ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ ರಾಜಕೀಯ ವಿಡಂಬನೆ: ಖರ್ಗೆ ಗೆಲ್ಗೆ

Last Updated 5 ಅಕ್ಟೋಬರ್ 2022, 18:50 IST
ಅಕ್ಷರ ಗಾತ್ರ

‘ಬಳ್ಳಾರಿ ಯಾತ್ರೆ ಮಾಡಿ ರಾಜ್ಯದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್, ಈಗ ಭಾರತ್‌ ಜೋಡೊ ಯಾತ್ರೆ ಮಾಡಿ ದೇಶದ ಆಡಳಿತ ಪಡೆಯಬಹುದಾ?’ ಸುಮಿ ಕೇಳಿದಳು.

‘ರಾಹುಲ್ ಗಾಂಧಿ ಬಂದು ಹೋಗುವ ಕಡೆ ಕಮಲ ಅರಳುತ್ತದೆ ಅಂತ ಬಿಜೆಪಿಯವರು ಕಾಲೆಳೆಯುತ್ತಿದ್ದಾರೆ’ ಅಂದ ಶಂಕ್ರಿ.

‘ಯಾತ್ರೆಯಿಂದ ಕಾಂಗ್ರೆಸ್ಸಿನ ಎಲೆಕ್ಷನ್ ಮೈಲೇಜ್ ಜಾಸ್ತಿಯಾಗುತ್ತಿದೆ ಎಂಬ ಭಯವಂತೆ ಬಿಜೆಪಿಯವರಿಗೆ’.

‘ಬಿಜೆಪಿಯವರು ಜಾಸ್ತಿ ಕಿರಿಕ್ ಮಾಡಿದ್ರೆ ಪಾದಯಾತ್ರಿಗಳಿಗೆ ಪೇಸಿಎಂ ಟೀ-ಷರ್ಟ್ ವಿತರಿಸಿಬಿಡ್ತೀವಿ ಅಂತ ಕಾಂಗ್ರೆಸ್‍ನವರು ಹೆದರಿಸಿದ್ದಾರೆ’.

‘ಮಳೆಯಲ್ಲೇ ಭಾಷಣ ಮಾಡಿದ ರಾಹುಲ್ ಗಾಂಧಿಗೆ ಶೀತ, ನೆಗಡಿ ಆಗೋದಿಲ್ವಾ?’

‘ಇಲ್ಲವಂತೆ. ನಾವು ಮಳೆಯಲ್ಲಿ ನೆನೆದರೆ ಬಿಜೆಪಿಯವರು ಒದ್ದೆಯಾಗುತ್ತಾರೆ, ನಾವು ಬಿಸಿಲಲ್ಲಿ ಬೆಂದರೆ ಅವರು ಬೆವರುತ್ತಾರೆ, ನಮಗೆ ಚಳಿಯಾದರೆ ಅವರಿಗೆ ನಡುಕ ಶುರುವಾಗುತ್ತದೆ ಎಂದು ರಾಹುಲ್‍ಜೀ ಪಾದಯಾತ್ರಿಗಳಿಗೆ ಆರೋಗ್ಯ ಸಲಹೆ ಕೊಟ್ಟಿರಬಹುದು’.

‘ಭಾರತ್ ಜೋಡೊಗೂ ಮೊದಲು ನಿಮ್ಮ ಪಕ್ಷದ ನಾಯಕರನ್ನು ಜೋಡಿಸಿ ಅಂತ ಬಿಜೆಪಿ ನಾಯಕರು ಕೆಣಕುತ್ತಿದ್ದಾರೆ’.

‘ಆಡಿಕೊಳ್ಳುವವರ ಮುಂದೆ ಜಾರಿ ಬೀಳಬಾರದು, ಕೂಡಿ ಬಾಳಿದರೆ ಸ್ವರ್ಗ ಸುಖ, ಎರಡು ಕೈ ಸೇರಿದರೆ ಚಪ್ಪಾಳೆ, ಕೈ ಕೊಟ್ಟರೆ ತಿಪ್ಪಾಳೆ ಎಂದು ರಾಹುಲ್‍ಜೀ ಕಿವಿಮಾತು ಹೇಳಿದ್ದಾರೆ. ಬಣ ವ್ಯಾಜ್ಯ ಬಗೆಹರಿಸಿ, ಪಕ್ಷವನ್ನು ಅಧಿಕಾರಪೀಠಕ್ಕೆ ಏರಿಸಲು ಮುನಿಸ್ತಾಪದ ಎರಡೂ ಕೈ ಹಿಡಿದು ನಗಾರಿ ಬಾರಿಸಿ ಬಾಂಧವ್ಯದ ಬೆಸುಗೆ ಹಾಕಿದ್ದಾರೆ’.

‘ಅಧ್ಯಕ್ಷ ಪದವಿಗಾಗಿ ಮೇಲ್ಮನೆಯ ವಿರೋಧ ಪಕ್ಷದ ನಾಯಕ ಸ್ಥಾನ ತ್ಯಜಿಸಿರುವ ಖರ್ಗೆಗೆ ಪ್ರಧಾನಿ ಪಟ್ಟದ ಯೋಗ ಇದೆಯೇನೋ...’

‘ಇರಬಹುದು. ಮತದಾರರು ‘ಕೈ’ ಹಿಡಿದರೆ, ಪಕ್ಷದ ಸರದಾರರು ಕೈ-ಕೈ ಹಿಡಿದರೆ, ಕಾಂಗ್ರೆಸ್ ದೇವರು ಕಣ್ತೆರೆದರೆ ಮತ್ತೊಬ್ಬ ಕನ್ನಡಿಗನಿಗೆ ಕೆಂಪುಕೋಟೆ ಮೇಲೆ ಬಾವುಟ ಹಾರಿಸುವ ಭಾಗ್ಯ ಬರಬಹುದು... ಖರ್ಗೆ ಗೆಲ್ಗೆ...’ ಎಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT