದೆ’.

‘ಇದು ಇನ್ನೆಷ್ಟು ಕಾಲ ಮುಂದುವರಿ ಯುತ್ತೋ ಹೇಳಲು ಬರುವುದಿಲ್ಲ’.

‘ಯಾಕೋ?’

‘ನಮ್ಮ ದೇಶದಲ್ಲೀಗ ರಾಜ್ಯಗಳ,ನಗರಗಳ ಹೆಸರು ಬದಲಾವಣೆ ಪರ್ವ ನಡೆಯುತ್ತಿದೆಯಲ್ಲ... ಕಮಲಪತಿಗಳಿಂದ ‘ಹಸ್ತ’ಕ್ಷೇಪ ಗ್ಯಾರಂಟಿ’.

ನನ್ನ ಭವಿಷ್ಯವನ್ನು ಕೇಳಿ ಮಿತ್ರ ದಂಗಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT