ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ತ್ರಿಕೋಣ ಪಾಲಿಸಿ

Last Updated 22 ಸೆಪ್ಟೆಂಬರ್ 2021, 19:38 IST
ಅಕ್ಷರ ಗಾತ್ರ

‘ಅದೇನೊ ಮುಕ್ತ ಭಾರತ್...’ ಅಂತ ಹೇಳ್ತಾ ಇದ್ದರಲ್ಲ, ಏನು? ಯಾರು?’ ಎಂದು ಹೆಂಡತಿ ಕೇಳಿದಳು. ‘ಅದು ಸಾಕ್ಷಾತ್ ಮೋದೀಜಿ. ಕಾಂಗ್ರೆಸ್‌ ಮುಕ್ತ್ ಭಾರತ್’ ಎಂದೆ. ‘ಅದನ್ನು ಕಾಂಗ್ರೆಸ್‍ನೋರೇ ಡು ಇಟ್ ಯುವರ್‌ಸೆಲ್ಫ್ ತರಹ ಮಾಡ್ಕೊತಿದಾರೆ. ಆದರೆ ಬೆಂಗಳೂರು ರಸ್ತೆ ಗುಂಡಿ ಮುಕ್ತ್ ಯಾವಾಗ ಆಗುತ್ತೆ?’ ಎಂದಳು.

‘ಬೇಕಾದಷ್ಟು ಸಲ ಆಗಿದೆಯಲ್ಲ. ಮೇಯರ್ ಗಡುವುಗಳು ನೀಡಿದ್ದರು ಗುಂಡಿ ಮುಚ್ಚೋದಿಕ್ಕೆ. ಬೆಂಗಳೂರು ಉಸ್ತುವಾರಿ ತಮ್ಮದೇ ಅಂದುಕೊಂಡಿದ್ದ ಹಳೇ ಮಂತ್ರಿಗಳು ಗಡುವು ನೀಡಿದ್ದರು. ಹೊಸಾ ಮುಖ್ಯಮಂತ್ರಿಗಳೂ ಹಳೇ ಗುಂಡಿಗಳ ಬಗ್ಗೆ ಗಮನ ಹರಿಸಿದ್ದಾರೆ. ಬಿಬಿಎಂಪಿ ಕಮಿಷನರ್ ಗಡುವು ನೀಡ್ತಲೇ ಇರ್ತಾರೆ’ ಎಂದೆ.

‘ಗುಂಡಿಗಳು ಹಾಗೇ ಇವೆಯಲ್ಲಾ?’ ಎಂದಳು ಬೇಸರದಿಂದ.

‘ರಸ್ತೆ ಅಂಡ್ ಗುಂಡಿ ಲೈಕ್ ಇಡ್ಲಿ ಅಂಡ್ ಸಾಂಬಾರ್, ಪೂರಿ ಅಂಡ್ ಪಲ್ಯ, ಸರ್ಕಾರಿ ಆಫೀಸ್ ಅಂಡ್ ಲಂಚ ಗೊ ಟುಗೆದರ್’ ಎಂಬ ಸರಳ ವಿವರಣೆ ನೀಡಿದೆ.

‘ಗುಂಡಿನೇ ಬೀಳದೆ ಇರೋ ಅಂತಹ ರಸ್ತೆ ಯಾಕೆ ನಿರ್ಮಿಸಬಾರದು? ಲಾಲೂಜಿ ಜೈಲಿಗೆ ಹೋಗೋ ಮುಂಚೆ ಹೇಳ್ತಾ ಇದ್ರಲ್ಲಾ ಹೇಮಾಮಾಲಿನಿ ಕೆನ್ನೆ ತರಹ...’

‘ಅಂತಹ ರಸ್ತೆ ನಿರ್ಮಿಸಲು ಕಂಟ್ರಾಕ್ಟರೇನು ಮೂರ್ಖನೆ?’ ಎಂದೆ.

‘ಯಾಕೆ?’

‘ಒಂದು ಟೆಂಡರ್ ಹಣದಲ್ಲಿ ಅವನು, ಆ ಏರಿಯಾ ರಾಜಕಾರಣಿ ಮತ್ತು ಇಂಜಿನಿಯರ್ ಬದುಕಬೇಕು’ ಎಂದೆ.

‘ಲಿವ್ ಅಂಡ್ ಲೆಟ್ ಲಿವ್ ಪಾಲಿಸಿ ತಾನೆ?’ ಎಂದಾಗ ಅವಳಿಗೆ ರಾಜಕಾರಣಿ- ಅಧಿಕಾರಿ- ಕಂಟ್ರಾಕ್ಟರ್ ತ್ರಿಕೋಣ ಅರ್ಥವಾದಂತೆ ಅನ್ನಿಸಿತು.

‘ಕರೆಕ್ಟ್ ಮೇಡಂ. ಅವರಿಬ್ಬರಿಗೂ ತಿನ್ನಿಸಿದ ಮೇಲೆ ಉಳಿದ ಹಣದಲ್ಲಿ ಕಂಟ್ರಾಕ್ಟರ್ ತನ್ನ ಲಾಭ ಮುರಿದುಕೊಂಡು ಸಿಗುವ ಹಣದಲ್ಲಿ ರಸ್ತೆ ನಿರ್ಮಿಸಿದರೆ ಗುಂಡಿ ಏಳದೇ ಇನ್ನೇನು ಇರಲು ಸಾಧ್ಯ?’ ಎಂದೆ.

‘ಈಗ ಅದನ್ನು ಮುಚ್ಚಲು ಮತ್ತೆ ಕಾಂಟ್ರ್ಯಾಕ್ಟ್. ಮತ್ತೆ ಮೂರು ಪಾಲು. ರಸ್ತೆ ಇದ್ದ ಮೇಲೆ ಗುಂಡಿ ಗ್ಯಾರಂಟಿ ಬಿಡಿ’ ಎಂದು ಮಾತು ಮುಗಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT