ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಶ್ವೇತಪತ್ರ ಪುರಾಣ

Last Updated 2 ಜುಲೈ 2020, 19:30 IST
ಅಕ್ಷರ ಗಾತ್ರ

ಹರಟೆಕಟ್ಟೆಯಲ್ಲಿ ದುಬ್ಬೀರ ತೆಪರೇಸಿಯನ್ನು ಕೇಳಿದ ‘ಗುರೂ... ಈ ಶ್ವೇತಪತ್ರ ಅಂದ್ರೇನು? ಅದೇನೋ ಯಡ್ಯೂರಪ್ಪರತ್ರ ಐತಂತೆ, ಸಿದ್ರಾಮಣ್ಣ ಅದ್ನ ಕೊಡು ಕೊಡು ಅಂತ ಕೇಳ್ತದಾರಂತೆ. ಏನದು?’

‘ಏನೋಪ್ಪ... ಯಾವುದೋ ಹಳೆ ಪತ್ರ ಇರಬೇಕು. ಲೇ ಗುಡ್ಡೆ, ನಿಂಗೇನರ ಗೊತ್ತಾ?’ ತೆಪರೇಸಿ ಗುಡ್ಡೆ ಕಡೆ ನೋಡಿದ.

‘ಥೋ... ಅಷ್ಟೂ ಗೊತ್ತಿಲ್ಲೇನ್ರಲೆ, ಶ್ವೇತ ಬರೆದ ಪತ್ರ ಶ್ವೇತಪತ್ರ, ಗೀತ ಬರೆದಿದ್ರೆ ಅದು ಗೀತಪತ್ರ. ಒಳ್ಳೆ ದಡ್ಡರ ಸಾವಾಸ ಆತಪ...’ ಗುಡ್ಡೆ ನಕ್ಕ.

‘ಲೇಯ್ ಅದು ನಮಗೂ ಗೊತ್ತು. ಪಾಯಿಂಟ್ ಏನಪ ಅಂದ್ರೆ, ಶ್ವೇತ ಅಂದ್ರೆ ಯಾರು? ಅವ್ರು ಯಡ್ಯೂರಪ್ಪರಿಗೆ ಯಾಕ್ ಪತ್ರ ಬರೆದ್ರು? ಅದನ್ನ ಸಿದ್ರಾಮಣ್ಣ ಯಾಕೆ ಕೇಳ್ತದಾರೆ? ಅದು ಗೊತ್ತಿದ್ರೆ ಬೊಗಳು...’ ದುಬ್ಬೀರಂಗೆ ಸಿಟ್ಟು ಬಂತು.

‘ನನ್ ಪ್ರಕಾರ ಅದೇನು ಅಂಥ ದೊಡ್ಡ ಪತ್ರ ಅಲ್ಲ ಅನ್ಸುತ್ತಪ್ಪ. ಇಲ್ಲದಿದ್ರೆ ನ್ಯೂಸ್ ಚಾನೆಲ್‍ನೋರು ಇಷ್ಟೊತ್ತಿಗೆ ರಾಡಿ ಎಬ್ಬಿಸಿರೋರು’ ತೆಪರೇಸಿ ತಿಪ್ಪೆ ಸಾರಿಸಿದ.

‘ನೋಡ್ರಲೆ, ಶ್ವೇತಪತ್ರ ಅಂದ್ರೆ ವೈಟ್ ಪೇಪರ್. ಕೊರೊನಾದ ಖರ್ಚು ವೆಚ್ಚದ ಲೆಕ್ಕ ಕೊಡಿ, ಶ್ವೇತಪತ್ರ ಹೊರಡಿಸಿ ಅಂತ ಸಿದ್ರಾಮಣ್ಣ ಕೇಳ್ತದಾರೆ, ತಿಳ್ಕಳಿ’ ಪರ್ಮೇಶಿ ಸ್ಪಷ್ಟಪಡಿಸಿದ.

‘ಹಂಗಿದ್ರೆ ಅದ್ನ ‘ಕೊರೊನಾ ಪತ್ರ’ ಅಂತ ಕೇಳಬೇಕಿತ್ತು. ಶ್ವೇತಪತ್ರ ಅಂತ ಯಾಕೆ ಕೇಳಬೇಕು?’ ದುಬ್ಬೀರ ಪಟ್ಟು ಬಿಡಲಿಲ್ಲ.

ಗುಡ್ಡೆಗೆ ರೇಗಿಹೋಯಿತು ‘ಏಯ್, ಏನ್ ತೆಲಿ ತಿಂತೀಯಲೆ, ಇರು ಅದ್ಯಾರು ಶ್ವೇತ ಅಂತ ನಿನ್ ಹೆಂಡ್ತಿಗೇ ಕೇಳಿಬಿಡ್ತೀನಿ’ ಎಂದವನೆ ಪಟ್ ಅಂತ ದುಬ್ಬೀರನ ಹೆಂಡ್ತಿಗೆ ಫೋನ್ ಮಾಡಿ ಸ್ಪೀಕರ್ ಆನ್ ಮಾಡಿದ ‘ಚೆಲ್ವಕ್ಕ, ಇಲ್ಲಿ ನಿನ್ ಗಂಡ ಅದ್ಯಾರೋ ಶ್ವೇತ, ಪತ್ರ ಅಂತ ತೆಲಿ ತಿಂತಿದಾನೆ. ಯಾರದು ಶ್ವೇತ?’ ಅಂದ.

‘ಶ್ವೇತಾನಾ? ಯಾರಿಗ್ಗೊತ್ತು, ಇವತ್ತು ಮನೆಗೆ ಬರ‍್ಲಿ, ಐತೆ ಮಾರಿ ಹಬ್ಬ’ ಎಂದು ಫೋನ್ ಕಟ್ ಮಾಡಿದಳು ಚೆಲ್ವಿ. ದುಬ್ಬೀರ ಕಕ್ಕಾಬಿಕ್ಕಿಯಾದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT