ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಲೀಕಿಂಗ್ ನ್ಯೂಸ್!

Last Updated 28 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

‘ಗುರೂ... ಈ ಬ್ಲೂ ಟೂತ್ ಅಂದ್ರೇನು? ಅದನ್ನ ಕಿವೀಲಿ ಇಟ್ಕಂಡು ಸಬ್ ಇನ್‌ಸ್ಪೆಕ್ಟರ್ ಪರೀಕ್ಷೇಲಿ ಕಾಪಿ ಹೊಡೆದ್ರಂತೆ...’ ಹರಟೆಕಟ್ಟೇಲಿ ದುಬ್ಬೀರನನ್ನ ಗುಡ್ಡೆ ಕೇಳಿದ.

‘ಟೂತ್ ಅಂದ್ರೆ ಹಲ್ಲು, ಅದನ್ನ ಕಿವೀಲಿ
ಟ್ಕಂಡು ಕಾಪಿ ಹೊಡೆದ್ರಂತಾ? ವಿಚಿತ್ರ ಆತಪ’ ದುಬ್ಬೀರ ತಲೆ ಕೆರೆದುಕೊಂಡ.

‘ನಿನ್ತೆಲಿ, ನೀನು ಪೇಪರ್ ನೋಡಿಲ್ವಾ? ಕೆಲವ್ರು ಬನೀನ್‌ನಲ್ಲೂ ಏನೇನೋ ಇಟ್ಕಂಡು ಕಾಪಿ ಹೊಡೆದ್ರಂತೆ, ಇದಕ್ಕೇನಂತಿ?’

‘ಅದನ್ನ ಬನೀನ್ ಟೂತ್ ಅನ್ನಬೋದಾ?’ ಕೊಟ್ರೇಶಿ ನಕ್ಕ.

‘ಲೇಯ್, ಬನೀನ್ ಟೂತು, ಚೆಡ್ಡಿ ಟೂತು ಅಂತೆಲ್ಲ ಇರ್ತಾವೇನ್ಲೆ... ಬ್ಲೂ ಟೂತ್ ಅಂದ್ರೆ ಅದೊಂಥರ ಕನೆಕ್ಷನ್ ಟೆಕ್ನಾಲಜಿ. ಅದನ್ನ ಕಿವಿಗೆ ಸಿಗಿಸಿಕೊಂಡ್ರೆ ಮೊಬೈಲ್ ಇಲ್ದೆ ಮಾತಾಡಬೋದು. ಅದನ್ನೇ ಈ ಪರೀಕ್ಷೆ ಬರೆದೋರು ಕಿವಿ ಒಳೀಕೆ ಇಟ್ಕಂಡಿದ್ದದ್ದು...’ ತೆಪರೇಸಿ ವಿವರಿಸಿದ.

‘ಅಲ್ಲ ಎಂತೆಂಥವೆಲ್ಲ ಬಂದಾವಲ್ಲಲೆ, ಈ ದುಬ್ಬೀರನ ಜೇಬಿಂದ ನನ್ ಜೇಬಿಗೆ ಅಟಮೆಟಿಕ್ಕಾಗಿ ರೊಕ್ಕ ಬರೋತರ ಏನರೆ ಟೆಕ್ನಾಲಜಿ ಐತಾ?’ ಗುಡ್ಡೆ ನಕ್ಕ.

‘ಬರೀ ಇಂಥವೇ ನಿಮ್ಮವೆಲ್ಲ... ಟೆಕ್ನಾಲಜಿ ಏನರೆ ಇರ್‍ಲಿ, ಆ ಕ್ವಶ್ಚನ್ ಪೇಪರ್ ಹೆಂಗೆ ಲೀಕಾದ್ವು ಅದನ್ನ ಹೇಳ್ರಿ, ಸಬ್ ಇನ್‌ಸ್ಪೆಕ್ಟರ್ ಎಕ್ಸಾಂ ಒಂದೇ ಅಲ್ಲ, ಲೆಕ್ಚರರ್ ಎಕ್ಸಾಮು, ಇಂಜಿನಿಯರ್ ಎಕ್ಸಾಮು, ಬ್ಯಾಂಕ್ ಎಕ್ಸಾಮು ಎಲ್ಲ ಪೇಪರ್‍ರೂ ಇದೇ ತರ ಲೀಕಾಗಿದಾವಂತೆ’ ತೆಪರೇಸಿ ಹೇಳಿದ.

‘ಹಿಂಗೆ ಪರೀಕ್ಷೆ ಬರೆದು ಕೆಲ್ಸ ತಗೊಂಡೋರ್ನೆಲ್ಲ ‘ಲೀಕಾಫೀಸರುಗಳು’ ಅನ್ನಬೋದಾ?’ ಕೊಟ್ರೇಶಿ ಕೊಕ್ಕೆ.

‘ಈ ಲೀಕ್ ಅನ್ನೋದು ಎಲ್ಲ ಕಡಿ ಐತಿ. ಮಿಲಿಟ್ರಿ ಸೀಕ್ರೆಟ್ ಲೀಕ್, ಟೆಂಡರ್ ರೇಟ್ ಲೀಕ್, ಕಮಿಷನ್ ಪರ್ಸೆಂಟೇಜ್ ಲೀಕ್, ರಾಜಕಾರಣಿಗಳ ವಿಡಿಯೊ ಲೀಕ್ ಎಲ್ಲ ಇಲ್ಲೇನು?’ ತೆಪರೇಸಿ ಮಾತಿಗೆ ಬ್ರೇಕ್ ಹಾಕಿದ ಗುಡ್ಡೆ,

‘ಲೇ ತೆಪರ, ನಿಮ್ಮನಿ ನಲ್ಲಿ ಲೀಕ್ ಆಗಾಕತ್ತಿ ಒಂದು ವಾರಾತಂತೆ. ಮೊದ್ಲು ಅದನ್ನ ಸರಿ ಮಾಡ್ಸು ಹೋಗು, ಇಲ್ಲದಿದ್ರೆ ನಿನ್ನೆಂಡ್ತಿ ಪಮ್ಮಕ್ಕ ಬೆಂಡೆತ್ತಿ ನಿನ್ ಬಾಡಿ ಲೀಕ್ ಮಾಡಿದ್ರೆ ಕಷ್ಟ’ ಎಂದ. ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT