ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ವೈರಸ್‌ ಪೈಲ್ಸ್!

Published 11 ಆಗಸ್ಟ್ 2023, 18:05 IST
Last Updated 11 ಆಗಸ್ಟ್ 2023, 23:33 IST
ಅಕ್ಷರ ಗಾತ್ರ

‘ಲೇಯ್, ನಮ್ ಕೈಪಕ್ಷದ ಶಾಸಕರಿಗೆ ಈ ಪರಿಸ್ಥಿತಿ ಬರಬಾರದಾಗಿತ್ತು’ ಎಂದು ಹರಟೆಕಟ್ಟೇಲಿ ಲೊಚಗುಟ್ಟಿದ ಗುದ್ಲಿಂಗ.

‌‘ಈಗ ಅವರೇ ಆಳೋರಲ್ವಾ? ಅವರಿಗೇನ್ ಕಮ್ಮಿಯಾಗಿದೆ?’ ಕೇಳಿದ ಕಲ್ಲೇಶಿ.

‘ಅಯ್ಯೋ ಹಿಂದೆ ಜನತಾದರ್ಶನದಲ್ಲಿ ಸಿಎಂ ನೋಡಕ್ಕೆ, ಕಷ್ಟ ಯೋಳ್ಕಳಕ್ಕೆ ಜನ ವೋಯ್ತಿದ್ರು. ಈಗ ಶಾಸಕರೇ ಸಿಎಂ ದರ್ಶನ ಮಾಡಿ ತಮ್ ಕಷ್ಟ ಯೇಳ್ಕಳೋ ಪರಿಸ್ಥಿತಿ ಬಂದದೆ’.

‘ಕೆಲವು ಸಚಿವರು ತಾ ತಾ ಅಂತಾವ್ರೆ ಅನ್ನೋ ಆರೋಪ ಬಂದೈತೆ. ಜೊತೆಗೆ ಎಲ್ಲಾ ಕಡೆ ಬರ ಬೀಳಂಗಾಗಿ ಕಾಲಿಟ್ಟಲ್ಲಿ ಕೂಳೆ, ಕೈ ಇಟ್ಟಲ್ಲಿ ಕೊಳೆ ಅನ್ನೋ ಅಂಗಾಗದೆ. ಇಂಗಾದ್ರೆ ಮುಂದಿನ್ ದೊಡ್ ಎಲೆಕ್ಷನ್ ಎಂಗ್ ಗೆಲ್ಲದು ಅಂತ ತಾರಾತಿಗಡಿ ಯೋಳ್ಕಳಕ್ಕೆ ಸಿಎಂ ತಾವ ಬಂದಿದ್ರಂತೆ’.

‘ಹ್ಞೂಂಕಣ್ಲಾ! ಪರಿಸ್ಥಿತಿ ಇರ್ವಾರಾ ಕೆಟ್ಟೋಗದಂತೆ. ಡಮಾರ್ ಅಂದಿರೋ ಒಂದು ಟ್ರಾನ್ಸ್‌ಫಾರ್ಮರ್‍ರೂ ಕೊಡಕ್ಕಿಲ್ಲ ಅಂದ್ರೆ ಎಂಗೆ? ಟ್ರಾನ್ಸ್‌ಫಾರ್ಮರ್‍ರೇ ಇಲ್ಲ ಅಂದ್ರೆ ಗೃಹಜ್ಯೋತಿ ಉರ್ಸಾದು ಎಂಗೆ? ನಮ್ಗೆ ಅನ್ಯಾಯ ಆದಂಗಲ್ವಾ ಅಂತ ಫಾರ್ಮರ್ಸು ಕೇಳ್ತಾವ್ರಂತೆ’ ಎಂದ ಮಾಲಿಂಗ.

‘ಟ್ರಾನ್ಸ್‌ಫಾರ್ಮರ್ಸ್‌ದು ಒಂದು ಸಂಕಟ, ಫಾರ್ಮರ್ಸುದು ಒಂದು ವ್ಯಥೆ, ಟ್ರಾನ್ಸ್‌ಫರ್ಸ್‌ದೂ ಅದ್ವಾನ ಆಗದೆ ಅಂತ ಗುಲ್ಲೆದ್ದದೆ’.

‘ಹ್ಞೂಂಕಣ್ಲಾ, ನಾವ್ ಕೇಳಿದ್ ಪ್ರಾಪರ್ಟಿ ಡೆವಲಪ್‍ಮೆಂಟ್ ಆಫೀಸರ್‌ಗಳನ್ನೇ (ಪಿಡಿಒ) ಆಯಕಟ್ಟಿನ ಜಾಗಕ್ಕೆ ಆಕುಸ್ಕಬೇಕು ಅಂತ ಪೈಪೋಟಿಗೆ ಬಿದ್ದವ್ರೆ’.

‘ರಸ್ತೆದೂ ಅಂಗೇ ಆಗದಂತೆ. ಗುಡ್ ರೋಡಿರ್ಲಿ, ಮಡ್ ರೋಡ್ ಮಾಡಕ್ಕೂ ಅನು ದಾನ ಬತ್ತಿಲ್ಲ ಅಂತ ಸಾಸಕರು ಗರಂ ಆಗವ್ರಂತೆ’.

‘ಗ್ಯಾರಂಟಿ ಅಂತ ಬೇಕಾದಷ್ಟು ಸವಲತ್ತು ಕೊಟ್ಟಿಲ್ವಾ? ಸ್ವಲ್ಪ ಅಡ್ಜೆಸ್ಟ್ ಮಾಡ್ಕಬೇಕಪ್ಪ?’

‘ಅದೆಂಗಾಯ್ತದೆ? ಬಸ್ಸಲ್ಲಿ ಫ್ರೀ ಬುಟ್ಟಿದೀವಿ ಅಂತ ಗುಂಡಿ ಗೊಟ್ರು ಇರೋ ರಸ್ತೇಲಿ ಬಸ್ ಎತ್ತಾಕ್ಬುಟ್ರೆ ಸ್ತ್ರೀ ಶಕ್ತಿ ಸುಮ್ಕೆ ಇರುತ್ತಾ?’

‘ಇವೇ ಇಂಗಾಗವೆ, ಇನ್ನು ಕುಮಾರಣ್ಣ ಜೇಬಲ್ಲಿ ಮಡಿಕ್ಕಂಡಿರೋ ಪೆನ್‍ಡ್ರೈವ್‍ನಲ್ಲಿ ಅದ್ಯಾವ್ಯಾವ ಪಲ್ಟಿ ಹೊಡ್ಸೋ ಸರ್ಕಸ್‌ ಫೈಲ್ಸ್ ಇವೆಯೋ ದೇವರಿಗೇ ಗೊತ್ತು’.

‘ಅವು ಸರ್ಕಸ್‌ ಫೈಲ್ಸ್ ಅಲ್ಲ, ಅಂಗೇ ಅಮರಿಕೊಳ್ಳೋ ವೈರಸ್‌ ಪೈಲ್ಸ್’ ಎಂದ ಪರ್ಮೇಶಿ. ಎಲ್ಲಾ ಗೊಳ್ಳೆಂದು ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT