ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಸಾ ನಿಗಮ...

Last Updated 24 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ಎಂಎಲ್‍ಎ ಸಂಗಪ್ಪನವರ ಮಗಳು ಪದ್ಮಾವತಿಗೆ ಸಂಗೀತಾಭ್ಯಾಸ ನಡೀತಿತ್ತು. ಪದ್ಮಾವತಿ ‘ಸರಿಗಮಪ ಚಾಂಪಿಯನ್’ ಆಗಬೇಕೆಂದು ಸಂಗಪ್ಪನವರ ಪತ್ನಿ ಮಲ್ಲಮ್ಮನವರು ಹಟತೊಟ್ಟು ಸಂಗೀತ ಶಿಕ್ಷಕರೊಬ್ಬರನ್ನು ಮನೆಗೇ ಕರೆಸಿ ಮಗಳಿಗೆ ಸಂಗೀತಾಭ್ಯಾಸ ಮಾಡಿಸುತ್ತಿದ್ದರು.

ಕೋವಿಡ್ಡು, ಚಳಿಗಾಲ, ಬೋಂಡ ಭಕ್ಷಣೆ, ಅಕ್ಕಪಕ್ಕದವರ ಜೊತೆ ಜಗಳ ಎಲ್ಲಾ ಸೇರಿ ಪದ್ಮಾವತಿಯ ಗಂಟಲು ಕೆಟ್ಟು ಕೆರ ಹಿಡಿದುಹೋಗಿತ್ತು. ಅಂತೂ ಹಾಗೂ ಹೀಗೂ ಸಂಭಾಳಿಸಿ ‘ವಾತಾಪಿ ಗಣಪತಿಂ ಭಜೇ’ ಹೇಳಿಕೊಡುವಷ್ಟರಲ್ಲಿ ಪದ್ಮಾವತಿ ‘ವಾತಾಪಿ ಜೀರ್ಣೋಭವ’ ಎಂಬಂತೆ ಹ್ರಸ್ವ, ಸ್ವರ ಎಲ್ಲಾ ನುಂಗುವುದರಲ್ಲಿ ಅಪ್ಪನನ್ನು ಮೀರಿಸಿಬಿಟ್ಟಿದ್ದಳು.

ಎರಡನೇ ಕೀರ್ತನೆ ಶುರು ಮಾಡಿದರು. ‘ಧರ್ಮವೇ ಜಯವೆಂಬ ದಿವ್ಯಮಂತ್ರ...’ ಒಳಗಿನಿಂದ ಎಂಎಲ್‍ಎ ಸಾಹೇಬರು ಈಚೆ ಓಡಿಬಂದರು. ‘ರೀ! ಮೇಷ್ಟ್ರೇ, ಅದೆಲ್ಲಾ ಈಗ ವಿವಾದ, ಎರಡನೇ ಸಾಲು ‘ಮರ್ಮವನರಿತು ಮಾಡಲೇಬೇಕು ತಂತ್ರ’ ಅಷ್ಟು ಮಾತ್ರ ಹೇಳ್ಕೊಡಿ’.

ಮೇಷ್ಟ್ರು ತಲೆಯಾಡಿಸಿ ಅದನ್ನೇ ಆಲಾಪಿಸಿದರು. ಪದ್ಮಾವತಿಯೂ ಅದನ್ನು ಅಣಕಿಸುವಂತೆ ಪ್ರಲಾಪಿಸಿದಳು. ಅಮ್ಮ ಮಲ್ಲಮ್ಮ ಈಚೆ ಬಂದರು.

‘ಮೇಷ್ಟ್ರೇ, ಏಕಾಏಕಿ ಈ ಕೀರ್ತನೆ ಯಾಕೆ? ಮಾಜಾ ಇಳಿಯದ ಗಂಟಲಲ್ಲಿ ಪಿಜ್ಜಾ ತುರುಕಿ
ದಂತಾಗಿದೆ. ಮೊದ್ಲು ಸರಿಗಮ ಪದನಿಸ ಹೇಳ್ಕೊಡಿ’.

ಮೇಷ್ಟ್ರು ತಲೆಯಾಡಿಸಿ ‘ಸ ರಿ ಗ ಮಾ’ ಎಂದು ಎಳೆದರು. ಹಿಂದೆಯೇ ಪದ್ಮಾವತಿ ‘ಸಾ ನಿಗಮ’ ಎಂದು ಒದರಿದಳು. ಮೇಷ್ಟ್ರು ‘ಸ್ವರ ನುಂಗ್ ಬಿಡ್ತಿದೀಯಲ್ಲ... ಸ ನಿಗಮ ಅಲ್ಲಮ್ಮ, ಸರಿಗಮ...’ ತಿದ್ದಿದರು.

‘ರೀ ಮೇಷ್ಟ್ರೇ, ಅವಳು ಹೇಳ್ತಿರೋದೇ ಸರಿ. ಸ ರಿ ಗ ಮ, ಅಲ್ಲ, ‘ಸಾ ನಿಗಮ’ನೇ! ಮಂತ್ರಿಮಂಡಲ ವಿಸ್ತರಣೆ ಇಲ್ಲ ಅಂದ್ಮೇಲೆ ಅಳಿದುಳಿದ ನಿಗಮ, ಮಂಡಳಿನೇ ಗತಿ ತಾನೇ? ಏನೇ ಭಿನ್ನಸ್ವರ, ಅಪಸ್ವರ ಇದ್ರೂ ನುಂಗಿಕೊಂಡೇ ಇರ್ಬೇಕು’ ಎಂದು ಮೊಬೈಲ್ ಕಿವಿಗೆ ಹಚ್ಚಿ ‘ಸಾ ನಿಗಮದ ವಿಚಾರ ಎಲ್ಲಿಗೆ ಬಂತು?’ ಎಂದು ಟೋಪಿ ಕೊಡವಿಕೊಂಡು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT