ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಸಮುದ್ರ ಕೊರೆತ!

Last Updated 1 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

‘ಸಮುದ್ರದ ನಂಟಸ್ತನ, ಹೆಣ್ಣಿಗೆ ಬಡತನ’ ಪೇಪರ್ ಹಿಡಿದು ಗೊಣಗಿದ ಪರ್ಮೇಶಿ.

‘ಏನಾಯ್ತ್ರೀ?’ ಕೇಳಿದ್ರು ಪದ್ದಮ್ಮ.

‘ಒಡಿಶಾದಲ್ಲಿ ಸಮುದ್ರದ ಉಬ್ಬರಕ್ಕೆ ಹೆದರಿ ಒಂದು ಊರಿನ ಯುವಕರಿಗೆ ಹೆಣ್ಣೇ ಕೊಡ್ತಿಲ್ಲವಂತೆ’.

‘ಹೇಗ್ರೀ ಕೊಡ್ತಾರೆ? ಸಮುದ್ರದ ಅಬ್ಬರಕ್ಕೆ ಮನೇನೂ ಕೊಚ್ಕೊಂಡ್ ಹೋದ್ರೆ ಆ ಹೆಣ್ಣು ಮಕ್ಕಳ ಗತಿ ಏನು?’

‘ಸಮುದ್ರದ ಮಧ್ಯನೇ ಇರೋರಿಗೆ ಈಜಿ ಅಭ್ಯಾಸ ಇರುತ್ತೆ. ಸಂಸಾರ ಸಾಗರನ ಸುಲಭವಾಗಿ ಈಜ್ತಾರೆ. ಸಮಸ್ಯೆ ಇರೋದಿಲ್ಲ’.

‘ಇವರು ಸಮುದ್ರಜೀವಿಗಳು, ಉಪ್ಪುನೀರಿಗೆ ಹೆಂಡ್ತಿ ಅನ್ನೋ ಚಿನ್ನ ಬಣ್ಣ ಕಳ್ಕೊಳಲ್ವಾ?’

‘ಅದಕ್ಕೇನು? ಅವಾಗವಾಗ ಪಾಲಿಶ್ ಮಾಡಿದ್ರಾಯ್ತು. ಅವರು ದುಡ್ಡು, ಕಾಸು ಇಟ್ಕೊಂಡು ಅನುಕೂಲವಾಗೇ ಇದಾರೆ. ಸಮುದ್ರ ದಿಂದ ಮುತ್ತು, ಹವಳ ಹೊತ್ತು ತಂದು ಹೆಂಡ್ತಿ ಅನ್ನೋ ಚಿನ್ನಕ್ಕೆ ಪೋಣಿಸ್ತಾರಲ್ಲ, ಇನ್ನೇನು?’

‘ಸಮುದ್ರದ ಆರ್ಭಟಕ್ಕೆ ಒಗ್ಗಿ ಹೋಗಿರೋರು ಹೆಂಡ್ತಿ ಆರ್ಭಟಕ್ಕೆ ಸೊಪ್ಪು ಹಾಕ್ತಾರಾ?’

‘ಸೊಪ್ಪು ಹಾಕದಿದ್ರೆ ಏನಂತೆ? ಸಂಸಾರದ ದೋಣಿಗೆ ಹುಟ್ಟಂತೂ ಹಾಕ್ತಾರೆ’.

‘ಅಲೆಗಳ ಮೊರೆತ ಕೇಳಿ ಕಿವಿ ತೂತಾಗಿರುತ್ತೆ. ಹೆಂಡತಿಯರ ಬೇಕು ಬೇಡ ಇವರ ಕಿವಿಗೆ ಬೀಳುತ್ತಾ?’

‘ಕಿವಿ ಹಿಂಡಿ, ತಲೆ ಕೆಡಿಸೋ ಮಾತು ಕೇಳದಿದ್ರೆ ಯಾವ ನಷ್ಟನೂ ಇಲ್ಲ ಬಿಡು’.

‘ಆದ್ರೂ ಹೆಣ್ಣುಮಕ್ಕಳ ಕಣ್ಣೀರಿಗೆ ಬೆಲೆನೇ ಇರಲ್ಲ. ಎಷ್ಟು ಟಿಎಂಸಿ ಅಡಿ ಕಣ್ಣೀರು ಹಾಕುದ್ರೂ ಸಮುದ್ರದ ನೆರೆ ಅಂತ ಸುಮ್ಮನಾಗಿ ಬಿಡ್ತಾರೆ’.

‘ಆದರೂ ಬಂದರು ಇಲ್ಲ, ಲಂಗರು ಹಾಕೋ ಗೋಜಿಲ್ಲ, ಗಂಡಂದಿರು ಕಂಟ್ರೋಲಲ್ಲಿ ಇರ್ತಾರೆ’.

‘ಹೌದು, ಅವರು ದುಡ್ಡು ಕಾಸು ಇಟ್ಕೊಂಡು ಚೆನ್ನಾಗಿದಾರಲ್ಲ, ಎಲ್ಲಿಂದ ಬಂತು ಅಷ್ಟೊಂದು ದುಡ್ಡು?’

‘ದೋಣಿ ವ್ಯಾಪಾರದಿಂದ! ಸಮುದ್ರದ ಆರ್ಭಟದ ಊರಲ್ಲಿ ಹುಡುಗೀರೇ ಸಿಗಲ್ಲ ಅಂದ್ರೆ ಹುಡುಗರು ಮಾಡೋ ಮೊದಲ ಕೆಲಸ ಯಾವುದು? ಹುಡುಗೀರನ್ನ ಹುಡುಕೋಕೆ ದೋಣಿ ಕಟ್ಟೋದು ತಾನೆ? ಅದನ್ನೇ ಬಿಜಿನೆಸ್ ಮಾಡ್ಕೊಂಡಿದಾರೆ’ ಪರ್ಮೇಶಿ ಹುಬ್ಬು ಹಾರಿಸಿ ನಕ್ಕ. ಪದ್ದಮ್ಮ ಅವಾಕ್ಕಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT