ಶನಿವಾರ, ಮೇ 28, 2022
27 °C

ಚುರುಮುರಿ: ಜಂಟಿ ಖಾತೆ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

‘ರೀ... ಇವತ್ತಿನ್ ಪೇಪರ್ ಓದಿದ್ರಾ?’ ಮಡದಿ ಮುಗುಳುನಗೆ ಬೆರೆಸಿದ ಬಿಸಿ ಬಿಸಿ ಕಾಫಿ ತಂದು ಕೊಡುತ್ತ ಕೇಳಿದಳು.

ಓದಿದ್ನಲ್ಲ, ಏನ್ಸಮಾಚಾರ? ಗೋಲ್ಡ್ ರೇಟ್ ಇಳೀತಾ ಅಥವಾ ಯಾವುದಾದ್ರು ಸೇಲ್ ಹಾಕಿದಾರಾ?’

‘ಥು ಆ ಸುದ್ದಿ ಅಲ್ಲ ಕಣ್ರಿ...’

‘ಮತ್ತೆ? ಇನ್ಯಾವುದು? ಮುಂದೆ ಮುಖ್ಯ ಮಂತ್ರಿ ಆಗೋರ ಸುದ್ದಿನೋ ಮುಖ್ಯಮಂತ್ರಿ ಇಳಿಸೋರ ಸುದ್ದಿನೋ?

‘ನಿಮ್ತಲೆ, ದರಿದ್ರ ರಾಜಕೀಯದ್ದಲ್ಲ ಕಣ್ರಿ, ಬೇರೆ...’

‘ಓ... ಕೊರೊನಾ ಕೇಸ್‌ ಇಳೀತಾ ಐತಲ್ಲ ಅದಾ ಅಥವಾ ಹೊಸ ವ್ಯಾಕ್ಸಿನ್ ಬಂದೇತಲ್ಲ ಅದರ ಸುದ್ದಿನಾ?’

‘ಅದೂ ಅಲ್ಲ... ಈಗ ಕಾಫಿ ಕುಡೀರಿ, ಹೊಳೆಯುತ್ತೆ’.

‘ಓ... ಗೊತ್ತಾತು ಬಿಡು, ಟ್ವಿಟರ್‍ನೋರು ಭಾರತದ ಭೂಪಟ ಬದಲಾಯಿಸಿದಾರಲ್ಲ ಅದಾ? ನಾವು ಟ್ವಿಟರ್‌ನೇ ಬದಲಾಯಿಸಿದ್ರಾತು ಬಿಡು...’

‘ಅದೂ ಅಲ್ಲ, ಡ್ರೋನ್‌ ದಾಳಿದೂ ಅಲ್ಲ, ಎಸ್ಸೆಲ್ಸಿ ಪರೀಕ್ಷೆದೂ ಅಲ್ಲ...’

‘ಮತ್ತಿನ್ಯಾವುದೆ? ಸಿನಿಮಾ ಸುದ್ದಿನಾ ಅಥವಾ ಅದ್ಯಾರೋ ಮಾಜಿ ಕಾರ್ಪೊರೇಟರ್‌ನ ಕೊಲೆ ಮಾಡಿದಾರಲ್ಲ ಅದಾ?’

‘ಬೆಳಿಗ್ಗೆ ಎದ್ರೆ ಪೇಪರ್ ಹೆಡ್ಡಿಂಗ್‍ನಿಂದ ಹಿಡಿದು ಕೊನೇಪುಟದ ಕೊನೇ ಸಾಲುತಂಕ ಓದ್ತೀರ, ನಾನೇಳಿದ್ದು ಒಂದು ಸುದ್ದಿ ನಿಮ್ಮ ಕಣ್ಣಿಗೆ ಬಿದ್ದಿಲ್ಲ ಅಲ್ವ?’ ಮಡದಿಗೆ ಸಿಟ್ಟು ಬಂತು.

‘ಕೋಪ ಬ್ಯಾಡ, ಅದ್ಯಾವುದು ಸುದ್ದಿ ನೀನೇ ತೋರಿಸು ಎಂದೆ. ಕೈಯಿಂದ ಖಾಲಿ ಕಪ್ ಕಸಿದುಕೊಂಡ ಮಡದಿ ಪೇಪರ್ ತಗೊಂಡು ‘ದಂಪತಿಗಳಿಗೆ ಆಸ್ತಿ ಜಂಟಿ ಖಾತೆ’ ಎಂಬ ಸುದ್ದಿ ಮುಂದಿಡಿದಳು.

‘ಓ ಇದಾ? ಈಗೇನು ನಿಂಗೂ ನನ್ನ ಎಲ್ಲ ಆಸ್ತಿಲೂ ಜಂಟಿ ಖಾತೆ ಬೇಕು ತಾನೆ? ನಾಳೆನೇ ಮಾಡ್ಸೋಣ ಬಿಡು’ ಎಂದೆ.

‘ಥ್ಯಾಂಕ್ಯೂರೀ, ನಿಮಗೆ ಇನ್ನೊಂದ್ ಕಪ್ ಬಿಸಿ ಕಾಫಿ ತರ್ತೀನಿ ಇರಿ’ ಎಂದು ಖುಷಿಯಿಂದ ಒಳಗೋಡಿದಳು.

‘ಬರೀ ಆಸ್ತಿ ಅಷ್ಟೇ ಅಲ್ಲ ಕಣೆ, ಸಾಲದ ಖಾತೆನೂ ಇದೆ’ ಎಂದದ್ದು ಅವಳಿಗೆ ಕೇಳಿಸಲೇ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.