ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಅಭಿವೃದ್ಧಿ– ಸಮೃದ್ಧಿ

Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಅಕ್ಷರ ಗಾತ್ರ

‘ಮಳ್ಳಿ ಮಳ್ಳಿ, ಮಂಚಕ್ಕೆ ಎಷ್ಟು ಕಾಲು?’

‘ಮೂರು ಮತ್ತೊಂದೇ ಕಣೋ ಮಳ್ಳ. ಕಾಲ ಬದಲಾದರೂ ಮಂಚದ ಕಾಲು ಬದಲಾಗಿಲ್ಲ’.

‘ಮಳ್ಳಿ, ಸರ್ಕಾರದ ಬೋರ್ಡ್ ಚೇರ್ಮನ್ ಕುರ್ಚಿಗೂ ನಾಲ್ಕೇ ಕಾಲು ಅಲ್ವಾ?’

‘ಹಾಗೇನಿಲ್ಲ. 360 ಡಿಗ್ರಿ ತಿರುಗುವ, ತಲೆ ತಿರುಗಿಸುವ ಒಂಟಿ ಕಾಲಿನ ಕುರ್ಚಿಗಳೂ ಇವೆ. ತೆಪ್ಪಗೆ ಕೂರುವ ನಾಲ್ಕು ಕಾಲಿನ ಕುರ್ಚಿಗಳೂ ಇವೆ’.

‘ಕಾಲುಗಳಿಗಿಂತ, ಬೋರ್ಡ್ ಕುರ್ಚಿ ಪಡೆಯಲು ಎಷ್ಟು ಜನರ ಕಾಲು ಹಿಡಿಯಬೇಕು ಎಂಬ ಲೆಕ್ಕ ಮುಖ್ಯ ಅಲ್ವೇನೆ ಮಳ್ಳಿ?’

‘ಹೌದೋ ಮಳ್ಳ, ಮೊದಲ ಕಂತಿನಲ್ಲಿ ಶಾಸಕರು ಸುಖಾಸೀನದ ಬೋರ್ಡ್ ಕುರ್ಚಿಗಳನ್ನು ಪಡೆದಿದ್ದಾರೆ. ಮುಂದಿನ ಕಂತಿನಲ್ಲಿ ಹಂಚಿಕೆಯಾಗಲು ಇನ್ನಷ್ಟು ‘ಅಭಿವೃದ್ಧಿ’ ನಿಗಮ, ‘ಸಮೃದ್ಧಿ’ ಮಂಡಳಿ ಕುರ್ಚಿಗಳು ಖಾಲಿ ಇವೆ. ಅವುಗಳನ್ನು ಪಡೆದುಕೊಳ್ಳಲು ಕುರ್ಚಿ ಫೈಟ್ ಶುರುವಾಗಿದೆ ಕಣೋ ಮಳ್ಳ’.

‘ಹೋರಾಟ ಮಾಡದಿದ್ದರೆ ಕುರ್ಚಿ ಸಿಗೋದಿಲ್ವಾ?’

‘ಅತ್ತುಕರೆದು ಕುರ್ಚಿ ದಕ್ಕಿಸಿಕೊಳ್ಳುವ ಧರ್ಮಾತ್ಮರ ಕಾಲ ಇದಲ್ಲ. ಲಾಬಿ ಮಾಡಿ ಲಾಭ ಮಾಡಿಕೊಳ್ಳಬೇಕು ಇಲ್ಲವೇ ಹೋರಾಡಿ ಗೆಲ್ಲಬೇಕು’.

‘ಉಪವಾಸ ಸತ್ಯಾಗ್ರಹ ಮಾಡಿದರೆ ಕುರ್ಚಿ ಸಿಗಬಹುದು ಅಲ್ವಾ?’

‘ಗಾಂಧೀಜಿ ಕಾಲದ ಶಾಂತಿ, ಸಂಯಮದ ಸತ್ಯಾಗ್ರಹಕ್ಕೆ ಈಗ ಕಿಮ್ಮತ್ತು ಇಲ್ಲವಂತೆ. ಅನಿರ್ದಿಷ್ಟಾವಧಿ ಧರಣಿ, ಪ್ರತಿಕೃತಿ ದಹನ, ಬಸ್ಸಿಗೆ ಬೆಂಕಿ ಹಚ್ಚುವುದು, ವಾಹನಗಳನ್ನು ಚಚ್ಚುವುದೂ ಈಗ ಓಲ್ಡ್ ಸ್ಟೈಲ್ ಹೋರಾಟವಂತೆ. ಸೋಷಿಯಲ್ ಮೀಡಿಯಾಗಳಲ್ಲಿ ಟಿಆರ್‌ಪಿ ಹೆಚ್ಚುವಂತಹ ವಿಭಿನ್ನ ಹೋರಾಟ ಮಾಡಿ ಗಮನ ಸೆಳೆಯಬೇಕಂತೆ’.

‘ಲೇಟೆಸ್ಟಾಗಿ, ಫ್ಲೆಕ್ಸ್ ಹರಿಯುವ, ಧ್ವಜಬಲ ಪರಾಕ್ರಮ ಪ್ರದರ್ಶನದ ಹೋರಾಟಗಳು ಗಮನ ಸೆಳೆಯುತ್ತಿವೆ. ಮಹಾತ್ಮರು ಹುತಾತ್ಮರಾದ ನಂತರ ಜನರ ಪರಿಸ್ಥಿತಿ, ಅಭಿರುಚಿಗೆ ತಕ್ಕಂತೆ ಹೋರಾಟಗಳ ಸ್ವರೂಪವೂ ಬದಲಾಗುತ್ತಿದೆ ಕಣೆ ಮಳ್ಳಿ...’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT