ಶನಿವಾರ, ಆಗಸ್ಟ್ 13, 2022
25 °C

ಚುರುಮುರಿ: ರೆಬೆಲ್ ರಗಳೆ

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

‘ಸೊಸೆ ಮುನಿಸಿಕೊಂಡು ತವರಿಗೆ ಹೋಗುವಂತೆ ರೆಬೆಲ್ ಶಾಸಕರು ಸಿಟ್ಟು ಮಾಡಿಕೊಂಡು ರೆಸಾರ್ಟ್‌ಗೆ ಹೋಗುವುದು ನಿಲ್ಲಬೇಕು?’ ಸುಮಿ ಹೇಳಿದಳು.

‘ತವರು, ರೆಸಾರ್ಟ್ ಇರೋವರೆಗೂ ಈ ಸಮಸ್ಯೆ ಇದ್ದೇ ಇರುತ್ತದೆ, ಸಹಿಸಿಕೊಂಡು ಹೋಗಬೇಕಷ್ಟೇ. ಎಲೆಕ್ಷನ್ ಟೈಮ್‌ನಲ್ಲಿ ಜನನಾಯಕರು ಉದ್ರಿಕ್ತರಾಗಿರುತ್ತಾರೆ, ಅವರನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು’ ಅಂದ ಶಂಕ್ರಿ.

‘ರೆಬೆಲ್ ಖ್ಯಾತಿಯ ಮಹಾರಾಷ್ಟ್ರದ ಮಾದರಿ ಆಡಳಿತ ಇತರ ರಾಜ್ಯಗಳಿಗೆ ಪಠ್ಯವಾಗಬೇಕು. ರೆಬೆಲ್‍ಗಳ ನಿಯಂತ್ರಣ ಸರ್ಕಾರಗಳಿಗೆ ಎಚ್ಚರಿಕೆಯ ಪಾಠವಾಗಬೇಕು’.

‘ಪರರಾಜ್ಯದಿಂದ ಪಾಠ ಕಲಿಯುವಷ್ಟು ನಾವು ಹಿಂದುಳಿದಿಲ್ಲ. ನಮ್ಮ ಚರಿತ್ರೆಯ ಪುಟಗಳನ್ನು ತೆರೆದು ನೋಡಿದರೆ ಸಾಕಷ್ಟು ರೆಬೆಲ್ ರಾದ್ಧಾಂತಗಳು ಸಿಗುತ್ತವೆ’.

‘ಹೌದೂರೀ, ಹಳ್ಳಿ ಹಕ್ಕಿ ವಿಶ್ವಣ್ಣ ರಚಿಸಿರುವ ‘ಬಾಂಬೆ ಫೈಲ್ಸ್’ ಪುಸ್ತಕ ರಾಜಕಾರಣದ ದೊಡ್ಡ ಚರಿತ್ರೆಯಾಗಲಿದೆಯಂತೆ, ಈ ಪುಸ್ತಕವನ್ನು ಸರ್ಕಾರಿ ಸಿಲೆಬಸ್‍ಗೆ ಅಳವಡಿಸಿಕೊಂಡರೆ ಆಡಳಿ ತದ ಅಧ್ವಾನಗಳನ್ನು ನಿಯಂತ್ರಿಸಬಹುದೇನೋ’.

‘ಬಹುತಾರಾಗಣದ ಬಾಂಬೆ ಫೈಲ್ಸ್ ಶೀಘ್ರದಲ್ಲೇ ತೆರೆ ಕಾಣಲಿದೆಯಂತೆ, ಆಮೇಲೆ ಅದರ ಸಾಧಕಬಾಧಕಗಳನ್ನು ಅಧ್ಯಯನ ಮಾಡಿ ಅಳವಡಿಸಿಕೊಳ್ಳಬಹುದು’.

‘ಸಿಎಂ ಸರ್ವಾಧಿಕಾರಿಯಾದಾಗ, ಶಾಸಕರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ರೆಬೆಲ್ ರೋಗ ಕಾಣಿಸಿಕೊಳ್ಳುವುದಂತೆ. ಅತೃಪ್ತ ಶಾಸಕರಿಗೆ ಯೋಗ್ಯ ಅಧಿಕಾರ, ಅನುದಾನ ನೀಡುತ್ತಿದ್ದರೆ ಅವರೇಕೆ ರೆಬೆಲ್‌ಗಳಾಗುತ್ತಾರೆ? ರೇಷನ್ ಕೊರತೆಯಾದಾಗ ಆಪರೇಷನ್‍ಗೆ ಮನಸ್ಸು ಮಾಡುತ್ತಾರೆ ಎಂಬೆಲ್ಲಾ ವಿಚಾರಗಳು ಬಾಂಬೆ ಫೈಲ್ಸ್‌ನಲ್ಲಿ ಇರಬಹುದು’.

‘ಹೌದು, ಶಾಸಕರ ಬೇಕುಬೇಡಗಳನ್ನು ಅರ್ಥ ಮಾಡಿಕೊಂಡು ಅವರ ಆರೈಕೆ, ಪೂರೈಕೆಗಳನ್ನು ಪೂರೈಸಿಕೊಂಡಿದ್ದರೆ ಅವರೇಕೆ ಹೊಸಿಲು ದಾಟಿ ರೆಸಾರ್ಟ್ ದಾರಿ ಹಿಡಿಯುತ್ತಾರೆ?’

‘ನಿಜ, ಪ್ರಜೆಗಳ ಕ್ಷೇಮ ಸೈಡಿಗಿರಲಿ, ಹೇಗೋ ಸರ್ಕಾರ ಕ್ಷೇಮವಾಗಿದ್ದರೆ ಸಾಕು...’ ಎಂದಳು ಸುಮಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.