ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಸಮ್ಮರ್ ಕ್ಯಾಂಪ್

Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

‘ಲೇಯ್, ರಜಾದಲ್ಲಿ ನಮ್ ಹೈಕ್ಳೆಲ್ಲಾ ಮೊಬೈಲ್, ಸಿನಿಮಾ ನೋಡಿ ಆಳಾಗೋಯ್ತವೆ. ಅದಕ್ಕೇ ಒಂದು ಸಮ್ಮರ್ ಕ್ಯಾಂಪ್ ಮಾಡಣ ಅಂದ್ಕಂಡಿವ್ನಿ’ ಎಂದ ಗುದ್ಲಿಂಗ.

‘ಓ ಅಂಗಾ? ಏನೇನು ಯೋಳ್ಕೊಡ್ತೀಯ? ಈ ಜಿಮ್ಮು, ಕರಾಟೆ ಎಲ್ಲಾ ಇರ್ತದಾ?’ ಕೇಳಿದ ಮಾಲಿಂಗ.

‘ಲೇಯ್, ಅವೆಲ್ಲ ಯಾವನಿಗ್ಲಾ ಬೇಕು? ಬೋರೆಲ್ಲ ತಳ ಹತ್ತಿ ಉಪ್ಪಿಡಿದು ಕೂತವೆ. ಹಳೇ ಬಾವಿ ಕೆರೆದು ನೀರ್ ಎತ್ತಕ್ಕೆ ರಾಟೆ ಎಳೆಯೋದು ಯೇಳ್ಕೊಡ್ಬೇಕು’ ಎಂದ ಕಲ್ಲೇಶಿ.

‘ಊ ಕಣ್ಲಾ, ಈ ಡಾನ್ಸು, ಮ್ಯೂಸಿಕ್ಕು, ಕ್ರಾಫ್ಟು ಎಲ್ಲಾ ಯೋಳ್ಕಡೋದು ಬಿಟ್ಟು ಮಕ್ಕಳಿಗೆ ರಾಜಕೀಯ ಪಟ್ಟುಗಳನ್ನ ಯೇಳ್ಕೊಡ್ಬೇಕು. ಭಾಷಣ,  ವಿತಂಡವಾದ ಮಾಡಾದು, ಎಲೆಕ್ಷನ್‌ಗೆ ಬಂಡೆದ್ದು ನಿಂತ್ಕೊಳೋದು, ಟಿ.ವಿ., ಪೇಪರ್‍ನೋರ್‌ ಮುಂದೆ ಹೇಳಿಕೆ ಕೊಡೋದು, ಕೊಟ್ಟಿದ್ದನ್ನ ತಿರುಚವ್ರೆ ಅಂತ ಬೊಮ್ಮಿಡಿ ಹೊಡೆಯೋದು ಇಂತದ್ದೆಲ್ಲಾ ಯೇಳ್ಕೊಡೋಣ ಅಂದ್ಕಂಡಿದೀನಿ’.

‘ಸೂಪರ್ ಐಡಿಯಾ ಕಣ್ಲಾ. ಅಂಗೇ ಕಾಲೆಳೆಯೋ ಕಬಡ್ಡಿ ಆಟ, ಕೈ ಕೈ ಮಿಲಾಯಿಸೋಕೆ ಕುಸ್ತಿ ಇಂತ ಸ್ಪೋರ್ಟ್ಸ್‌ ಯೇಳ್ಕೊಡ್ಬೇಕು’.

‘ಜೊತೆಗೆ ಅಣಕು ಶಾಸನಸಭೆ ಮಾಡಿ ಹೈಕ್ಳಿಗೆ ಆರೋಪ, ಪ್ರತ್ಯಾರೋಪ ಮಾಡೋ ಅಸ್ತ್ರಗಳು, ಬೈದಾಡೋದನ್ನೂ ಹೇಳ್ಕೊಡ್ಬೇಕು’ ಎಂದ ಚಿಕ್ಕೀರ.

‘ಅಂಗೇ ಸ್ಪೋಕನ್ ಕನ್ನಡ ಇನ್ ಬ್ರೋಕನ್ ಇಂಗ್ಲಿಷ್ ಹೇಳ್ಕೊಡ್ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ ಹೈಕ್ಳು ಲೆಕ್ಕದಾಗೆ ಶಾನೆ ವೀಕು, ಅವಕ್ಕೆ ಮೊದ್ಲು ಪರ್ಸಂಟೇಜ್ ಲೆಕ್ಕ ಯೋಳ್ಕೊಡ್ಬೇಕು...’

‘ಅದೆಲ್ಲ ಸರಿ, ಈ ಟ್ರಿಪ್ಪು ಅಂತ ಕರ್ಕೊಂಡ್ ಓಯ್ತಾರಲ್ಲ, ಹೈಕ್ಳನ್ನ ಎಲ್ಲಿಗೆ ಕರ್ಕಂಡೋಗೋದು?’

‘ಬಯಲುಸೀಮೆ ಗೋಮಾಳ, ಕಿತ್ತೂರ್ ಸೀಮೆ ಕೆರೆ, ಮಲ್ನಾಡಿನ ಸೇತುವೆಗಳನ್ನ ತೋರಿಸಿ, ಎಚ್ಚಮನಾಯಕನಂಗೆ ‘ನೋಡುಬಾ ಮಗನೆ ನೋಡುಬಾ, ಎಂಗ್ ನುಂಗವ್ರೆ ನೋಡಿ ಕಲಿಬಾ’ ಅಂತ ತೋರುಸ್ಬೇಕು’.

‘ಊ ಕಣ್ರಲಾ, ನಮ್ ಹೈಕ್ಳನ್ನ ಇಂಗ್ ತಯಾರಿ ಮಾಡ್ಬಿಟ್ರೆ ಮೂಗುನೇಣಿಕ್ಕದ ರಾಜಕೀಯ ಹೋರಿಗಳೆಲ್ಲಾ ತಮ್ಮ ಉಂಡಾಡಿ ಕರು, ಪೋರಿಗಳಿಗೆ ಪಟ್ಟ ಕಟ್ಟೋದು ಅರ್ಧ ತಪ್ತದೆ’ ಎಂದ ಪರ್ಮೇಶಿ. ಎಲ್ಲಾ ಹೌದೌದು ಎಂದು ತಲೆಯಾಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT