ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮಾರ್ಷಲ್ ಮದುವೆ!

Last Updated 5 ಮಾರ್ಚ್ 2021, 19:30 IST
ಅಕ್ಷರ ಗಾತ್ರ

‘ಒಂದ್ ಮಜಾ ಗೊತ್ತಾ? ನಿನ್ನೆ ಒಂದ್ ಮದುವೆಗೆ ಹೋಗಿದ್ದೆ’ ಅಂದ ತೆಪರೇಸಿ.

‘ಮದುವೆ ಸರಿ, ಅದ್ರಲ್ಲೇನು ಮಜಾ?’ ಗುಡ್ಡೆ ಕೊಕ್ಕೆ ಹಾಕಿದ.

‘ಮದುವೆ ಛತ್ರಕ್ಕೆ ಹೋಗ್ತಿದ್ದಂಗೆ ಅದ್ಯಾರೋ ಮಾರ್ಷಲ್ ಅಂತಪ, ಬಾಗಿಲಲ್ಲೇ ನಿಲ್ಲಿಸಿದ. ನಾವು ಗಂಡ-ಹೆಂಡ್ತಿ ಅಂದ್ರೂ ಕೇಳದೆ ದೂರ ದೂರ ನಿಂತ್ಕಳಿ, ಸ್ಯಾನಿಟೈಸರ್ ಹಾಕ್ಕಳಿ, ಮಾಸ್ಕ್ ಎಲ್ಲಿ ಅಂತ ಶುರು ಹಚ್ಕಂಡ. ಅದ್ಯಾವುದೋ ಸಿನಿಮಾದಾಗೆ ‘ಪೌಡ್ರು ಹಾಕ್ಕಳಿ, ತಲೆ ಬಾಚ್ಕಳಿ’ ಅಂತಿದ್ರಲ್ಲ ಆ ತರ...’

‘ಹೌದಾ? ಆಮೇಲೆ?’

‘ವಾಲಗ ಊದೋರಿಗೆ, ಪುರೋಹಿತರಿಗೆಲ್ಲ ಯಾಕ್ರೀ ಮಾಸ್ಕ್ ಹಾಕಿಲ್ಲ ಅಂತ ಆವಾಜ್ ಹಾಕ್ತಿದ್ದ. ನಾನು ‘ಅಲ್ಲ ಸ್ವಾಮಿ, ಮಾಸ್ಕ್ ಹಾಕ್ಕಂಡ್ರೆ ಅವರು ವಾಲಗ ಊದೋದ್ಹೆಂಗೆ, ಮಂತ್ರ ಹೇಳೋದ್ಹೆಂಗೆ’ ಅಂತ ಕೇಳಿದ್ರೆ ‘ಅದೆಲ್ಲ ನಂಗೊತ್ತಿಲ್ಲ, ಇದು ಗೌರ್ಮೆಂಟ್ ಆರ್ಡರು. ಇಲ್ಲಾಂದ್ರೆ ದಂಡ ಕಟ್ಟಿ’ ಅಂತ ರೋಫ್ ಹೊಡೀತಾನೆ’.

‘ಒಳ್ಳೆ ಗಿರಾಕಿ, ಆಮೇಲೆ?’

‘ಛತ್ರದ ಬಾಗಿಲಾಗೆ ನಿಂತ್ಕಂಡು, ಐನೂರು ಜನ ಒಳಗೆ ಬಂದಾತು ಮತ್ಯಾರೂ ಬರಂಗಿಲ್ಲ ಅಂತ ಕದ ಹಾಕಿಸಿದ. ತಾಳಿ ಕಟ್ಟೋ ಸಮಯಕ್ಕೆ ಬಂದು, ಗಂಡು– ಹೆಣ್ಣು ಸೇರಿದಂಗೆ ಅಲ್ಲಿದ್ದ ಎಲ್ಲರಿಗೂ ಮಾಸ್ಕ್ ಹಾಕಿಸಿದ. ಅಲ್ಲಿ ಸ್ವಲ್ಪದರಲ್ಲಿ ಒಂದು ಎಡವಟ್ಟಾಗೋದು ತಪ್ಪೋತು ಸದ್ಯ...’

ಹೌದಾ? ಏನು ಎಡವಟ್ಟು?’

‘ಎಲ್ರೂ ಮಾಸ್ಕ್ ಹಾಕಿದ್ರಿಂದ ಹೆಣ್ಣು ಯಾರು ಅಂತ ಗೊತ್ತಾಗದೆ, ಹೆಣ್ಣಿನ ಬದ್ಲು ಪಕ್ಕದಲ್ಲಿದ್ದ ಇನ್ಯಾವ್ದೋ ಹುಡ್ಗಿಗೆ ಗಂಡು ತಾಳಿ ಕಟ್ಟೋಕೆ ಹೋಗಿಬಿಟ್ಟಿದ್ದ!’

‘ಹೊಗ್ಗಾ ನಿನ್ನ, ಹೌದಾ? ಆಮೇಲೆ ಡೈನಿಂಗ್ ಹಾಲ್‍ಗೆ ಹೋಗಿ, ಊಟಕ್ಕೆ ಕೂತಿರೋ ಎಲ್ರೂ ಮಾಸ್ಕ್ ಹಾಕ್ಕಳಿ ಅಂದ್ನಾ?’

‘ಮಾಸ್ಕ್ ಹಾಕ್ಕಂಡ್ರೆ ಊಟ ಮಾಡೋದ್ಹೆಂಗೆ? ಸದ್ಯ ಅದೊಂದ್ ಹೇಳಲಿಲ್ಲಪ್ಪ’ ತೆಪರೇಸಿ ನಕ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT