ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬ್ಯಾಲೆನ್ಸ್ಡ್‌ ಬಜೆಟ್

Last Updated 9 ಮಾರ್ಚ್ 2021, 19:31 IST
ಅಕ್ಷರ ಗಾತ್ರ

‘ಈ ಸಾಲಿನ ಬಜೆಟ್ ಸಪ್ಪೆ ಅಂತೆ, ಶುಗರ್‌ಲೆಸ್ ಒಬ್ಬಟ್ಟು ಅಂತ ವಿರೋಧ ಪಕ್ಷದವರು ಟೀಕೆ ಮಾಡ್ತಿದ್ದಾರಂತೆ ಕಣ್ರೀ...’ ಎಂದಳು ಸುಮಿ.

‘ವಿರೋಧ ಪಕ್ಷದವರು ನಮ್ಮ ಪಕ್ಕದ ಮನೆಯವರು ಇದ್ದಂತೆ. ಸಣ್ಣ ಹುಳುಕು ಸಿಕ್ಕಿದರೂ ಹರಿದು ಹಬ್ಬ ಮಾಡಿಬಿಡ್ತಾರೆ. ಸರ್ಕಾರ, ಸಂಸಾರ ನಡೆಸುವವರಿಗೆ ಮಾತ್ರ ನಿಭಾಯಿಸುವ ಕಷ್ಟ ಅರ್ಥ ಆಗೋದು’ ಅಂದ ಶಂಕ್ರಿ.

‘ಸಂಸಾರಕ್ಕೆ ಯುಗಾದಿ ಹಬ್ಬ ಇದ್ದಂತೆ ಸರ್ಕಾರಕ್ಕೆ ಬಜೆಟ್ ಅಲ್ಲವೇನ್ರೀ? ತೋರಣ ಕಟ್ಟಿ, ಹೂರಣ ಕುಟ್ಟಿ ಆನಂದವಾಗಿ ಆಚರಿಸಬೇಕು ಅಲ್ವಾ?’

‘ನಿಜ, ಸಾಲ ತಂದು ಹಬ್ಬ ಮಾಡಿದಂತಾಗಿದೆ ಸರ್ಕಾರದ ಬಜೆಟ್ ಪರಿಸ್ಥಿತಿ. ಕೊರೊನಾ ವಕ್ಕರಿಸಿದಾಗಿನಿಂದ ಯಾವ ಸಂಸಾರ, ಯಾವ ಸರ್ಕಾರ ದುಡ್ಡು-ಕಾಸು ಇಟ್ಟುಕೊಂಡು ಸುಖವಾಗಿವೆ ಹೇಳು?’ ಶಂಕ್ರಿಯ ಅನುಭವದ ಮಾತು.

‘ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದ ಜಿಎಸ್‍ಟಿ ಬಾಬ್ತು ಬಂದಿದ್ದರೆ ರಾಜ್ಯ ಸರ್ಕಾರದ ಬಜೆಟ್ಟಿಗೆ ಇಷ್ಟೊಂದು ಕಷ್ಟ ಆಗುತ್ತಿರಲಿಲ್ಲವಂತೆ’.

‘ಕೇಂದ್ರ ಸರ್ಕಾರ ಅನ್ನೋದು ದೊಡ್ಡ ಸಂಸಾರ. ಖರ್ಚು, ಕಷ್ಟ ಜಾಸ್ತಿಯಾಗಿ ಅದೇ ಕಣ್ಣುಬಾಯಿ ಬಿಡ್ತಿದೆಯಂತೆ... ಕೇಂದ್ರ ಸರ್ಕಾರದತ್ತ ಕೈ ಚಾಚುವ ಬದಲು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅಂತ ರಾಜ್ಯ ಸರ್ಕಾರ ದೊಡ್ಡ ಯೋಜನೆಗಳನ್ನು ಕಡಿತಗೊಳಿಸಿ, ಸಣ್ಣ ಪ್ರಯೋಜನಗಳಿಗೆ ಆದ್ಯತೆ ನೀಡಿದೆಯಂತೆ’.

‘ಕಡಿತ ಅಂದ್ರೆ ಏನ್ರೀ? ದುಡ್ಡಿಲ್ಲ ಅಂತ ಮಕ್ಕಳಿಗೆ ಬರೀ ಅಂಗಿ ಕೊಡಿಸಿ ಚೆಡ್ಡಿ ಕಡಿತಗೊಳಿಸೋದಾ? ಹೆಂಡ್ತಿಗೆ ಹೊಸ ಸೀರೆ ಬದಲು ಹಳೆ ಸೀರೆಗೆ ಮ್ಯಾಚಿಂಗ್ ಬ್ಲೌಸ್ ಕೊಡಿಸೋದಾ?’ ಗಂಡನ ಯೋಗ್ಯತೆ ಅಳೆದು ಹೇಳಿದಳು ಸುಮಿ.

‘ಹೌದು, ಆಯಾ ಇಲ್ಲದೆ, ವ್ಯಯ ಮಾಡಲಾಗದೆ, ಸರ್ಕಾರದ ಆಯವ್ಯಯ ಅಯೋಮಯವಾಗಿದೆಯಂತೆ ಪಾಪ...!’ ಅಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT