ಬುಧವಾರ, ಸೆಪ್ಟೆಂಬರ್ 22, 2021
24 °C

ಚುರುಮುರಿ: ಫೈನಲ್ ಪಟ್ಟಿ

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

‘ಮಂತ್ರಿಗಳ ಫೈನಲ್ ಪಟ್ಟಿ ರೆಡಿ ಆಯ್ತೇನ್ರೀ?...’ ಸುಮಿಗೆ ಕುತೂಹಲ.

‘ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮುಗಿದು ಈಗ ಫೈನಲ್ ಪಟ್ಟಿಗೆ ಹೈಕಮಾಂಡ್ ಗ್ರೀನ್ ಸಿಗ್ನೇಚರ್ ಹಾಕಿದೆಯಂತೆ’ ಅಂದ ಶಂಕ್ರಿ.

‘ಸಿಎಂ ಆಯ್ಕೆ ಅವಿರೋಧವಾದರೂ ಮಂತ್ರಿಗಳ ಆಯ್ಕೆ ಅವಿರತ ಆಗೋಯ್ತಲ್ಲ. ಪಾಪ! ಆಕಾಂಕ್ಷಿಗಳು ವಾರದಿಂದ ನಿದ್ರೆ-
ನೆಮ್ಮದಿಯಿಲ್ಲದೆ, ಊಟ-ತಿಂಡಿ, ಕೆಲಸಕಾರ್ಯ ಬಿಟ್ಟು ದಿಲ್ಲಿ ಧ್ಯಾನ ಮಾಡಿಕೊಂಡಿದ್ದರು’.

‘ಶಾಸಕರ ಗಾತ್ರ, ಘನತೆ, ನಿಷ್ಠೆ-ಪ್ರತಿಷ್ಠೆಯನ್ನು ಅಳೆದು ತೂಗಿ ಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆಯಂತೆ’.

‘ಯಾರಿಗೆ ಯಾವ ಖಾತೆ ಅನ್ನುವುದೂ ತೀರ್ಮಾನವಾಗಿದೆಯೆ? ಇಲ್ಲಾಂದ್ರೆ ಖಾತೆಯ ಪಟ್ಟಿ ಹಿಡಿದು ಸಿಎಂ ಮತ್ತೆ ದೆಹಲಿಯಾನ ಮಾಡಬೇಕಾಗುತ್ತದೆ. ರಾಜ್ಯದ ಗಡಿಗೆ ಬಂದು ಕುಳಿತಿರುವ ಕೊರೊನಾ 3ನೇ ಅಲೆ ಒಳ ನುಗ್ಗುವುದರೊಳಗೆ ಮಂತ್ರಿಗಳಿಗೆ ಪದವಿ ಹಂಚಿ ಪಟ್ಟಾಭಿಷೇಕ ಮಾಡಬೇಕು’.

‘3ನೇ ಅಲೆಗಿಂತ ಬಂಡಾಯದ ಅಲೆ ಅಪಾಯಕಾರಿಯಂತೆ. ರಾಜ್ಯಭಾರ ವ್ಯಾಜ್ಯಭಾರ ಆಗಬಾರದು ಅಂತ ಬಂಡಾಯದ ಅಲೆ ನಿಯಂತ್ರಣಕ್ಕೆ ಲಸಿಕೆ, ಚಿಕಿತ್ಸೆ ಸಿದ್ಧಮಾಡಿಕೊಳ್ಳಲಾಗಿದೆಯಂತೆ’.

‘ಬಂಡಾಯಗಾರರಿಗೆ ಕಾಂಗ್ರೆಸ್‍ನವರು ಕಾಳು ಹಾಕಿ ಕಷ್ಟ ತಂದೊಡ್ಡುತ್ತಾರೆ ಅಂತನಾ?’

‘ಅಂಥಾ ಸಂಕಷ್ಟ ಕಾಲದಲ್ಲಿ ನಾವು ಕೈ ಹಿಡಿಯುತ್ತೇವೆ ಅಂತ ದೇವೇಗೌಡರು ಸಿಎಂಗೆ ವರ ನೀಡಿದ್ದಾರಂತೆ’.

‘ತಾವು ಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ ಅಂತ ಕೆಲ ನಾಯಕರು ಅಧಿಕಾರ ವೈರಾಗ್ಯ ಪ್ರಕಟಿಸಿದ್ದಾರಲ್ಲ’.

‘ಅವರಿಗೆ ಮಂತ್ರಿ ಸ್ಥಾನ ಸಿಗೋದು ಅನುಮಾನವಾಗಿ ಅವಮಾನದಿಂದ ತಪ್ಪಿಸಿ
ಕೊಳ್ಳಲು ಹೀಗೆ ಹೇಳಿರಬಹುದು’ ಅಂದ ಶಂಕ್ರಿ.

‘ಅದಲ್ಲದೆ, 3ನೇ ಅಲೆ ವಕ್ಕರಿಸುತ್ತಿದೆ. ಸರ್ಕಾರದ ದುಡ್ಡೆಲ್ಲಾ ಕೊರೊನಾ ಪಾಲಾಗುತ್ತದೆ. ಅನುದಾನ, ಅಭಿವೃದ್ಧಿ ಇಲ್ಲದೆ ಫುಡ್ ಕಿಟ್, ಮಾಸ್ಕ್, ಸ್ಯಾನಿಟೈಸರ್ ಹಂಚುವ, ಕಿಮ್ಮತ್ತಿಲ್ಲದ ಮಂತ್ರಿಗಿರಿ ಯಾಕೆ ಬೇಕು ಅಂತ ಸುಮ್ಮನಿ
ದ್ದಾರಂತೆ ಕಣ್ರೀ...’ ಅಂದಳು ಸುಮಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು