ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಸ್ಥಾನ‘ಮಾನ’

Published 9 ಜೂನ್ 2023, 0:15 IST
Last Updated 9 ಜೂನ್ 2023, 0:15 IST
ಅಕ್ಷರ ಗಾತ್ರ

‘ಹಲೋ... ಮಿನಿಸ್ಟ್ರು ಸಾಹೇಬ್ರೆ, ನಾನು ತೆಪರೇಸಿ. ಏನ್ಸಾ, ಮಿನಿಸ್ಟ್ರಾದ ಮೇಲೆ ನಮ್ಮನ್ನ ಮರೆತೇಬಿಟ್ರಿ?’

‘ಇಲ್ಲ ಕಣಯ್ಯ ಬಿಜಿ ಇದ್ದೆ, ಏನ್ಸಮಾಚಾರ?’

‘ಸರ್ಕಾರದಲ್ಲಿ ನಮ್ಗೂ ಏನಾದ್ರು ಸ್ಥಾನಮಾನ ಕೊಡ್ಸಿ ಸಾ. ನಿಮ್ಮನ್ನು ಗೆಲ್ಸಾಕೆ ಎಷ್ಟು ಕಷ್ಟಪಟ್ಟಿದೀವಿ... ನಿಮಗೇ ಗೊತ್ತಲ್ಲ’.

‘ಗೊತ್ತು ಕಣಯ್ಯ, ಏನು ಸ್ಥಾನಮಾನ ಬೇಕು ನಿಂಗೆ?’

‘ಒಂದು ಎಮ್ಮೆಲ್ಸಿ ಮಾಡ್ಸಿಬಿಡಿ ಸಾ, ಸಾಯಾತಂಕ ನಿಮ್ ಹೆಸರೇಳ್ಕಂಡು ಇರ್ತೀನಿ’ ತೆಪರೇಸಿ ತೊದಲಿದ.

‘ಏಯ್, ಎಮ್ಮೆಲ್ಸಿ ಅಂದ್ರೆ ಏನಂತ ತಿಳಿದಿದಿ? ಬೆಳಬೆಳಿಗ್ಗೆ ಆಗ್ಲೇ ತಗಂಡಿದೀಯಾ?’ ಸಚಿವರಿಗೆ ಸಿಟ್ಟು ಬಂತು.

‘ರಾತ್ರಿದು ಸ್ವಲ್ಪ ಉಳಿದಿತ್ತು ಸಾ... ಅಷ್ಟೆ, ಜಾಸ್ತಿ ಏನಿಲ್ಲ’.

‘ಅಲ್ಲ ಮೇಲ್ಮನೆ ಅಂದ್ರೆ ಏನ್ ತಮಾಷೆನಾ. ಕೇಳಾಕಾದ್ರು ಮರ್ವಾದಿ ಬೇಡ್ವಾ?’

‘ಗೊತ್ತು ಸಾ, ಅದು ಮೇಲ್ಮನೆ ಅಲ್ಲ, ದುಡ್ಡಿನ ಮನೆ ಅಂತ. ಆದ್ರೆ ನಮ್ಮತ್ರ ದುಡ್ಡು ಎಲ್ಲೈತೆ?’

‘ಅದೆಲ್ಲ ಆಗಲ್ಲ, ಯಾವುದಾದ್ರು ನಿಗಮ, ಮಂಡಳಿಗೆ ಮೆಂಬರ್ ಮಾಡ್ಸೋಣ ಬಿಡು’.

‘ಹಂಗಾರೆ ಬಿಡಿಎ ಅಥವಾ ಕೆಪಿಎಸ್‌ಸಿ ಮೆಂಬರ್ ಮಾಡ್ಸಿ, ಅಡ್ಜಸ್ಟ್ ಮಾಡ್ಕಂತೀನಿ’.

‘ಏಯ್, ಅದೆಲ್ಲ ಏನು ಜುಜುಬಿ ಅನ್ಕಂಡ್ಯಾ? ಅವಕ್ಕೆಲ್ಲ ಭಾಳ ಡಿಮಾಂಡ್ ಐತೆ, ಬೇಕಾದ್ರೆ ಮುನ್ಸಿಪಾಲ್ಟಿ ನಾಮಿನಿ ಮಾಡಿಸ್ತೀನಿ ಹೋಗು’.

‘ಯಾಕೆ ಕಸ ಹೊಡಿಯಾಕಾ? ಅದೆಲ್ಲ ಏನೂ ಬೇಕಿಲ್ಲ. ಒಂದ್ ಕೆಲ್ಸ ಮಾಡಿ, ನನ್ನ ಡೆಪ್ಟಿ ಸ್ಪೀಕರ್ ಮಾಡಿಸ್ತೀರಾ? ಅದು ಯಾರ್ಗೂ ಬ್ಯಾಡಂತೆ ಈಗ’.

‘ಯಾಕೆ ಸ್ಪೀಕರ್‍ರೇ ಆಗಿಬಿಡು...’ ಸಚಿವರು ರಾಂಗಾದರು.

‘ಸ್ಪೀಕರ್‍ರಾ? ಒಂದೇ ಮನೇಲಿ ಇಬ್ಬಿಬ್ರು ಸ್ಪೀಕರ್ ಹೆಂಗ್ಸಾ? ನನ್ನೆಂಡ್ತಿ ಒಪ್ಪಲ್ಲ’.

‘ನಿನ್ ತಲೆಹರಟೆ ಎಲ್ಲ ಬ್ಯಾಡ, ಇಡು ಫೋನು’.

‘ಆತು ಬಿಡಿ, ನೀವು ಹಿಂಗೆಲ್ಲ ಮಾತಾಡಿದ್ರೆ ನಾನು ವಿರೋಧ ಪಕ್ಷದ ನಾಯಕ ಆಗ್ತೀನಿ. ವಿಧಾನಸಭೇಲಿ ಹೆಂಗೂ ಅದು ಖಾಲಿ ಐತಲ್ಲ’.

ಸಚಿವರು ಫೋನ್ ಕಟ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT