ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮಾಸ್ಕ್ ಮದುವೆ

Last Updated 29 ಜೂನ್ 2021, 19:25 IST
ಅಕ್ಷರ ಗಾತ್ರ

ಅಂಗೈಗೆ ಸ್ಯಾನಿಟೈಸರ್ ತೀರ್ಥ ಹಾಕಿಸಿಕೊಂಡು ಶಂಕ್ರಿ, ಸುಮಿ ಕಲ್ಯಾಣಮಂಟಪ ಪ್ರವೇಶಿಸಿದರು.

ಮದುವೆ ಮನೆಯ ಅಲಂಕೃತ ಹೆಂಗಸರ ಸಡಗರದೊಳಗೆ ಸುಮಿ ಸೇರಿಕೊಂಡಳು.

ಅಲ್ಲಿದ್ದ ಬೆರಳೆಣಿಕೆ ಜನ, ಮಾತನಾಡಿದರೆ ಮುತ್ತು ಉದುರುತ್ತೆ, ಸ್ಮೈಲ್ ಕೊಟ್ಟರೆ ಸೋಂಕು ಹರಡುತ್ತೆ ಎನ್ನುವಂತೆ ಒಬ್ಬರಿಗೊಬ್ಬರು ಕಂಡೂ ಕಾಣದವರಂತೆ ನಾಲ್ಕಾರು ಕುರ್ಚಿಗಳ ಅಂತರ ಕಾಪಾಡಿಕೊಂಡು ಕುಳಿತಿದ್ದರು. ಶಂಕ್ರಿಯೂ ಕುರ್ಚಿ ಹಿಡಿದು, ಮಕ್ಕಳನ್ನು ಹಿಡಿದು ಕುಳಿತ.

ಮಕ್ಕಳ ಮೂತಿಯಿಂದ ಜಾರುತ್ತಿದ್ದ ಮಾಸ್ಕ್ ಸರಿಪಡಿಸುತ್ತಾ, ಆಗಾಗ ಉದುರುವ ಮಕ್ಕಳ ಚೆಡ್ಡಿ, ಪ್ಯಾಂಟ್‍ನ ಬೆಲ್ಟ್ ಬಿಗಿ ಮಾಡುತ್ತಾ, ಅವರ ‘ಒಂದಾ, ಎರಡಾ’ಗಳನ್ನು ನಿಭಾಯಿಸಿಕೊಂಡಿದ್ದ.

ಭಾರದ ರೇಷ್ಮೆ ಸೀರೆ, ಒಡವೆಯ ಹೊರೆಗೆ ಸುಮಿ ಬೆವತಿದ್ದಳು, ಮಾಸ್ಕ್ ತೆಗೆದು ಬೆವರು ಒರೆಸಿಕೊಳ್ಳುವಾಗ ಹಚ್ಚಿದ್ದ ಲಿಪ್‌ಸ್ಟಿಕ್ ಕರಗಿ ಮುಖ-ಮೂತಿಗೆ ಹರಡಿತ್ತು. ಮಾಸ್ಕ್ ತೆಗೆದರೆ ಮಾನ ಹೋಗುತ್ತೆ ಅಂತ ಶಂಕ್ರಿ ಸನ್ನೆ ಮಾಡಿ ಮಾಸ್ಕ್ ಹಾಕಿಸಿ ಮಾನ ಕಾಪಾಡಿದ್ದ.

ಶಂಕ್ರಿಯೂ ಮಾಸ್ಕ್‌ನಲ್ಲಿ ಮಾನ ಮುಚ್ಚಿಕೊಂಡಿದ್ದ. ‘ಮದುವೆ ಮನೆಯಲ್ಲಿ ಮಾಸ್ಕ್ ಬಿಚ್ಚಕೂಡದು, ಜನ ಆಡಿಕೊಂಡು ನಗ್ತಾರೆ’ ಅಂತ ಸುಮಿ ಮನೆಯಲ್ಲೇ ಎಚ್ಚರಿಕೆ ನೀಡಿದ್ದಳು. ಪ್ರಾಯ ಕಾಪಾಡಿಕೊಳ್ಳಲು ಶಂಕ್ರಿ ತಲೆ ಕೂದಲಿಗೆ ಹೇರ್ ಡೈ ಹಚ್ಚಿಕೊಳ್ಳುವಾಗ ಕಿವಿ ಪಕ್ಕದಿಂದ ಕಪಾಳಕ್ಕೆ ಹರಿದುಬಂದ ಡೈ ಮಾರ್ಕ್ ಎದ್ದುಕಾಣುತ್ತಿತ್ತು. ಸಾಲದ್ದಕ್ಕೆ, ಮೀಸೆಗೆ ಹಚ್ಚುವಾಗ ತುಟಿ, ಮೂಗಿನ ತುದಿ, ಕೆನ್ನೆಗೂ ತಾಕಿದ್ದ ಡೈನ ಕಲೆ ಉಳಿದಿತ್ತು. ಇಂಥಾ ವಿರೂಪ ಮರೆಮಾಚಲು ಶಂಕ್ರಿ ಮಾಸ್ಕ್ ಬಿಚ್ಚಿರಲಿಲ್ಲ.

ಕೊನೆ ಹಂತವಾಗಿ ಶಂಕ್ರಿ, ಸುಮಿ ವಧು-ವರರಿಗೆ ಮುಯ್ಯಿ ಕೊಟ್ಟರು. ‘ಮುಖ ಕಾಣಲಿ ಮಾಸ್ಕ್ ತೆಗೆಯಿರಿ...’ ಎಂದು ಫೋಟೊಗ್ರಾಫರ್ ಹೇಳಿದರೂ ಕೇಳದೆ ಮಾಸ್ಕ್ ಮರೆಯಲ್ಲೇ ಫೋಟೊಗೆ ಸ್ಮೈಲ್ ಕೊಟ್ಟರು.

ಮಾಸ್ಕ್ ತೆಗೆದು ಊಟ ಮಾಡಿ, ಮದುವೆ ಸಡಗರ ಮುಗಿಸಿ ಮನೆದಾರಿ ಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT