ಭಾನುವಾರ, ಆಗಸ್ಟ್ 1, 2021
27 °C

ಚುರುಮುರಿ | ಪಿಪಿಇ ಫ್ಯಾಷನ್ಸ್

ಸಿ.ಎನ್.ರಾಜು Updated:

ಅಕ್ಷರ ಗಾತ್ರ : | |

Prajavani

ಲಾಕ್‍ಡೌನ್‌ನಲ್ಲಿ ಡೇ-ನೈಟ್ ಧರಿಸಿದ್ದ ನೈಟಿ ಹಳತಾಗಿ, ಹೊಸ ನೈಟಿ ಕೊಳ್ಳಲು ಅನು, ಗಂಡ ಗಿರಿ ಜೊತೆ ಬಂದಳು.

‘ವೆಲ್‍ಕಮ್ ಮೇಡಂ, ನಮ್ಮಲ್ಲಿ ಸ್ಟಾಕ್ ಕ್ಲಿಯರೆನ್ಸ್ ಆಫರ್ ಇದೆ...’ ಅಂಗಡಿಯವ ಸ್ವಾಗತಿಸಿ ಹೇಳಿದ ‘ನೈಟಿ ಬೆಲೆಯ ರೇಷ್ಮೆ ಸೀರೆಗಳಿವೆ, ತೋರಿಸಲಾ?’

‘ಬೇಡರೀ, ರೇಷ್ಮೆ ಸೀರೆ ಉಟ್ಟು ಎಲ್ಲಿಗೆ ಹೋಗಬೇಕು? ಕೊರೊನಾ ಕಾಟದಲ್ಲಿ ಮದ್ವೆ, ಗೃಹಪ್ರವೇಶ ಯಾವ ಫಂಕ್ಷನ್ನೂ ಇಲ್ಲ, ಶವ
ಸಂಸ್ಕಾರಕ್ಕೂ ಕರೆಯೋರಿಲ್ಲ’ ಎಂದಳು ಅನು.

‘ರೇಷ್ಮೆ ಸೀರೆಗೆ ಬೇಡಿಕೆ ಕಮ್ಮಿಯಾಯ್ತೆ?!’ ಗಿರಿಗೆ ಖುಷಿ.

‘ಮಾಸ್ಕ್ ಹಾಕಿಕೊಂಡು ಮುಖ ತೋರಿಸದ ಸ್ಥಿತಿಯಲ್ಲಿದ್ದೀವಿ, ರೇಷ್ಮೆ ಸೀರೆ ಉಟ್ಟು ಯಾರಿಗೆ ತೋರಿಸಬೇಕಾಗಿದೆ ಹೇಳಿ’ ಅಂದಳು ಅನು.

‘ನಿಜ, ಕೊರೊನಾ ಕಂಟ್ರೋಲಿಗೇ ಬರ್ತಿಲ್ಲ, ಮಿತಿಮೀರಿದರೆ ಎಲ್ಲರೂ ಪಿಪಿಇ ಕಿಟ್ ಧರಿಸಿ ಬಾಳಬೇಕಾಗುತ್ತದೆ. ಕಿಟ್ ಒಳಗಿನ ಒಡವೆ-ವಸ್ತ್ರ, ಅಂದ-ಅಲಂಕಾರ ಯಾರಿಗೆ ಕಾಣುತ್ತೆ ಹೇಳಿ...’ ಅಂಗಡಿಯವ ನಕ್ಕ.

‘ಚಿನ್ನದ ಬೆಲೆ ಕಮ್ಮಿ ಆಗಬೇಕು’ ಅನು ಆಸೆಪಟ್ಟಳು.

‘ಎಲ್ಲವೂ ಬೆಲೆ ಕಳೆದುಕೊಳ್ತವೆ, ಖಾಕಿ, ಖಾದಿ, ಕಾವಿಗಳೂ ಬದಲಾಗಿ ಪಿಪಿಇ ಕಿಟ್ ಮನುಷ್ಯರ ಕಾಮನ್ ಡ್ರೆಸ್‌ಕೋಡ್‌ ಆಗಿಬಿಡಬಹುದು’.

‘ಆಗಲಿಬಿಡಿ, ಭೇದಭಾವ ಹೋಗಿ ಸಮಾನ ಸಮಾಜ ನಿರ್ಮಾಣವಾಗುತ್ತದೆ’ ಅಂದ ಗಿರಿ, ‘ಹೀಗಾದ್ರೆ ನಿಮ್ಮ ಬಟ್ಟೆ ವ್ಯಾಪಾರದ ಗತಿ?’ ಅಂತ ಕಾಳಜಿ ತೋರಿದ.

‘ಇರುವ ಸ್ಟಾಕ್ ಕ್ಲಿಯರ್ ಮಾಡಿ, ಬಟ್ಟೆ ಜಾಗದಲ್ಲಿ ಪಿಪಿಇ ಕಿಟ್ ಜೋಡಿಸಿ, ಅಂಗಡಿ ಬೋರ್ಡನ್ನು ಪಿಪಿಇ ಫ್ಯಾಷನ್ಸ್ ಅಂತ ಚೇಂಜ್ ಮಾಡ್ತೀವಿ’.

‘ಮಾಡಿ, ನಿಮ್ಮ ಅಂಗಡಿಗೇ ಬರ್ತೀವಿ, ಒಳ್ಳೇ ಕಲರ್, ಗ್ರ್ಯಾಂಡ್ ಬಾರ್ಡರ್, ಲೇಟೆಸ್ಟ್ ಡಿಸೈನಿನ ಪಿಪಿಇ ಕಿಟ್‍ಗಳನ್ನು ಖರೀದಿ ಮಾಡ್ತೀವಿ...’ ಎನ್ನುತ್ತಾ ಗಿರಿ, ಅನು ಹೊರಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು