ಚುರುಮುರಿ: ಸ್ಥಾನಭದ್ರ ಮಂತ್ರ

‘ಸಾ, ಸಂಪುಟಕ್ಕೆ ನಮ್ಮುನ್ನ ಸೇರಿಸಿಕ್ಯಳಿ ಅಂತ ವಲಸೆ ಸಾಸಕರು, ಕಾಲಾಂತರದಿಂದ ಗೇದೋರು, ನಾವೂ ಮಂತ್ರಿಯಾಗಬಕು ಅಂತ ಸಂಘಮಿತ್ರ ಸಾಸಕರು ಡೆಲ್ಲೀಲಿ ಶೋಕ ಸಂಗೀತ ಪಲುಕ್ತಾವರಂತೆ. ರಾಜಾವುಲಿನೂ ‘ನಾನೇ ರಾಜ, ನಾನೇ ಮಂತ್ರಿ’ ಅಂತ ದಡಿ ಹಿಡಕಂದು ನಿಂತವುರೆ!’ ಅಂದೆ.
‘ರಾಜಾವುಲಿ ತ್ಯಾಗಜೀವಿಗಳಿಗೆ ಕೊಟ್ಟ ಮಾತು ಉಳಿಸಿಕ್ಯಣ್ಕಾಗದೇ ನಿಗಮವಿದೆಕೋ ಪ್ರಾಧಿಕಾರವಿದೆಕೋ ಚಂಡ ಸಾಸಕರೆ ಇದೆಲ್ಲವನುಂಡು ಸಂತಸದಿಂದಿರಿ ಅಂತ ನೋಯ್ತಾವರೆ ಪಾಪ. ಉಲಿ ಪುಣ್ಯಕೋಟಿಯಾಗಿರದು ಇದಿಯೇ ಪಸ್ಟು ಕನೋ!’
‘ವಲಸೆ ಕ್ರಾಂತಿವೀರರು ಮಂತ್ರಿ ಪದವಿ ಅನ್ನೋ ಮಾಯಾಜಿಂಕೆ ಹಿಂದೆ ಓಡಿಬಂದೋರು. ಅದು ಸಿಕ್ಕದೇಲೆ ಬೇಜಾರಾಗಿ ‘ಜೆಡಿಎಸ್ಸಲ್ಲಿದ್ರೆ ಗೋಲಾಕಾರ, ಕಾಂಗ್ರೆಸ್ಸಿಗೆ ಬಂದ್ರೆ ಚಕ್ರಾಕಾರ, ಬಿಜೇಪಿಲೂ ಬಂತಾ ಸಂಚಕಾರ’ ಅಂತ ಗೋಳಿಕ್ಕತಾವ್ರೆ!’ ಅಂತು ಯಂಟಪ್ಪಣ್ಣ.
‘ಅದುಕ್ಕೆಲ್ಲಾ ಸಂಪುಟ ಸಂಕಟ ನಿವಾರಣಾ ಮಂತ್ರ ಹಾಕಬೇಕು ಕನ್ರೋ’ ಅಂದ್ರು ತುರೇಮಣೆ.
‘ಅದ್ಯಾವುದ್ಸಾ?’ ಆಶ್ಚರ್ಯದಲ್ಲಿ ಕೇಳಿದೆ.
‘ತ್ರಿಮೂರ್ತಿಗುಳನ್ನ ಭಕ್ತಿಯಿಂದ ನೆನಕಬೇಕು. ತೊಡೆ ತಟ್ಟಕೋದ್ರೆ ಊರುಭಂಗಾಯ್ತದೆ. ಮಂತ್ರವ ಸರಿಯಾಗಿ ಕೇಳಿಸ್ಕೊ ‘ನಮೋ ನಮೋ ನರೇಂದ್ರ ದಾಮೋದರ ಕಮಲಬಾಹುವೇ, ಜಂಬೂದ್ವೀಪ ಪಾಲಾ ಪಾಹಿಮಾಂ, ಅಮಿತ ಶಾರ್ದೂಲ ರೂಪ ಪಾಹಿಮಾಂ, ಜಗತ್ ಪ್ರಕಾಶ ನಡ್ಡ ಪ್ರಭೂ ಸರ್ವ ವಿಘ್ನ ಪರಿಹಾರಕಾ ಪದವಿ ಪ್ರದಾಯಕಾ ದೇಹಿ ದೇಹಿ’ ಅಂತ ಸಾವಿರದ ಒಂದು ಸಾರಿ ಜಪ ಮಾಡಿ, ಮಂತ್ರವ ತಾಮ್ರದ ತಗಡಲ್ಲಿ ಬರೆದು, ತಾತಿಮಣಿ ಮಾಡಿ ಗ್ವಾಮಾಳೆಗೆ ಕಟ್ಟಿಕ್ಯಂಡರೆ ಮಂತ್ರ ಶಕ್ತಿಯಿಂದ ಮಂತ್ರಿ ಸ್ಥಾನೋತ್ಪತ್ತಿಯಾಯ್ತದೆ, ರಾಜಾವುಲಿ ಸ್ಥಾನ ಭದ್ರಾಯ್ತದೆ ಅಂತ ನಮ್ಮ ಆಲಿಂಗನ ಮಠದ ಸ್ವಾಮಿಗೋಳು ಅಪ್ಪಣೆ ಕೊಡಿಸವ್ರೆ’ ಅಂದ್ರು.
‘ಮಂತ್ರ ಮಸ್ತಾಗದೆ ಸಾ. ಈಗ ನಾನು ಕಡದೋಗಿ ರಾಜಾವುಲಿಗೆ ಮಂತ್ರ ಯೇಳಿಕೊಟ್ಟು ಅವುರ ಧಾರ್ಮಿಕ ಕಾರ್ಯದರ್ಶಿಯಾಯ್ತಿನಿ’ ಅಂತ ತಾತಿಮಣಿಗೆ ತಗಡು ಹುಡುಕತೊಡಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.