ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಅವರಿಗೇ ಟಿಕೇಟಂತೆ...

Published 11 ಮಾರ್ಚ್ 2024, 23:42 IST
Last Updated 11 ಮಾರ್ಚ್ 2024, 23:42 IST
ಅಕ್ಷರ ಗಾತ್ರ

‘ಮಂಡ್ಯದ ಜನಕ್ಕೆ ರಾಜಕೀಯ ಸಲುವಲ್ಲ ಅಂತ ಯವಸಾಯ ಮಾಡಿಕ್ಯಂದು ಕಿರಿಗಂಚಿ-ಮರಿಗಂಚಿ, ನೆರವಿ ಬಾಡೂಟಕ್ಕೆ ರಾಗಿಮುದ್ದೆ ಉಂಡ್ಕಂದು, ಊರಬ್ಬ-ಮಾರಿಹಬ್ಬ, ಬಾಬಯ್ಯನ ಜಲ್ದಿ ಮಾಡಿಕ್ಯತಾ ಅಣ್ತಮ್ಮರಂಗಿದ್ದೋ’ ಯಂಟಪ್ಪಣ್ಣ ನೊಂದ್ಕತಿತ್ತು.

‘ಆ ಕಾಲ ಮುಗೀತು ಯಂಟಪ್ಪಣ್ಣ. ನಾಟಿ ಸ್ಟಾರ್, ಫಾರಂ ಸ್ಟಾರ್, ಹೈಬ್ರಿಡ್ ಸ್ಟಾರ್ ನಡುವೆ ಭಾರಿ ಟಿಕೇಟಿಂಗ್ ನಡೀತಾ ಅದೆ. ಇವರಲ್ಲಿ ಯಾರು ಮಂಡ್ಯದ ಸ್ಟಾರ್ ಆಯ್ತರೆ ಸಾ?’ ತುರೇಮಣೆಗೆ ಕೇಳಿದೆ.

‘ಯಾವ ಸ್ಟಾರು ತಕ್ಕಂದೇನು ಮಾಡಮು. ಗೆದ್ದೋರು ಇನ್ನೈದು ವರ್ಸ ಇಕ್ಕಡಿಕ್ಕೆ ತಲೆ ಹಾಕಿ ಮಂಗಕುಲ್ಲ. ಇವರನ್ನು ಹುಡೀಕ್ಕಂದು ಜನ ಬೆಂಗಳೂರಿಗೇ ಹೋಗಕ್ಕಾದದೇ? ಈ ಸಾರಿ ಮಂಡೇದ ಜನವೇ ಸ್ಟಾರ್ ಆಯ್ತರೆ ನೋಡ್ತಿರ‍್ರಿ’ ಅಂದ್ರು ತುರೇಮಣೆ.

‘ಪಕ್ಷಗಳು ‘ಮ್ಯಾಕ್ಸಿಮಂ ಸಪೋರ್ಟ್ ಪ್ರೈಸು ಬೇಕಾ? ನಿಮ್ಮ ಯೇಗ್ತೆಗೆ ತಕ್ಕ ಗರಿಷ್ಠ ಬೆಂಬಲ ಬೆಲೆ ಕೊಡ್ತೀವಿ. ಪಕ್ಷಾಂತರಿಗಳೆಲ್ಲಾ ಬಲ್ರಿ, ಬಲ್ರೀ’ ಅಂತ ಕೂಗು ಹಾಕ್ತಾವೆ. ಅದರದ್ದೇ ಗುಲ್ಲಾಗ್ಯದೆ. ಉಮ್ಮೇದಿನ ಎತ್ತುಗಳೆಲ್ಲಾ ಹಗ್ಗ-ಮೂಗುದಾರ ಕಿತ್ತಾಕಿ ರೆಡಿಯಾಗ್ಯವೆ’ ಅಂದ ಚಂದ್ರು.

‘ಅಲ್ಲ ಕಯಾ, ಮಂಡ್ಯದ ಸಕ್ಕರೆ ಕಾರ್ಖಾನೆ ಮುಚ್ಕೋಗ್ಯದೆ. ಕಬ್ಬು ಬೆಳೆಗಾರರ ಬಾಯಲ್ಲೂ ಸಕ್ಕರೆ ಇಲ್ಲ, ಬದುಕಲ್ಲೂ ಇಲ್ಲ. ಕೊಬ್ಬರಿ ಬೆಳೆದೋರಿಗೆ ಚಿಪ್ಪೇ ಗತಿಯಾಗ್ಯದೆ. ರೈತರ ಬದುಕು ಮೂರಾಬಟ್ಟೆಯಾಗ್ಯದೆ’ ಯಂಟಪ್ಪಣ್ಣ ಸಿಟ್ಟಾಯ್ತು.

‘ರೈತರಿಗೆ, ಜನಕ್ಕೇನಾದ್ರೇನು. ಕಾರ್ಯಕರ್ತರು ‘ಗೋ ಬ್ಯಾಕ್’ ಅಂದ್ಕಲಿ ಬುಡ್ಲಾ. ತಮ್ಮ ಕ್ಯಾಂಡಿಡೇಟ್ ಗೆಲ್ಲದು ಮುಖ್ಯ ಅಂತ ಪಕ್ಷಗಳು ಚಿಣ್ಣಿ-ದಾಂಡು ಹಿಡಕಂದು ನಿಂತವೆ. ಯಾರು ಗಿಲ್ಲಿ ಕ್ಯಾಚ್ ಹಿಡಿತರೋ ಅವರಿಗೇ ಟಿಕೇಟಂತೆ’ ಅಂದ್ರು ತುರೇಮಣೆ.

‘ಕರೆಕ್ಟಾಗೇಳಿದ್ರಿ ಸಾ, ಕಣ ರಾಜಕೀಯ ಅಂದ್ರೆ ಇದೇ. ತುಚೀಪ್, ತುದಾಂಡ್, ತುಬದ್ ರೆಡೀ’ ಅಂತಂದೆ. ಯಂಟಪ್ಪಣ್ಣ, ಚಂದ್ರು ಟಿಕೆಟ್ಟಾಟ ನೋಡ್ತಾ ಬೆಪ್ಪಾಗಿ ‘ರೆಡೀ’ ಅಂದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT