ಬುಧವಾರ, ಮೇ 18, 2022
28 °C

ಚುರುಮುರಿ: ಕೆಜಿಎಫ್– 3

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಕಲ್ಲು ಸಿಕ್ಕರೆ ಕೊಳ್ಳಿರೋ, ನೀವೆಲ್ಲರೂ’ ಅಂತ ತುರೇಮಣೆ ಕಲ್ಲು ಗುಡ್ಡೆ ಹಾಕ್ತಾ ಕುಂತುದ್ದರು.

‘ಅಯ್ಯೋ ಬೊಡ್ಡಿಹೈದ್ನೆ, ಈಗ ಹುಬ್ಳಿ ಕಡೆ ಕಲ್ಲಿಗೂ ಡಿಮ್ಯಾಂಡಂತೆ! ಕಂಡ್ರೆ ಪೋಲೀಸ್ನೋರು ಒಳಾಕ್ತರೆ’ ಅಂತು ಯಂಟಪ್ಪಣ್ಣ.

‘ಅದು ಬುಡಿ, ರಾಕಿ ಭಾಯ್ ಕೆಜಿಎಫ್‌- 2 ಬಾಕ್ಸ್ ಆಫೀಸ್‌ ಚಿಂದಿ ಮಾಡ್ಯದಂತೆ’ ಅಂತಂದೆ.

‘ಪ್ರೊಡ್ಯುಜರು ನಮ್ಮೂರೋನು ಕಣಿರ್ಲಾ. ಮಂಡ್ಯ ಈಸ್ ಇಂಡಿಯಾ! ಕೆಜಿಎಫ್‌- 3 ಸಿನಿಮಾಕ್ಕೆ ಇಂತವೆಷ್ಟು ಚಾಪ್ಟರ್ ಕತೆ ಬೇಕೋ ಎಲ್ಲಾ ಇಲ್ಲೇ ಸಿಕ್ತವೆ ಬಯ್ಯ ಅಂತ ಹೇಳಬಕು’ ಅಂದರು ತುರೇಮಣೆ.

‘ಮಂಡೇದಲ್ಲಿ ಕತೆಗಳೇನು ನಿಮ್ಮನೆ ಕೊಟಾರದಲ್ಲವಾ ಸಾ?’ ನಾನು ರೇಗಿಸಿದೆ.

‘ಕಮಲದ್ದು- ಕೈದು 150, ಕುಮಾರಣ್ಣಂದು 123, ಮೂರೂ ಪಕ್ಸದ 423 ಕತೆ ಸುರುವಾಗ್ಯದೆ’ ಅಂತು ಯಂಟಪ್ಪಣ್ಣ.

‘ಅಣೈ, ಕರ್ನಾಟಕ ಭ್ರಷ್ಟಾಚಾರದ ಹೆಡ್ಡಾಪೀಸ್ ಆಗ್ಯದೆ. ಲೈಂಗಿಕ ದೌರ್ಜನ್ಯ, ಅಕ್ರಮ ಗಣಿಗಾರಿಕೆ, ಆತ್ಮಹತ್ಯೆ, ರಸ್ತೆ ಕೊಲ್ಲಾಟ, ಧರ್ಮ ದಂಗಲ್, ಟೆಂಡರ್ ಬ್ಲಂಡರ್, ಕೊರೋನಾ ಕರಾಮತ್, ಫೈಲು ವಿಲೇವಾರಿ, ಆರೋಗ್ಯ ಕ್ಷೇತ್ರ, ರಾಜಕಾಲುವೆ ಒತ್ತುವರಿ, ಆಸ್ಪತ್ರೆ, ಫ್ಲೆಕ್ಸ್ ಪಿಡುಗು ಒಂದಾ ಎರಡಾ. ಎಲ್ಲಾ ಗ್ವಾಮಾಳೆಗಂಟಾ ಬಂದವೆ’ ವಿವರಣೆ ಕೊಟ್ಟರು ತುರೇಮಣೆ.

‘ಇಂತವು ಎಲ್ಲಾ ಪಕ್ಸದ ಸರ್ಕಾರ ಇದ್ದಾಗಲೂ ನಡೆದವೆ. ನಾಕು ಹಗರಣ ಆಚೆಗೆ ಬಂದ್ರೆ, ನೂರಾರು ಹಂಗೇ ಮುಚ್ಚೋಯ್ತವೆ’ ಅಂತ ತಾಳ ಹಾಕಿದೆ.

‘ಈಗ ಸರ್ಕಾರಿ ಕೆಲಸ ಅಂದ್ರೆ ದೇವರ ಕೆಲಸ ಕಪ್ಪಾ. ತಟ್ಟೆಕಾಸು ಹಾಕಿದ್ರೇ ಆಶೀರ್ವಾದ. ಕೆಜಿಎಫ್‌ ಡೈರೆಕ್ಟರಿಗೆ ಇಂತಾ ಕತೆಗಳು ಸಿಕ್ರೆ ಸಿನೆಮಾ ತಗೀದೆ ಬುಟ್ಟಾನಾ’ ಅವರ ವಿಚಾರಧಾರೆ ಹರಿಸಿದರು.

‘ಕರ್ನಾಟಕದ ಕಿತಾಪತಿ ಹ್ಯಂಗೆ ಕೆಜಿಎಫ್‌- 3 ಆದದು ಸಾ?’ ಅಂತಂದೆ.

‘ಇದೂ ಕೆಜಿಎಫ್‌ ಅಲ್ಲವೇನ್ಲಾ, ‘ಕರ್ನಾಟಕ ಗೋಲ್‍ಮಾಲ್ ಫೈಲ್ಸ್- ದಿ ಪೀಕ್’ ಅಂತ ನೂರು ಸಿನೆಮಾ ಮಾಡಬೌದು ಅಷ್ಟು ಕತೆ ಇಲ್ಲ್ಯವೆ!’ ಅಂದರು ತುರೇಮಣೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.