ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಭಾಗ್ಯಾಸ್ತ್ರ ಪ್ರಯೋಗ

Last Updated 25 ಜನವರಿ 2023, 22:45 IST
ಅಕ್ಷರ ಗಾತ್ರ

‘ಭಾಗ್ಯವಂತರು... ನಾವು ಭಾಗ್ಯವಂತರು...’

‘ಸ್ವಲ್ಪ ರೇಡಿಯೊ ವಾಲ್ಯೂಮ್ ಕಡಿಮೆ ಮಾಡಿದ್ರೆ, ಪೇಪರ್‌ನಲ್ಲಿ ಬಂದಿರೋ ಭಾಗ್ಯಗಳ ಪಟ್ಟಿಯನ್ನ ಗಟ್ಟಿಯಾಗಿ ಓದಬಹುದು’.

‘ಏನ್ರೀ, ಭಾಗ್ಯಗಳ ಪಟ್ಟಿ?!’

‘ಚುನಾವಣೆ ಬಂದ್ರೆ ಮತದಾರನಿಗೆ ಭಾಗ್ಯದ ಕಾಲವೇ ಅಲ್ಲವೆ? ಪ್ರಜಾಪ್ರಭುತ್ವದಲ್ಲಿ ಮತದಾರ ‘ಪ್ರಭು’ವಾಗಿ ಮೆರೆಯೋದು ಚುನಾವಣೆ ಹತ್ತಿರ ಬಂದಾಗ ಮಾತ್ರ ತಾನೇ?’

‘ಏನೇನು ಭಾಗ್ಯಗಳಿವೆಯೋ ಆ ಪಟ್ಟಿಯಲ್ಲಿ?’

‘ಪ್ರವಾಸ ಭಾಗ್ಯ, ಸೀರೆ ಭಾಗ್ಯ, ಕುಕ್ಕರ್‌ ಭಾಗ್ಯ, ಮೂಗುತಿ ಭಾಗ್ಯ, ತೀರ್ಥಯಾತ್ರೆ ಭಾಗ್ಯ, ಶ್ರೀನಿವಾಸ ಕಲ್ಯಾಣ ಭಾಗ್ಯ... ಸಾಕಾ?’

‘ಭ್ರಷ್ಟಾಚಾರ ಬಿಟ್ಟು, ಆಲಸ್ಯ ತೊರೆದು, ನಿಯತ್ತಿನಿಂದ ಐದು ವರ್ಷ ಕೆಲಸ ಮಾಡಿಬಿಟ್ಟರೆ ಅದಕ್ಕಿಂತ ದೊಡ್ಡ ಭಾಗ್ಯ ಇನ್ಯಾವುದಿದೇರಿ? ಈ ತರಹ ಆಮಿಷ, ಖರೀದಿ... ಇದಕ್ಕೇನೂ ನೀತಿ ನಿಯಮ ಇಲ್ವಾ?’

‘ಇದೆ, ಚುನಾವಣೆ ಘೋಷಣೆ ಆಗಿ ನೀತಿ ಸಂಹಿತೆ ಜಾರಿಯಾಗಿಬಿಟ್ಟರೆ ಕಷ್ಟ, ಅದಕ್ ಮುಂಚೇನೆ ಬೇಳೆ ಬೇಯಿಸಿಕೊಂಡು ಬಿಡಬೇಕೂಂತ ಆಕಾಂಕ್ಷಿಗಳು, ಪಕ್ಷಗಳು ಭಾಗ್ಯಾಸ್ತ್ರ ಪ್ರಯೋಗಿಸ್ತಾಯಿರೋದು’.

‘ಎಲ್ಲ ಖರೀದಿ, ಹರಾಜು... ಕ್ರಿಕೆಟ್ ಆಟಗಾರರು, ಜನಪ್ರತಿನಿಧಿಗಳು, ಪಕ್ಷಗಳು ಎಲ್ಲ... ಈಗ ಮತದಾರರ ಮೂಗಿಗೆ ತುಪ್ಪ!’

‘ಮೂಗಿಗೆ ತುಪ್ಪ ಮಾತ್ರವಲ್ಲ, ಚಿನ್ನದ ಮೂಗುತೀನೆ ಸಿಗುತ್ತಂತೆ. ಎದುರಾಳಿಗಳ ಜೊತೆ ಪೈಪೋಟಿಗೆ ಬಿದ್ದು ‘ಅವರು ಮೂರು ಸಾವಿರ ಕೊಟ್ಟರೆ, ನಾವು ಆರು ಸಾವಿರ ಕೊಡ್ತೀವಿ ಅಂತ, ಅಷ್ಟೇ ಅಲ್ಲ, ಮೊಬೈಲ್‌ಗೆ ಒ.ಟಿ.ಪಿ ಬರುತ್ತಂತೆ, ಅದನ್ನ ತೋರಿಸಿದರೆ ಒಂದು ‘ಗಿಫ್ಟ್’ ಪ್ರತ್ಯಕ್ಷ!’

‘ಗಿಫ್ಟ್ ತಗೊಂಡವರು ತಮ್ಮ ನಿರ್ಧಾರ ಶಿಫ್ಟ್ ಮಾಡಿದರೆ?’

‘ಯಾತ್ರಾ ಸ್ಥಳ ಪ್ರವಾಸ ಇರೋದೇ ಅದಕ್ಕೆ. ದೇವರೆದುರು ಪ್ರಮಾಣಾನೂ ಮಾಡಿಸ್ಕೊತಾರಂತೆ’.

‘ಓಹ್! ಪ್ರಮಾಣದ ಪ್ರಾಮಾಣಿಕತೆ!’

‘ಯಾರಿಗೆ ಬೇಕ್ರೀ ಪ್ರಾಮಾಣಿಕತೆ, ‘ಸತ್ಯವಂತರಿಗಿದು ಕಾಲವಲ್ಲ’ ಅಂತ ದಾಸರೇ ಹೇಳಿದ್ದಾರಲ್ಲ!’

ರೇಡಿಯೊ ವಾಲ್ಯೂಮ್ ಜಾಸ್ತಿಯಾಗಿ ‘ಉಡುಗೊರೆಯೊಂದ ತಂದಾ, ನನ್ನಯ ಮತದಾನಂದಾ...!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT