ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಭೂತ ಸ್ಟ್ರಾಂಗು?

Last Updated 8 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಹಿರಿಯ ಕೋವಿಡಣ್ಣನಿಗೆ ಶಾನೆ ಬೇಜಾರಾಗಿತ್ತು. ಭರತವರ್ಷದಲ್ಲಿ, ವಿಶ್ವಮಟ್ಟದಲ್ಲಿ ಎಲ್ಲೆಲ್ಲೂ ಒಲಿಂಪಿಕ್ಸ್ ಪದಕ ಗೆದ್ದವರ ಕಥೆಗಳೇ ಪತ್ರಿಕೆಗಳ ಹೆಡ್‌ಲೈನಿನಲ್ಲಿ ಮಿಂಚುತ್ತಿವೆ. ಮಾರಿ-ಹೆಮ್ಮಾರಿ, ಚಂಡ-ಪ್ರಚಂಡ, ಕೊರೊನಾ ರಣಕೇಕೆ ಎಂದೆಲ್ಲ ಬೊಬ್ಬಿರಿಯುತ್ತಿದ್ದ ಟಿ.ವಿಗಳೂ ತಮ್ಮನ್ನು ಈ ಪರಿಯೊಳು ನಿರ್ಲಕ್ಷ್ಯ ಮಾಡುವುದೇ... ಈ ಹುಲುಮಾನವರು ತನ್ನನ್ನು ಕಾಲಕಸ ಮಾಡಿ, ಅದೆಂಥದೋ ಆಟದಲ್ಲಿ ಗೆಲ್ಲುವುದೇ ದೊಡ್ಡದೆನ್ನುತ್ತಾರಲ್ಲ ಎಂದುಕೊಳ್ಳುತ್ತಿದ್ದಾಗ, ಒಲಿಂಪಿಕ್ಸ್‌ನ ಐದು ಉಂಗುರ ಕುಣಿಯುತ್ತ ಬಂದಿತಲ್ಲಿಗೆ.

‘ನೋಡಿದ್ಯಾ... ನೀನೆಷ್ಟೇ ಅಟ್ಟಹಾಸ ಮಾಡಿ, ತುಳಿದು ಹೊಸಕಿದ್ರೂ ಹೆಂಗೆ ಪುಟಿದೆದ್ದು ಆಟಗಾರರು ಆಡ್ತಿದಾರೆ, ಜನ ನೋಡ್ತಿದಾರೆ, ಸಂಭ್ರಮಿಸ್ತಿದಾರೆ... ನಿನಗಿಂತ ನಾನೇ ಸ್ಟ್ರಾಂಗು ಗುರು’ ಎಂದು ನಕ್ಕಿತು.

‘ಸುಮ್ನಿರಯ್ಯ... ಜನರ ಪ್ರಾಣವೇ ನನ್ನ ಕೈಯಲ್ಲಿದೆ. ಒಂದಾದ ನಂತರ ಒಂದು ಅಲೆಗಳು, ಒಂದಕ್ಕಿಂತ ಇನ್ನೊಂದು ಭೀಕರವಾದ ಆಲ್ಫಾ, ಬೀಟಾ, ಗಾಮಾ, ಡೆಲ್ಟಾ ಆವೃತ್ತಿಗಳ ಸುನಾಮಿಯನ್ನೇ ಎಬ್ಬಿಸಿದ್ದೇನಲ್ಲ. ಮುಂದಿನ ಅಲೆ ಬರುತ್ತೆ ಇರು... ಯಾರು ಸ್ಟ್ರಾಂಗು ಅಂತ ಗೊತ್ತಾಗುತ್ತೆ’ ಎಂದು ಅಬ್ಬರಿಸಿತು.

ಹಿಂದಿನಿಂದ ಯಾರೋ ಪಕಪಕನೆ ನಕ್ಕಂತಾಯಿತು. ಇಬ್ಬರೂ ಗಾಬರಿಯಿಂದ ತಿರುಗಿದರು. ‘ನೀವೆಂಥ ಸ್ಟ್ರಾಂಗಯ್ಯಾ.... ನನ್ನ ಅಲುಗಾಡಿಸೋದಕ್ಕೆ ನೀವಲ್ಲ, ನಿಮ್ಮಪ್ಪ, ತಾತ ಬಂದ್ರೂ ಆಗಲ್ಲ’ ಎಂದು ಗುಟುರು ಹಾಕುತ್ತ ಹುರಿಗಟ್ಟಿದ ಕಬಂಧಬಾಹುಗಳನ್ನು
ತೋರಿಸುತ್ತ ಬಂದಿತು ಭರತವರ್ಷದ
ಜಾತಿ ಭೂತ.

‘ಹೋಯ್... ಕೋವಿಡಣ್ಣ... ನಿನ್ನೆ ಮೊನ್ನೆ ಬಂದಿರೋ ನಿನ್ನನ್ನ ಈ ಮನುಷ್ಯರು ಇನ್ನೊಂದೆರಡು ವರ್ಷದಲ್ಲಿ ನಿವಾರಿಸಿ ಒಗೀತಾರೆ. ನಾನು ಸಾವಿರಾರು ವರ್ಷಗಳಿಂದ ಇದೀನಿ... ಇನ್ನೂ ಸಾವಿರಾರು ವರ್ಷ ಇರ್ತೀನಿ! ಮೊನ್ನೆ ಭರತಮಾತೆಯ ಪುತ್ರಿಯರು ಒಲಿಂಪಿಕ್ಸ್ ಹಾಕಿಯಲ್ಲಿ ಬೆರಗಾಗೋ ಅಂಥ ಸಾಧನೆ ಮಾಡಿದ್ರು. ಅದ್ರಲ್ಲಿ ಒಬ್ಬಳು ದಲಿತ ಆಟಗಾರ್ತಿ ಊರಿಗೆ ಒಂದು ಮರಿಜಾತಿಹುಳವನ್ನ ಕಳಿಸಿ, ಹೆಂಗೆ ಅವಮಾನಿಸಿದೆ ನೋಡು. ಯಾರು ಎಂಥದ್ದೇ ಸಾಧನೆ ಮಾಡಿರ‍್ಲಿ... ನಾನು ಒಂದು ಮೊಟಕಿದ್ರೆ ಎಲ್ಲ ನೆಲಕ್ಕೇ! ನಿಮ್ಮೆಲ್ಲರಿಗಿಂತ ನಾನೇ ಸ್ಟ್ರಾಂಗು!’ ಎಂದು ಅಟ್ಟಹಾಸ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT