ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬುಡಕ್ಕೇ ಸಂಚಕಾರ!

Last Updated 3 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

‘ಡ್ರಗ್ಸ್ ಅಂದ್ರೆ ಔಷಧಿ ಅಲ್ವೇನ್ರಿ?’ ಎಂದಳು ಶ್ರೀಮತಿ. ‘ಹೌದು, ಬೆಳ್ಳಂಬೆಳಗ್ಗೆ ಆ ವಿಷ್ಯ ಯಾಕೆ?’ ಎಂದು ಕೇಳಿದೆ.

‘ದೊಡ್ಡವರ ಡ್ರಗ್ಸ್ ದಂಧೆ ಅಂತ ಪೇಪರಲ್ಲಿ ಬರ್ತಿದೆಯಲ್ಲಾ?’

‘ಅದು ಸಾಮಾನ್ಯ ಔಷಧಿಯಲ್ಲ. ಹೊಟ್ಟೆ ತುಂಬಿದೋರು ನಶೆ ಏರಿಸಿಕೊಳ್ಳೋಕೆ ತಗೊಳ್ಳೋ ನಿಷೇಧಿತ ವಸ್ತು’.

‘ಒಲಿಂಪಿಕ್ಸ್‌ನಲ್ಲಿ ಡ್ರಗ್ಸ್ ತಗೊಂಡಿದ್ದಾಂತ ಕೆನಡಾದ ಅಥ್ಲೀಟ್‍ನನ್ನು ಹೊರಹಾಕಿದ್ರಲ್ಲಾ’.

‘ಹೌದು, ಇದು ಕೋಟ್ಯಂತರ ರೂಪಾಯಿಯ ಕಾಳಸಂತೆ ವ್ಯಾಪಾರ. ಬೆಂಗಳೂರಲ್ಲೂ ಎಗ್ಗಿಲ್ಲದೆ ನಡೀತಿದೆ. ಯುವಕರೊಡನೆ ಹೋಗುವ ಯುವತಿಯರಿಗೆ ಆ ಪಾರ್ಟಿಗಳಲ್ಲಿ ಉಚಿತ ಪ್ರವೇಶವಂತೆ, ನಾವೂ ಒಂದು ಕೈ ನೋಡೋಣ್ವೇ?’

ಹೆಂಡತಿ ನನ್ನತ್ತ ಬೀಸಿ ಎಸೆದ ವ್ಯಾನಿಟಿ ಬ್ಯಾಗಿನ ಗುರಿ ತಪ್ಪಿಸಿಕೊಂಡು ಹೇಳಿದೆ, ‘ತಮಾಷೆಗೆ ಹಾಗೆಂದೆ ಮಾರಾಯ್ತಿ... ಆದ್ರೆ ಆ ಅದ್ರಲ್ಲಿ ಮಹಿಳಾ ಮಣಿಯರ ಪಾತ್ರವೇ ಹೆಚ್ಚಂತೆ. ಜೈಲಿನಲ್ಲಿದ್ದ ಸಿನಿಮಾ ನಟಿಯರು ಜಾಮೀನಿನ ಮೇಲೆ ಹೊರಗೆ ಬಂದಿದಾರೆ!’

‘ಹೌದ್ಹೌದು, ಇದ್ರಲ್ಲಿ ಮೀಸೆ ಹೊತ್ತೋರು ಯಾರೂ ಇಲ್ಲವೇ ಇಲ್ಲ ಅಲ್ವೆ? ಮಾಜಿ ಮಂತ್ರಿಗಳ ಮಗ, ರಿಯಲ್ ಎಸ್ಟೇಟ್ ಉದ್ಯಮಿ ಡ್ರಗ್ಸ್ ಪಾರ್ಟಿ, ಆಫ್ಟರ್ ಪಾರ್ಟಿ ನಡೆಸುತ್ತಿದ್ರಂತಲ್ಲಾ. ಇವ್ರಲ್ಲದೆ ಪೊಲೀಸ್ ಆತಿಥ್ಯ ಪಡೆದು ಈಗ ಹೊರಬಂದಿರೋರು 18-20 ಜನ ಯಾರು?’

ಬುಡಕ್ಕೇ ಸಂಚಕಾರ ಬಂದದ್ದರಿಂದ ವಿಷಯಾಂತರಿಸಿದೆ, ‘ತಪ್ಪಾಯ್ತು ಮೇಡಮ್, ನೀವು ದೊಡ್ಡೋರು. ಪ್ಯಾರಾಲಿಂಪಿಕ್ಸ್ ಶೂಟಿಂಗ್‍ನಲ್ಲಿ ನಮ್ಮ ಅವನಿ ಲೇಖರ ಮೊದಲ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದರಲ್ಲಾ! ಕಾರು ಅಪಘಾತದಲ್ಲಿ ದೇಹದ ಅರ್ಧಭಾಗ ನಿಷ್ಕ್ರಿಯವಾಗಿದ್ದರೂ ಛಲದಿಂದ ಸಾಧನೆ ಮಾಡಿದ ದಿಟ್ಟಗಾತಿ’.

‘ಆಕೆಯ ಕೋಚ್ ಕನ್ನಡತಿ, ಮಾಜಿ ಶೂಟರ್ ಸುಮಾ ಶಿರೂರು, ಗೊತ್ತಾ? ಮಹಿಳಾ ಪಟುಗಳಾದ ಪಲಕ್ ಕೊಹ್ಲಿ ಮತ್ತು ಪ್ರಾಚಿ ಯಾದವ್ ಅವ್ರಿಗೂ ಪದಕ ಗ್ಯಾರಂಟಿ. ಹೇಗಿದೆ ಮಹಿಳಾಮಣಿಯರ ಮಹತ್ವ?’ ಎಂದಳು ನನ್ನಾಕೆ. ನಾನು ಮೂಗಿನ ಮೇಲೆ ಬೆರಳಿಟ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT