ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬೆಂಬಿಡದ ಲಂಚಭೂತ!

Last Updated 25 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಹರಟೆಕಟ್ಟೇಲಿ ಎಸಿಬಿ ರೈಡ್ ಬಗ್ಗೆ ಚರ್ಚೆ ನಡೀತಿತ್ತು: ‘ನೀನ್ ಏನೇ ಹೇಳು, ಕಷ್ಟಪಟ್ಟು ದುಡಿದ ದುಡ್ಡಿಗೆ ಸೇಫ್ಟಿ ಇಲ್ಲ ಅಂದ್ರೆ ಏನ್ಮಾಡ್ಬೇಕು?’ ಎಂದ ಬಳ್ಳೇಕಟ್ಟೆ.

‘ಲೇಯ್! ಅದು ಕಷ್ಟಪಟ್ ದುಡಿದ ದುಡ್ಡಲ್ಲ, ಲಂಚ ಹೊಡೆದು ಸಂಪಾದಿಸಿದ ದುಡ್ಡು’ ತಿದ್ದಿದ ಕೊಟ್ರ.

‘ಅದು ತಾನೇ ಏನ್ ಸುಮ್ನೆ ಬರುತ್ತಾ? ರಾಜಾರೋಷವಾಗಿ ಕೋಟಿ ಕೋಟಿ ಲಂಚ ಹೊಡೆಯೋದು ಅಂದ್ರೇನು ಪುಗಸಟ್ಟೆನಾ? ನಮೋ ಲಂಚಭೂತ ಅನ್ಬೇಕು!’

‘ನಿಜ ನಿಜ, ಅವರದ್ದು ಲಂಚದ ರೊಟ್ಟಿ, ನೋಟಿಗೆ ಕಸದ ತೊಟ್ಟಿ, ಮನೆಯೇ ಕೋಲಾರ ಚಿನ್ನದ ಹಟ್ಟಿ’.

‘ಬ್ಯಾಂಕಲ್ಲಿಟ್ರೂ ಬಿಡಲ್ಲ, ಬಂಕಲ್ಲಿಟ್ರೂ ಬಿಡಲ್ಲ, ಹಾಳಾಗೋಗ್ಲಿ ಈ ದೇಶದ ಸಹವಾಸನೇ ಬೇಡ ಅಂತ ಸ್ವಿಸ್ ಬ್ಯಾಂಕಲ್ಲಿಟ್ರೆ ಅಲ್ಲಿಂದಲೂ ಹಿಟ್ ಲಿಸ್ಟ್ ತರುಸ್ಕೊತಾರೆ’.

‘ಅಷ್ಟೇ ಅಲ್ಲ, ಒಂದು ಕಿಡ್ನಿ ತೆಗೆಸಿ ಚಿನ್ನ ಬಚ್ಚಿಟ್ಕೊಂಡ್ರೂ ಸ್ಕ್ಯಾನ್ ಮಾಡ್ತಾರೆ’.

‘ನಿಜ, ಅವರು ಚತುರ್ಭೂತಗಳಲ್ಲಿ ಲಂಚಭೂತ ಅಡಗಿಸಿಟ್ಟರೂ ಈ ಎಸಿಬಿ, ಇ.ಡಿ.ನೋರು ಅಲ್ಲಾವುದ್ದೀನ್ ದೀಪದ್ ತರ ಬ್ಯಾಟ್ರಿ ಹಾಕಿ ಅದನ್ನೂ ಹುಡುಕಿ ಕಿತ್ಕೊತಾರೆ’.

‘ಏನದು ಚತುರ್ಭೂತ...?’

‘ಭೂಮಿ, ಬೆಂಕಿ, ನೀರು, ಗಾಳಿ ಇವು ಚತುರ್ಭೂತ, ಆಕಾಶ ಐದನೇ ಭೂತ. ನೆಲ ಬಗೆದು ಇಟ್ಟಿದ್ದಾಯ್ತು, ಹಂಡೆ ಒಲೇಲಿ ಇಟ್ಟಿ ದ್ದಾಯ್ತು, ಪೈಪುಲೈನು, ನೀರಿನ ತೊಟ್ಟೀಲಿ ಇಟ್ಟಿದ್ದಾಯ್ತು. ಇನ್ ಉಳಿದಿರೋದು ಆಕಾಶ ಒಂದೇ!

‘ಆಕಾಶದಲ್ಲಿ ಎಲ್ ಇಡಕ್ಕಾಗುತ್ತೆ?’

‘ಈಗ ವೀಕೆಂಡಲ್ಲಿ ಬಾಹ್ಯಾಕಾಶಕ್ಕೇ ಹೋಗ್ಬಹುದು. ಅಲ್ಲೇ ಒಂದು ರಿಮೋಟ್ ಕಂಟ್ರೋಲ್ ಕ್ಯಾಪ್ಸೂಲ್ ಮಾಡಿ ನಮ್ ಒಡವೆ, ದುಡ್ಡು, ಚಿನ್ನ ಎಲ್ಲಾ ತುಂಬಿ ಆಕಾಶದಲ್ಲಿ ತೇಲಿ ಬಿಡೋದು’ ಐಡಿಯಾ ಕೊಟ್ಟ ಕೊಟ್ರ.

‘ಅದನ್ನೂ ಉಪಗ್ರಹಗಳು ಪತ್ತೆ ಮಾಡುತ್ವೆ’.

‘ಶನಿಗ್ರಹ ಹೆಗಲು ಹತ್ತುದ್ರೆ ಯಾವ ಗ್ರಹದಲ್ಲಿಟ್ರೂ ತಗಲಾಕ್ಕೊಳೋದೇ! ಕ್ಯಾಪ‍್ಸೂಲ್ ತೇಲಿಬಿಡೋದು ಬಿಟ್ಟು ಒಂದು ಕ್ಯಾಪ್ಸೂಲ್ ಗುಳುಂ ಅನ್ಸಿ, ಎಲ್ಲಾ ಮರೆತು ವ್ಯವಸ್ಥೆ ತರ ನಿದ್ದೆ ಹೊಡೆಯೋದೇ ಒಳ್ಳೇದು’ ಎಂದು ಅಲ್ಲೇ ತಲೆಗೆ ಕೈ ಕೊಟ್ಟ ಪರ್ಮೇಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT