ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಬಿಸಿ ಬಿಸಿ ಸುದ್ದಿ !

Last Updated 23 ಫೆಬ್ರುವರಿ 2023, 22:00 IST
ಅಕ್ಷರ ಗಾತ್ರ

‘ಈ ಸಲದ ಬ್ಯಾಸಗಿ ಟೆಂಪರೇಚರು ಹೋದ ವರ್ಷಕ್ಕಿಂತ ಜಾಸ್ತಿ ಆಗ್ತತಂತಪ... ಯಾಕೆ?’ ಹರಟೆಕಟ್ಟೇಲಿ ದುಬ್ಬೀರ ನ್ಯೂಸ್ ಪೇಪರಲ್ಲಿ ಗಾಳಿ ಹೊಡೆದುಕೊಳ್ಳುತ್ತ ಕೇಳಿದ.

‘ಅಲೆ ಇವ್ನ, ಕಾರಣ ಮ್ಯಾಗೇ ಐತಲ್ಲೋ... ಎಲೆಕ್ಷನ್ ವರ್ಷಲ್ಲೇನು ಇದು? ಮತ್ತೆ ಟೆಂಪರೇಚರ್ ಜಾಸ್ತಿ ಆಗ್ಲೇಬೇಕು’ ಗುಡ್ಡೆ ನಕ್ಕ.

‘ನಿನ್ತೆಲಿ, ಯಾವ್ಯಾವುದನ್ನೋ ಎಲ್ಲೆಲ್ಲಿಗೋ ಜೋಡಿಸ್ತಿಯಲ್ಲಲೆ, ಅದ್ಕೂ ಇದ್ಕೂ ಏನ್ ಸಂಬಂಧ?’ ದುಬ್ಬೀರನಿಗೆ ಕೋಪ.

‘ಸಂಬಂಧ ಐತಪಾ ಶಾಣ್ಯಾ, ಈಗ ರಾಜಕಾರಣಿಗಳು ಎಲೆಕ್ಷನ್ ಪ್ರಚಾರಕ್ಕೆ ರೋಡ್ ಷೋ ನಡೆಸಿ ದೂಳೆಬ್ಬಿಸ್ತಾರೆ, ಮೈಕ್ ಹಚ್ಚಿ ಗದ್ಲ ಮಾಡ್ತಾರೆ, ಒಬ್ರಿಗೊಬ್ರು ಬೈದಾಡ್ತಾರೆ, ಸವಾಲ್ ಹಾಕ್ತಾರೆ, ಹೊಡೆದಾಕಿ ಅಂತಾರೆ... ಇದೆಲ್ಲ ಕೇಳಿ ಕೇಳಿ ಜನರ ಬಿ.ಪಿ. ಏರಲ್ಲೇನು? ತೆಲಿ ಬಿಸಿಯಾಗಲ್ಲೇನು? ಮತ್ತೆ ಟೆಂಪರೇಚರ್ ಏರೇ ಏರ್ತತಿ’ ಗುಡ್ಡೆ ವಾದಿಸಿದ.

‘ನೀ ಹೇಳೋದ್ರಲ್ಲೂ ಪಾಯಿಂಟ್ ಐತಿ, ಅದರ ಜತಿಗೆ ಮಕ್ಕಳ ಪರೀಕ್ಷೆ ಬೇರೆ ಬಂದಾವು, ಅವರಿಗೂ ತೆಲಿ ಬಿಸಿ, ನಾವು ಮನ್ಯಾಗೆ ಟಿ.ವಿ ಹಚ್ಚಂಗಿಲ್ಲ, ಪಿಟಿಕ್ಕನ್ನಂಗಿಲ್ಲ, ನಮಗೂ ತೆಲಿ ಬಿಸಿ’ ತೆಪರೇಸಿ ತಲೆ ಕೊಡವಿದ.

‘ಅಷ್ಟೇ ಅಲ್ಲ, ಈ ಹೆಂಡ್ತೀರ ಕಿಟಿಕಿಟಿ ಬೇರೆ. ಹಬ್ಬ ಹುಣಿವಿ ಬಂದಾವು, ಸೀರಿ ತರ್‍ರಿ, ಮಕ್ಕಳಿಗೆ ಬಟ್ಟಿ ತರ್‍ರಿ ಅಂತ ಶುರು. ನಂಗಂತೂ ಮೈಯಾಗೆ ಬೆಂಕಿ ಆಗ್ತತಿ ನೋಡ್ರಲೆ’ ಕೊಟ್ರೇಶಿ ಕಿಡಿಕಿಡಿಯಾದ.

‘ಶಾಂತಿ ಶಾಂತಿ, ಅಟಾಕಂದು ಟೆಂಪರೇಚರ್ ಏರಿಸ್ಕಾಬ್ಯಾಡಲೆ ಕೊಟ್ರ’ ಎನ್ನುತ್ತ ಹರಟೆಕಟ್ಟೆಗೆ ಬಂದ ಪರ್ಮೇಶಿ ‘ಈಗಿನ್ನೂ ಮನಿಮನಿಗೆ ಸೀರಿ, ಸ್ವೀಟ್ ಬಾಕ್ಸು ಕೊಟ್ಟು ಬಂದೇನಿ. ನಿಮ್ಮನಿಗೂ ಹೋಗಿದ್ದೆ, ನಮ್ ರಾಜಾಹುಲಿ ಬರ್ತ್‌ಡೇ ಗಿಫ್ಟು...’ ಎಂದ.

‘ಹೌದಾ? ಛಲೋ ಆತಲ್ಲಲೆ, ಅದ್ರಿಂದ ಹೆಂಡ್ತೀರ ಟೆಂಪರೇಚರೇನೋ ಇಳೀತು, ಮತ್ತೆ ನಮ್ದು?’ ಗುಡ್ಡೆ ಕೇಳಿದ.

‘ರಾತ್ರಿ ಸಿಗ್ರಲೆ, ನಿಮ್ ಟೆಂಪರೇಚರ್‌ನೂ ಇಳಿಸೋಣಂತೆ...’ ಪರ್ಮೇಶಿ ಕಣ್ಣು ಮಿಟುಕಿಸಿದ. ಆ ಮಾತಿಗೆ ಅಲ್ಲೇ ಎಲ್ಲರ ಟೆಂಪರೇಚರು ಅರ್ಧ ಕಡಿಮೆಯಾಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT