ಶುಕ್ರವಾರ, ಆಗಸ್ಟ್ 12, 2022
22 °C

ಚುರುಮುರಿ: ಪೊಲಿಟಿಕೋವಿಡ್

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಸಾ, ಈಗ ನಾಯಕತ್ವ ಬದಲಾವಣೆ ಮಾಡೊಕೋದ್ರೆ ಕೋವಿಡ್ಡಿಗಿಂತಾ ಜಾಸ್ತಿ ಅನಾವುತಾಯ್ತದೆ ಅಂದವ್ರೆ ಬುದ್ದಿಯೋರು!’ ಅಂತಂದೆ.

‘ಜುಲೈ 2019ರಲ್ಲಿ ಮೊದಲನೇ ವೈರಸ್ ಅಲೆ ಬಂದಿದ್ದಾಗ 17 ಜನ ವಲಸೆ ಸೋಂಕಿತರು ಬಾಂಬೇಲಿ ಕ್ವಾರಂಟೈನಾಗಿದ್ರಲ್ಲ! ಈಗ ಪಕ್ಸದೊಳಗೇ ರೂಪಾಂತರಿ ಬಂಡಾಯ ವೈರಸ್ ಬಂದದೆ’ ಅಂದ್ರು ತುರೇಮಣೆ.

‘ರಾಜಾವುಲಿ ಅಕ್ರಮ ವಲಸೆಗಾರರನ್ನ ದೇಶದಿಂದ ಆಚಿಗೆ ಕಳುಸ್ತೀನಿ ಅಂದದಲ್ಲಾ ಪಕ್ಸದ ಕತೆ ಹ್ಯಂಗೆ?’ ಯಂಟಪ್ಪಣ್ಣ ಕೇಳಿತು.

‘ಅವರು ಅಂದಿರದು 17 ಜನಕ್ಕಲ್ಲಾ ಕನಣೈ, ಬ್ಯಾರೇ ದೇಸದೋರಿಗೆ. ಈಗ ಎರಡನೇ ಅಲೆ ಅಮರಿಕ್ಯಂಡರೆ ಕೆಲವು ಸಾಸಕರಿಗೆ ಕೆಮ್ಮು, ಜ್ವರ, ಸುಸ್ತು ಕಾಣಿಸಿಗ್ಯತದೆ. ಈ ಲಕ್ಷಣ ಕಾಣಿಸಿಗ್ಯಂಡ ಪಕ್ಸದ ಸಾಸಕರಿಗೆ ಸೋಂಕು ಟೆಸ್ಟು ಮಾಡಬಕು, ಅವರ ಲೆವೆಲ್ಲಿಗೆ ತಕ್ಕಂಗೆ ಲಸಿಕೆ ಕೊಡಬಕು! ಸೋಂಕಿತರಿಗೆ ಐಸಿಯು ಅರೇಂಜಾಗಬಕು, ಯೋಗನಿರೋಧಕ ಶಕ್ತಿ ಜಾಸ್ತಿಯಾಗಕೆ ಅಮಲುಜನಕ ಕೊಡಬಕು! ಏನು ಒಂದಾ ಎರಡಾ ಪ್ರಾಬ್ಲಮ್ಮು’ ಅಂತ ವಿವರಿಸಿದರು.

‘ಸಾ, ಬೆಲ್ಲದೋರು ಡೆಲ್ಲಿಯಿಂದ ದೊಡ್ಡ ಡಾಕ್ಟ್ರು ಕರಕಬಂದು ಪಕ್ಸದ ಸಾಸಕರಿಗೆಲ್ಲಾ ಸೋಂಕು ಟೆಸ್ಟ್ ಮಾಡ್ಸಾರಂತೆ? ಮುಂದೆಂಗೆ?’ ಚಂದ್ರು ಕೇಳಿದ.

‘ಸೋಂಕಿತರು ಜಾಸ್ತಿಯಾಗದಂಗೆ ರಾಜಾವುಲಿ ಈಗ ನೋಡಿಕ್ಯಬಕು! ಬಂಡಾಯ ಶೀಲೀಂದ್ರದ ಸೋಂಕು ತಪ್ಪಿಸಕೆ ಸಾಸಕರಿಗೆ ಮಾಸ್ಕಾಕಿಸಿ, ವೈರಸ್ಸುಗಳಿಂದ ಕಾಪಾಡಕೆ ಮಠಗಳಲ್ಲಿ ಪುತ್ರ ವ್ಯವಹಾರ ನಡೀತಾ ಅದೆ! ಈ ಐನ್ ಟೇಮಲ್ಲಿ ಹುಲಿಯಾನ ಪಕ್ಸದೇಲಿ ಡಿಫೆಕ್ಷನ್‌ ರೇಟ್ ಜಾಸ್ತಿಯಾಗಬೌದು. ‘ನಾವು ಎತ್ಕೊಂಡೋರ ಕೂಸು ಕನಾ ಬನ್ನಿ’ ಅಂತ ಸಾಂದರ್ಭಿಕವಾಗಿ ಕುಮಾರಣ್ಣ ರೆಡಿಯಾಗಿರತದೆ’ ಅಂದ್ರು.

‘ಈ ಪಕ್ಷಪಾದ ಕಾಯಿಲೆಗೆ ಏನು ಹೆಸರು ಕೊಡಬೌದು ಸಾ?’ ಅಂತ ಕೇಳಿದೆ.

‘ಪೊಲಿಟಿಕೋವಿಡ್- 21.2.0 ಅನ್ನಬೌದು. ಸಾಸಕರ ಕಾಯಿಲೆ ನಿಯಂತ್ರಣಕ್ಕೆ ಬಂದರೂ ಪರೀಕ್ಷೆಗಳ ಸಂಖ್ಯೆ, ಐಸೋಲೇಶನ್ ಕಡಮೆ ಮಾಡಬಾರದು’ ಅಂದು ವ್ಯಾಧಿಪುರಾಣ ಮುಗಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.