ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಅನಾತ್ಮ ಕಥನ

Last Updated 6 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಸಾಸಕರು ಇದ್ದ ಪಾರ್ಟಿ ಬುಟ್ಟು ಅತಂತ್ರರಾಗಿದ್ದರು. ಎಲೆಕ್ಷನ್ ಟೈಮಿಗೆ ದೊಡ್ಡ ಪಕ್ಸಕ್ಕೆ ಜಂಪು ಮಾಡಿ ಟಿಕೆಟ್ ತಗಂಡು ಇನ್ನೊಂದು ಸಾರಿ ಎಂಎಲ್‍ಎ ಆಗಿ ಹಣಾನುಬಂಧ ಹೆಚ್ಚಿಸಿಗ್ಯಬಕು ಅಂತ ಬಲು ಆಸೆ ಇತ್ತು.

‘ಮತದಾರ ಪ್ರಭುಗಳನ್ನ ಕೇಳಿ ತೀರ್ಮಾನ ತಗಂಡಂಗೆ ಮಾಡಮು. ಐನೂರು ಐನೂರು ಕೊಟ್ಟು ಜನ ಹಿಡಕಬಂದು ದೊಡ್ಡ ಸಭೆ ಏರ್ಪಾಡು ಮಾಡಿ’ ಅಂತ ಬೆಂಬಲಿಗರಿಗೆ ಫರ್ಮಾನು ಕೊಟ್ಟರು. ಸಭೆ ಆರಂಭ ಆಯ್ತು.

‘ನನ್ನ ಮತದಾರ ದೇವರುಗಳೇ, ನನ್ನ ಆತ್ಮಕಥೆ ಕೇಳ್ರಿ. ಡಿ ಪಾರ್ಟಿಯೋರು ನನ್ನನ್ನ ಆಚೆಗೆ ವತ್ಲಿಸಿ ನಮ್ಮ ಕಣದೇಲೇ ಮೆದೆ ಹಾಕ್ಯಬುಟ್ಟವ್ರೆ. ಈಗ ನಾನು ಯಾವ ಪಕ್ಸಕ್ಕೋಗಿ ಹೊಟ್ಟೆ ಹೊರೆಯನೆ. ನೀವೇ ಆಡ್ರು ಕೊಡಬಕು!’ ಸಾಸಕರು ಕಣ್ಣಾಗ ನೀರು ಹಾಕ್ಯಂದರು.

‘ಅಯ್ಯೋ ಪಾಪ, ನಮ್ಮ ಸಾಸಕರ್ನ ನೋಡಿರ್ಲಾ ಹಸುಮಗಿನಂಗೆ ಕಣ್ಣೀರು ಕೆಡಗ್ತಾವರೆ!’ ಅಂತ ಜನ ಮರುಗಿದರು.

‘ಅಣ್ಣೋ ಬೂತು ಯಾಗ ಮಾಡ್ಸಿ ವೋಟೆಲ್ಲಾ ಒಳಿಕ್ಕಾಕಬುಡು’ ಅಂತ ಕೆಲವರು ಕೂಗಿದರೆ, ಇನ್ನು ಕೆಲವರು ‘ಯಣ್ಣಾ ನೀನು ಸಿ ಪಾರ್ಟಿಗೋ ಬಿ ಪಾರ್ಟಿಗೋ ಸೇರು. ನಿನ್ನ ಆತ್ಮಕತೆಗೆ ಒಳ್ಳೆ ಬೆಲೆ ಸಿಕ್ತದೆ’ ಅಂತಿಮ ಸಲಹೆ ಕೊಟ್ಟರು.

‘ಸಾ, ಇವರ ಬೂತುಗಣಿತಕ್ಕೆ ಆತ್ಮ ಎಲ್ಲದೆ?’ ಅಂತ ಆಶ್ಚರ್ಯಪಟ್ಟೆ.

‘ಪಕ್ಷಾಂತರ ಮಾಡಿ ಮಾಡಿ ರಾಜಕಾರಣಿಗಳ ಆತ್ಮವೇ ಕಳೆದೋಗಿ ಅನಾತ್ಮ ಕಥನ ಆಗ್ಯದೆ ಕಪ್ಪಾ. ಲೋಡುಗಟ್ಟಲೆ ಮೈಸೂರು ಸ್ಕ್ಯಾಂಡಲ್ ಸೋಪು ಹಾಕಿ ಉಜ್ಜಿ ತೊಳೆದ್ರೂ ಅಂಟಿರೋ ಪಾಪಕರ್ಮ ಕಳೆಯಕುಲ್ಲ. ಎಂತಾ ಆರೋಪ ಬಂದ್ರೂ ‘ನೀವೇನು ಸತುವಂತ್ರಾ? ನಿಮ್ಮ ಸರ್ಕಾರ ಇದ್ದಾಗ ನೀವೇನು ಮಾಡಿಲ್ವಾ? ನಾವು ಪ್ಯಾರ್‍ದರ್ಶಕ ತನಿಖೆ ಮಾಡಿ ಸತ್ಯ ಆಚಿಗೆ ತರತೀವಿ’ ಅಂತ ಗಾಳೀಗಂಟಲು ಮಾಡ್ತರೆ’ ತುರೇಮಣೆ ರಾಜಕೀಯದ ದದ್ದು ಮಡಕೆ ಬಡಿದು ತೋರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT