ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬಡಾಯಿ ಬೆಟಾಲಿಯನ್!

Published 15 ಸೆಪ್ಟೆಂಬರ್ 2023, 23:30 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ನಗೆಕೂಟ, ಕ್ರೀಡಾಕೂಟದ ಮಾದರಿಯಲ್ಲಿ ನಮ್ಮೂರಿನ ಹಿರಿಯ ನಾಗರಿಕರೂ ಒಂದು ಕೂಟವನ್ನು ರಚಿಸಿಕೊಂಡು, ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ ಅದರ ಉದ್ಘಾಟನೆಗೆಂದು ಪಾರ್ಕ್‍ನಲ್ಲಿ ಸೇರಿದ್ದರು.

‘ನಾನು ಸಬ್ ಇನ್‍ಸ್ಪೆಕ್ಟರ್ ಆಗಿದ್ದಾಗ ಈಗಿನ ಎಂಎಲ್ಎ ಮರಿ ಪುಢಾರಿ ಆಗಿದ್ರು. ಒಂದು ಕೇಸಿನಲ್ಲಿ ಅವ್ರನ್ನ ನಾನು ಒದ್ದು ಒಳಗೆ ಹಾಕಿದ್ದೆ’ ಎಂದರು ಕೂಟದ ನಿಯೋಜಿತ ಗೌರವಾಧ್ಯಕ್ಷರು.

‘ಮಹಿಳಾ ಪಿ.ಸಿ. ಜೊತೆ ಅನುಚಿತವಾಗಿ ವರ್ತಿಸಿದಿರೀಂತ ಸಸ್ಪೆಂಡ್ ಆಗಿದ್ದಿರಂತೆ?!’ ಎಂದರು ಕಾರ್ಯಾಧ್ಯಕ್ಷರು, ನಿವೃತ್ತ ಸರ್ವೇಯರ್.

‘ಅದೆಲ್ಲ ಮೇಲಿನವರ ಹುನ್ನಾರ. ಎನ್‍ಕ್ವೈರೀಲಿ ನಾನು ನಿರ್ದೋಷಿಯಾಗಿ ಹೊರಬಂದೆನಲ್ರೀ!’

‘ಅಪ್ರೋಚ್ ರಸ್ತೆ ಸೇತುವೆಯ ಕಾಮಗಾರಿ ನಾನೇ ಸೂಪರ್‌ವೈಸ್ ಮಾಡಿದ್ದು’ ಎಂದರು ನಿವೃತ್ತ ಎಕ್ಸಿಕ್ಯುಟಿವ್ ಎಂಜಿನಿಯರ್, ಕೂಟದ ಅಧ್ಯಕ್ಷರು.

‘ಪರ್ಸೆಂಟೇಜ್ ಚೌಕಾಸಿಯಲ್ಲಿ ಆರು ತಿಂಗಳು ಕೆಲಸ ನಿಲ್ಲಿಸಿದ್ದಿರಂತೆ!’ ಉಪಾಧ್ಯಕ್ಷ ನಿವೃತ್ತ ಪಿಡಿಒ ಉವಾಚ.

‘ನನಗೆ ಆಗದವರು ಹಬ್ಬಿಸಿದ್ದ ಸುಳ್ಳು ಸುದ್ದಿ ಅದು. ಇಲಾಖಾ ಮಂತ್ರಿಗಳೇ ಅದನ್ನು ಉದ್ಘಾಟಿಸಲಿಲ್ವೆ?’

‘ನಮ್ಮೂರ ಕೆರೆ ಕಟ್ಟಲು ಜಮೀನು ಮುಳುಗಡೆ ಆದಾಗ ಹೈಕೋರ್ಟ್‍ವರೆಗೂ ಹೋರಾಡಿ, ರೈತರಿಗೆ ಯಥೇಚ್ಛ ಕಾಂಪೆನ್ಸೇಷನ್ ಕೊಡಿಸಿದ ತೃಪ್ತಿ ನನ್ನದು’ ಎಂದರು ಖಜಾಂಚಿ, ವಕೀಲರು.

‘ಪರಿಹಾರದಲ್ಲಿ ಅರ್ಧದಷ್ಟನ್ನು ಫೀಸ್ ಅಂತ ತಗೊಂಡಿರಂತೆ!’ ಚುಚ್ಚಿದರು ಕಾರ್ಯದರ್ಶಿ, ನಿವೃತ್ತ ಬಿಇಒ.

‘ಮೇಷ್ಟರು ಬಂದು ನಿಮ್ಮನ್ನು ಕಾಣೋವರೆಗೂ ಅವರ ಸಂಬಳದ ಬಿಲ್ ಆಗ್ತಿರಲಿಲ್ವಂತೆ!’ ವಕೀಲರ ತಿರುಗೇಟು.

‘ರಿಟೈರ್ ಆದಮೇಲೂ ಮನೇಲಿ ನಾನೇ ಯಜಮಾನ. ಯಾರೂ ನಾನು ಹಾಕಿದ ಗೆರೆ ದಾಟೋಲ್ಲ’ ಎಂದರು ನಿವೃತ್ತ ಹೆಡ್ಮಾಸ್ಟರ್, ಕೂಟದ ಜಂಟಿ ಕಾರ್ಯದರ್ಶಿ.

‘ನಿಮ್ಮ ಪೆನ್ಷನ್ ಬುಕ್, ಎಟಿಎಂ ಕಾರ್ಡ್ ನಿಮ್ಮ ಶ್ರೀಮತಿಯವರ ಕೈಲಿ ಅಂತಿದ್ರು!’

‘ಅಯ್ಯೋ, ಆ ಗುಂಪಿನಲ್ಲಿ ಆಕೇನೇ ಇದ್ದಂತಿದೆ, ನೋಡಿ ಅಲ್ಲಿ!’

ಹತ್ತಿರ ಬರುತ್ತಿದ್ದ ಮಹಿಳಾ ಗುಂಪಿನಲ್ಲಿ ತಮ್ಮ ತಮ್ಮ ‘ಗೃಹಮಂತ್ರಿ’ಗಳನ್ನು ಗುರುತಿಸಿದ ಆ ಬಡಾಯಿ ಬೆಟಾಲಿಯನ್ ಅಲ್ಲಿಂದ ಜಾಗ ಖಾಲಿ ಮಾಡಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT