ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಬಂದ್ ಅಲ್ಲ ಪ್ರತಿಭಟನೆ!

Published 30 ಸೆಪ್ಟೆಂಬರ್ 2023, 0:19 IST
Last Updated 30 ಸೆಪ್ಟೆಂಬರ್ 2023, 0:19 IST
ಅಕ್ಷರ ಗಾತ್ರ

‘ಪುಟ್ಟೂ, ಸ್ಕೂಲಿಗೆ ರಜೆ ಅಂತ ಮೊಬೈಲಲ್ಲೇ ಮುಳುಗಿರಬೇಡ. ಅದನ್ನ ತೆಗೆದಿಟ್ಟು ಟೆಕ್ಸ್ಟ್ ಬುಕ್ ಓದಿಕೋ. ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆ ಬರೆಯೋನು’ ಗದರಿಸಿದರು ಮಮ್ಮಿ.

ಕುಮಾರ ಹೇಳಿದ- ‘ಮೊಬೈಲಲ್ಲಿ ವಿಡಿಯೊ ಗೇಮ್ ನೋಡ್ತಿಲ್ಲಮ್ಮಾ, ಕಾವೇರಿ ಕರ್ನಾಟಕ ಬಂದ್ ನ್ಯೂಸ್ ಬರ್ತಿದೆ... ಮೊನ್ನೆ ನಡೆದ ಬಂದ್‌ಗೆ ನಮ್ಗೆ ಯಾಕೆ ರಜೆ ಕೊಡಲಿಲ್ಲ?’

‘ಅದು ವಿರೋಧ ಪಕ್ಷಗಳು ಬೆಂಬಲಿಸಿದ ಬಂದ್ ಕಣೋ’.

‘ಮತ್ತೆ, ಇವತ್ತಿನ ಬಂದ್ ನಡೆಸ್ತಿರೋರು?’

‘ಕನ್ನಡ ಸಂಘಟನೆಗಳ ಒಕ್ಕೂಟ. ಇದಕ್ಕೆ ಸರ್ಕಾರದ ಪರೋಕ್ಷ ಬೆಂಬಲವಿದೆ. ನಮ್ಮ ಆಫೀಸಿಗೆ ರಜೆ ಇಲ್ಲ. ನಾನು ಹೋಗ್ಬೇಕು’.

‘ನಮ್ಮ‌ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಮಂತ್ರಿ ಒಬ್ಬೊಬ್ರು ಒಂದೊಂದು ರೀತಿಯ ಹೇಳಿಕೆ ಕೊಡ್ತಿದ್ದಾರೆ!’

‘ನಮ್ಮದು ಪ್ರಜಾಪ್ರಭುತ್ವವಲ್ವೇ? ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ಬಂದ್ ಮಾಡೋಹಾಗಿಲ್ಲ, ಪ್ರತಿಭಟನೆ ಮಾಡಬೌದಂತೆ. ನಾಗರಿಕರಿಗೆ ರಕ್ಷಣೆ ಕೊಡ್ತೀವಿ ಅಂದಿದಾರೆ ಡಿಕೆಶಿ’.

‘ಮಂಡ್ಯದಲ್ಲಿ ರೈತರು ಪಟ್ಟಾಪಟ್ಟಿ ಚೆಡ್ಡಿ ಧರಿಸಿ ಅರೆಬೆತ್ತಲೆ ಮೆರವಣಿಗೆ ಮಾಡಿದರು. ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗೆ ಮಿನರಲ್ ವಾಟರ್ ಸುರಿದ್ರು. ಮೈಸೂರಲ್ಲಿ ಅಜ್ಜಿ ಉರುಳುಸೇವೆ ಸಲ್ಲಿಸಿದರು. ಆದ್ರೂ ಹೆಚ್ಚಿನ ನೀರು ತಮಿಳುನಾಡಿಗೆ ಹೋಗೋದು ಮಾತ್ರ ನಿಂತಿಲ್ಲ’. ಅಷ್ಟರಲ್ಲಿ ಪಪ್ಪನ ಆಗಮನ.

‘ರೀ, ನಂಗೆ ಆಫೀಸಿಗೆ ಹೊತ್ತಾಯಿತು. ಆಟೊ, ಬಸ್ ಇಲ್ಲ. ಆಫೀಸಿಗೆ ಡ್ರಾಪ್ ಮಾಡಿ, ಬನ್ನಿ’.

‘ನಾನು ಬಂದ್‌ಗೆ ಹೋಗ್ಬೇಕು. ನಮ್ಮ ಲೀಡರ್ ಮಾತು ಮೀರೋಹಾಗಿಲ್ಲ’.

‘ಮಂಗಳವಾರದ ಬಂದ್‌ಗೆ ಹೋಗಿದ್ದಿರಲ್ರೀ!’

‘ಅದಕ್ಕೆ ಕರೆದೊಯ್ದಿದ್ದೂ ನಮ್ಮ ಲೀಡರ್ರೇ. ನಾವು ಪಕ್ಷಾತೀತ ಬಂದ್ ಬೆಂಬಲಿಗರು. ಈಗಿನ ಬಂದ್ ಬೆಂಬಲಿಸಿದರೆ ಹೆಚ್ಚು ಅನುಕೂಲ ಅಂತಾರೆ’.

‘ಕೈ ಸರ್ಕಾರ ಬಂದಾಗಲೆಲ್ಲ ಬರಗಾಲ, ಕಾವೇರಿ ಗದ್ದಲ ಶುರುವಾಗುತ್ತೇಂತಾರೆ. ಕಮಲದೋರು ಹೇಗೆ ನಿಭಾಯಿಸುತ್ತಿದ್ರೋ?’

‘ರಾಜ್ಯದಾದ್ಯಂತ ಹೋಮ ಹವನ ನಡೆಸಿ, ಪರ್ಜನ್ಯ ಜಪ ಏರ್ಪಡಿಸಿ ಮಳೆ ತರಿಸುತ್ತಿದ್ರು’.

ತಾಯಿ ಮಗ ಸುಸ್ತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT